Thursday, 12th December 2024

Dasara Dharma Sammelana: ಅಬ್ಬಿಗೇರಿಯಲ್ಲಿ ಅ. 3ರಿಂದ 12ರವರೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ

Dasara Dharma Sammelana

ಚಿಕ್ಕಮಗಳೂರು: ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳ 33ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು (Dasara Dharma Sammelana) ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆ ಆವರಣದ ಮಾನವ ಧರ್ಮ ಮಂಟಪ- ಬೃಹತ್ ವೇದಿಕೆಯಲ್ಲಿ ಆಯೋಜನೆಗೊಂಡಿದೆ. ಕರುನಾಡಿನ ಜನಮಾನಸದ ಬೃಹತ್ ಜಾತ್ರೆ ಎಂದೇ ಖ್ಯಾತವಾದ ದಸರಾ ಧರ್ಮ ಸಮ್ಮೇಳನ ಅಕ್ಟೋಬರ್ 3ರಂದು ಆರಂಭವಾಗಿ 12 ರಂದು ಸಂಪನ್ನಗೊಳ್ಳಲಿದ್ದು, ಪ್ರತಿ ದಿನವೂ ವೈವಿಧ್ಯಮಯ ಕಾರ್ಯಕ್ರಮ, ವಿವಿಧ ರಂಗದ ಗಣ್ಯರಿಗೆ ಪ್ರಶಸ್ತಿ ಪ್ರದಾನ, ಗಣ್ಯಾತಿಗಣ್ಯರ ಭಾಷಣ, ರಾಜ್ಯದ ಹತ್ತು ಹಲವು ಕ್ಷೇತ್ರದ ತಜ್ಞರಿಂದ ಉಪನ್ಯಾಸ ಸೇರಿದಂತೆ ವರ್ಣರಂಜಿತ ಸಾಂಸ್ಕೃತಿಕ ವೈವಿಧ್ಯಗಳೂ ರಂಜಿಸಲಿವೆ. ಪ್ರತಿ ದಿನದ ಕಾರ್ಯಕ್ರಮಗಳು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಲಿವೆ.

ಈ ಸುದ್ದಿಯನ್ನೂ ಓದಿ: Job News: 50,000ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಸಲ್ಲಿಸಿ

ಸಚಿವ ಸೋಮಣ್ಣ ಚಾಲನೆ

ಅಕ್ಟೋಬರ್ 3ರಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ‌, ದಸರಾ ಧರ್ಮ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಶಾಸಕ ಚಂದ್ರು ಲಮಾಣಿ, ಗ್ರಾ.ಪಂ.ಅಧ್ಯಕ್ಷ ನೀಲಪ್ಪ ದ್ವಾಸಲ, ಉಪಾಧ್ಯಕ್ಷೆ ಅಕ್ಕಮ್ಮ ಡೊಳ್ಳಿನ, ಕೆ.ಪ್ರಕಾಶ್ ಇತರರು ಭಾಗವಹಿಸಲಿದ್ದಾರೆ.

ಮಾಸಪತ್ರಿಕೆ ಅನಾವರಣ

ಅ. 4ರಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಶ್ರೀಮಠದ ರಂಭಾಪುರಿ ಬೆಳಗು ಮಾಸ ಪತ್ರಿಕೆ ಅನಾವರಣ ಗೊಳಿಸಲಿದ್ದಾರೆ. ಶ್ರೀ ಜುಕ್ತಿ ಹಿರೇಮಠ ಶ್ರೀಗಳ ಸಂಪಾದಕತ್ವದ ಧಾರ್ಮಿಕ ಮಾಸ ಪತ್ರಿಕೆ ಈ ಬಾರಿ ದಸರಾ ವಿಶೇಷ ಲೇಖನ ಹೂರಣದಿಂದ ಹೊರಬರಲಿದೆ. ಗಣ ಮತ್ತು ಭೂ ವಿಜ್ಞಾನ-ತೋಟಗಾರಿಕಾ ಸಚಿವ ಎಸ್.ಎಸ್.‌ ಮಲ್ಲಿಕಾರ್ಜುನ, ಮಾಜಿ ಶಾಸಕರಾದ ರಾಮಣ್ಣ ಲಮಾಣಿ, ಚಿತ್ರನಟ ದೊಡ್ಡಣ್ಣ, ದೇವರಮನೆ ಶಿವಕುಮಾರ ಇತರರು ಭಾಗವಹಿಸುವರು.‌

