ಬೆಂಗಳೂರು: ಫೆಂಗಲ್ ಚಂಡಮಾರುತದ (Cyclone Fengal) ಪರಿಣಾಮ ಕರ್ನಾಟಕದ ಒಳನಾಡಿನ ಮೇಲೂ ಆಗಿದೆ. ಬೆಂಗಳೂರು (Bengaluru news) ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದೆ. ಕೋಲಾರ, ಮೈಸೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ (Holiday) ನೀಡಲಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದ ಹಲವು ಕಡೆ ಮಳೆಯಾಗುತ್ತಿದೆ. ವಾತಾವರಣ ಕೂಲ್ ಕೂಲ್ ಆಗಿದೆ. ಬೆಂಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ. ಫೆಂಗಲ್ ಸೈಕ್ಲೋನ್ ಎಫೆಕ್ಟ್ನಿಂದಾಗಿ ರಾಜಧಾನಿ ಊಟಿಯತಾಗಿದೆ. ಬೆಳಿಗ್ಗೆಯಿಂದ ಜಿಟಿ ಜಿಟಿ ಮಳೆಯಿಂದಾಗಿ ಕೂಲ್ ಕೂಲ್ ವಾತಾವರಣ ನಿರ್ಮಾಣವಾಗಿದೆ. ತುಂತುರು ಮಳೆಗೆ ಸಿಟಿ ಮಂದಿ ಮನೆ ಸೇರಿಕೊಂಡಿದ್ದಾರೆ.
ಕೋಲಾರದಲ್ಲಿ ರಜೆ: ಫೆಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ಜಡಿ ಮಳೆ ಮತ್ತು ವಿಪರೀತ ಚಳಿ ಹಿನ್ನೆಲೆ ಕೋಲಾರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಇಂದು ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಆದೇಶ ಹೊರಡಿಸಿದ್ದಾರೆ. ರಜೆಯನ್ನು ಮತ್ತೊಂದು ರಜಾ ದಿನದಲ್ಲಿ ತರಗತಿ ನಡೆಸಿ ಸರಿದೂಗಿಸುವಂತೆ ಡಿಸಿ ಅಕ್ರಂ ಪಾಷಾ ಸೂಚನೆ ನೀಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕೋಲಾರದಲ್ಲಿ ಮೋಡ ಕವಿದ ವಾತಾವರಣ ಮತ್ತು ಶೀತಗಾಳಿ ಇದ್ದು, ನಿನ್ನೆ ರಾತ್ರಿಯಿಂದ ಜಿಟಿ ಜಿಟಿ ಮಳೆ ಆಗಿದೆ.
ಮೈಸೂರಿನಲ್ಲಿ ರಜೆ: ಫೆಂಗಲ್ ಚಂಡಮಾರುತದಿಂದ ಜಡಿ ಮಳೆ, ವಿಪರೀತ ಚಳಿ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೂಚನೆ ಮೇರೆಗೆ ಶಾಲೆಗಳಿಗೆ ರಜೆ ಘೋಷಿಸಿ ಡಿಡಿಪಿಐ ಎಸ್.ಟಿ.ಜವರೇಗೌಡ ಆದೇಶ ಹೊರಡಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ರಜೆ: ಚಿಕ್ಕಬಳ್ಳಾಪುರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ನಾಳೆ ಎಂದಿನಂತೆಯೇ ಶಾಲಾ ಕಾಲೇಜು ಇರಲಿದೆ. ಈ ಬಗ್ಗೆ ಟಿವಿ9ಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಪ್ರತಿಕ್ರಿಯಿಸಿದ್ದು, ಬೆಂಗಳೂರು ನಗರದ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಇಲ್ಲ. ಮಕ್ಕಳನ್ನು ಎಚ್ಚರಿಕೆಯಿಂದ ಶಾಲೆಗೆ ಕಳುಹಿಸುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Cyclone: ಫೆಂಗಲ್ ಚಂಡಮಾರುತ: ನಾಳೆ ಶಾಲಾ ಕಾಲೇಜುಗಳಿಗೆ ರಜೆ