Sunday, 17th November 2024

Daali Dhananjaya: ನಟ ಡಾಲಿ ಧನಂಜಯ ಮನೆಯಲ್ಲಿ ನಿಶ್ಚಿತಾರ್ಥ ಸಂಭ್ರಮ; ಮದುವೆ ಯಾವಾಗ?

ಬೆಂಗಳೂರು: ನಟ ಡಾಲಿ ಧನಂಜಯ (Daali Dhananjaya) ಅವರ ಮದುವೆ ಶಾಸ್ತ್ರ ಪ್ರಾರಂಭವಾಗಿದ್ದು, ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಧನಂಜಯ ಹಾಗೂ ಧನ್ಯತಾ ಅವರ ನಿಶ್ಚಿತಾರ್ಥ ಭಾನುವಾರ ನೆರವೇರಿತು. ಕುಟುಂಬಸ್ಥರು, ಸಂಬಂಧಿಕರು ಹಾಗೂ ಆಪ್ತರ ಸಮ್ಮುಖದಲ್ಲಿ ಲಗ್ನಪತ್ರಿಕೆ ಬರೆಸೋ ಶಾಸ್ತ್ರ ನೆರವೇರಿದ್ದು, ನವ ಜೋಡಿ ಉಂಗುರ ಬದಲಿಸಿಕೊಂಡಿದ್ದಾರೆ.

2025ರ ಫೆಬ್ರವರಿ 16ಕ್ಕೆ ನಟ ನಟ ಡಾಲಿ ಧನಂಜಯ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು, ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಹಾಗೂ ಧನ್ಯತಾ ಅವರ ಮದುವೆ ನಡೆಯಲಿದೆ ಎಂದು ತಿಳಿದುಬಂದಿದೆ.

ದೀಪಾವಳಿ ಹಬ್ಬಕ್ಕೆ ನಟ ಡಾಲಿ ಧನಂಜಯ್‌ (Daali Dhananjaya) ಅವರು ತಾವು ಮದುವೆಯಾಗುತ್ತಿರುವುದನ್ನು (Daali Dhananjaya marriage) ಖಚಿತಪಡಿಸಿದ್ದರು. ಮದುವೆ ಯಾವಾಗ ಎನ್ನುವ ಪ್ರಶ್ನೆ ಹೋದಲ್ಲಿ ಬಂದಲ್ಲಿ ಡಾಲಿಗೆ ಎದುರಾಗುತ್ತಿತ್ತು. ಹೀಗಾಗಿ ಡಾಲಿ ಧನಂಜಯ ಅವರು ದೀಪಾವಳಿ ಹಬ್ಬದಂದು ಬಾಳಸಂಗಾತಿಯನ್ನು ಪರಿಚಯಿಸಿದ್ದರು.

ಭಾವಿ ಪತ್ನಿ ಜತೆಗಿನ ಸುಂದರವಾದ ಫೋಟೋಗಳು ಹಾಗೂ ವಿಡಿಯೋ ಹಂಚಿಕೊಳ್ಳುವ ಮೂಲಕ ಧನಂದಯ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದರು. ಧನಂಜಯ ಅವರು ಕೈ ಹಿಡಿಯುತ್ತಿರುವ ಹುಡುಗಿಯ ಹೆಸರು ಧನ್ಯತಾ. ಗೈನಕಾಲಾಜಿಸ್ಟ್ ಆಗಿರುವ ಧನ್ಯತಾ, ಡಾಲಿಯ ಬಾಳ ಸಂಗಾತಿಯಾಗುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Daali Dhananjaya: ಹಸೆಮಣೆ ಏರುತ್ತಿದ್ದಾರೆ ನಟ ಧನಂಜಯ, ಡಾಲಿ ಕೈಹಿಡಿಯೋ ಚೆಲುವೆ ಯಾರು? ಯಾವಾಗ ಮದುವೆ?

ಸೋಷಿಯಲ್‌ ಮೀಡಿಯಾದಲ್ಲಿ ಮದುವೆ ಆಗುವ ಹುಡುಗಿಯನ್ನು ಪರಿಚಯಿಸಿದ್ದ ಧನಂಜಯ್‌ ಅವರು, “ಪ್ರೀತಿಯ ಕರುನಾಡಿಗೆ, ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು.. ನಾನು ಧನ್ಯ” ಎಂದಿದ್ದರು.

ಡಾಲಿ ಧನಂಜಯ್ ಮತ್ತು ಧನ್ಯತಾ ಇಬ್ಬರ ಅನೇಕ ವರ್ಷಗಳ ಪರಿಚಯ, ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ. ಓದಿದ್ದು ಮೈಸೂರಿನಲ್ಲಿ. ಅರಸೀಕೆರೆ ಮೂಲದ ನಟ ಧನಂಜಯ ಓದಿದ್ದು ಕೂಡ ಮೈಸೂರಿನಲ್ಲಿ. ಈ ಜೋಡಿಗೆ ಅಭಿಮಾನಿಗಳಿಂದ ಪ್ರೀತಿಯ ಶುಭಾಶಯಗಳ ಸುರಿಮಳೆ ಹರಿದುಬರುತ್ತಿದೆ.