ಕೃತಿ ಬಿಡುಗಡೆ

ಅ. 5ರಂದು ‘ಗುರುʼ ಇಂಗ್ಲೀಷ್ ಕೃತಿಯನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ ಬಿಡುಗಡೆ ಮಾಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವರಾದ ಡಿ.ಎನ್. ಜೀವರಾಜ್, ಬಿ.ಆರ್. ಯಾವಗಲ್, ಎಸ್.ಎಸ್. ಜ್ಯೋತಿಪ್ರಕಾಶ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಹಿರಿಯ ಉದ್ಯಮಿ ವಿಜಯ ಸಂಕೇಶ್ವರ ಭಾಗಿ

ಅ.6 ರಂದು ನಡೆಯಲಿರುವ ಧರ್ಮ ಸಭೆ ಮತ್ತು ಶ್ರೀಗಳ ದರ್ಬಾರಿನಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ ಅನ್ವರಿ, ನಾಡಿನ ಹಿರಿಯ ಉದ್ಯಮಿ, ಪದ್ಮಶ್ರೀ ವಿಜಯ ಸಂಕೇಶ್ವರ, ಶಾಸಕ ಸಿ.ಸಿ. ಪಾಟೀಲ ಇತರರು ಭಾಗವಹಿಸಿ ಭಾಷಣ ಮಾಡಲಿದ್ದಾರೆ. ಅ. 7 ರಂದು ಬಾಲಕ-ಪಾಲಕ-ಶಿಕ್ಷಕರ ನೀತಿ ಸಂಹಿತೆ ಕೃತಿಯನ್ನು ಕಾನೂನು, ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಲೋಕಾರ್ಪಣೆ ಮಾಡಲಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ, ವಿ.ಪ. ಸದಸ್ಯ ಸಲೀಂ ಅಹಮದ್, ಮಹಾಂತೇಶ ಕವಟಗಿಮಠ, ಗೀತಾ ಮಾಡಲಗೇರಿ ಸುಭಾಷ್ ಮ್ಯಾಗೇರಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಅ.8 ರಂದು ಕಾವ್ಯ ಕುಸುಮ ಕೃತಿಯನ್ನು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕ ನೇಮಿರಾಜ್‌ ನಾಯ್ಕ, ಮಾಜಿ ಶಾಸಕ ಡಿ.ಆರ್. ಪಾಟೀಲ, ಆನಂದಸ್ವಾಮಿ ಗಡ್ಡದ್ದೇವರಮಠ, ಸಂಯುಕ್ತ ಕಳಕಪ್ಪ ಬಂಡಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ | IPL 2025 : ಐಪಿಎಲ್ ಆಟಗಾರರಿಗೆ ಭರ್ಜರಿ ಸ್ಯಾಲರಿ ಹೆಚ್ಚಳ; ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂಪಾಯಿ ವೇತನ

ಅ.9 ರಂದು ಸಂಸದ-ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಪಿ.ಸಿ. ಗದ್ದೀಗೌಡರ, ಶಾಸಕರಾದ ಜಗದೀಶ ಗುಡಗುಂಟಿಮಠ, ಶರಣು ಸಲಗರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅ.10 ರಂದು ಶಾಸಕರಾದ ನಾರಾ ಭರತ್‌ ರೆಡ್ಡಿ(ಬಳ್ಳಾರಿ), ಮಾನಪ್ಪ ಡಿ.ವಜ್ಜಲ (ಲಿಂಗಸುಗೂರ), ಟಿ.ಡಿ.ರಾಜೇಗೌಡ (ಶೃಂಗೇರಿ), ಮಾಜಿ ಸಚಿವ ಎಸ್.ಎಸ್.ಪಾಟೀಲ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಪುರ, ವೀರಣ್ಣ ಮತ್ತೀಕಟ್ಟಿ ಭಾಗವಹಿಸುವರು. ಅ.11ರಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ರುದ್ರಗಣಾಧಿಪ ವೀರಭದ್ರ – ಕೃತಿಯನ್ನು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಶ್ರೀ ಪೀಠದ ವಾರ್ತಾ ಸಂಕಲನ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಂಸದ ರಾಜ ಅಮರೇಶ್ವರ ನಾಯಕ, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ್, ಆಂಧ್ರದ ಮಾಜಿ ವಿ.ಪ.ಸದಸ್ಯ ಗುಂಡಮಾಲೆ ತಿಪ್ಪೇಸ್ವಾಮಿ, ಆಂಧ್ರ ಪ್ರದೇಶದ ಅ.ಭಾ.ವೀರಶೈವ ಮಹಾಸಭಾ ಅಧ್ಯಕ್ಷ ಶಿವಾನಂದಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಪ್ರಶಸ್ತಿ ಘೋಷಣೆ

2024ನೇ ಸಾಲಿನ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ತೆಲಂಗಾಣದ ಆರ್.ಎಂ. ಪ್ರಭುಲಿಂಗ ಶಾಸ್ತ್ರಿ,ರಂಭಾಪುರಿ ಯುವಸಿರಿ ಪ್ರಶಸ್ತಿಯನ್ನು ದಾವಣಗೆರೆ ಎಚ್.ಎಂ. ಬಸವರಾಜಯ್ಯ, ಅಕ್ಕಿ ರಾಜು, ವೀರಶೈವ ಸಿರಿ ಪ್ರಶಸ್ತಿಯನ್ನು ಶಾಸಕ ಜಿ.ಎಸ್.ಪಾಟೀಲ, ಶಿವಾಚಾರ್ಯ ರತ್ನ ಪ್ರಶಸ್ತಿಯನ್ನು ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಹಾಗೂ ಸಾಧನ ಸಿರಿ ಪ್ರಶಸ್ತಿಯನ್ನು ನರೇಗಲ್ಲ-ಸವದತ್ತಿ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಘೋಷಣೆ ಮಾಡಲಾಗಿದೆ. ದಸರಾ ದರ್ಬಾರಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಸಾಧಕರಿಗ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಗಣ್ಯರಿಂದ ಉಪನ್ಯಾಸ

ದಸರಾ ಧರ್ಮ ಸಮ್ಮೇಳನದ ಪ್ರತಿ ದಿನವೂ ವಿವಿಧ ಕ್ಷೇತ್ರದ ಸಾಧಕರು, ತಜ್ಞರು ಮತ್ತು ವಿದ್ವಾಂಸರು ವಿಶೇಷ ಉಪನ್ಯಾಸ ನೀಡಲಿರುವುದು ವಿಶೇಷ. ನವರಾತ್ರಿಯಲ್ಲಿ ನವಶಕ್ತಿ ಆರಾಧನೆ ಕುರಿತು ಲಕ್ಷ್ಮೇಶ್ವರ ಡಾ.ಜಯಶ್ರೀ ಹೊಸಮನಿ, ಗುರು ಮಹಿಮೆ ಮಹತ್ವ ಕುರಿತು ಸಾಹಿತ್ಯ ಸಂಶೋಧಕ ಡಾ.ಅಡಿವೆಪ್ಪ ವಾಲಿ, ಜ್ಞಾನ ಸಾಧನೆಯಲ್ಲಿ ಸಿದ್ಧಾಂತ ಶಿಖಾಮಣಿ ಹಿರಿಮೆ ಬಗ್ಗೆ ಎಮ್ಮಿಗನೂರು ಹಂಪಿ ಸಾವಿರದೇವರ ಮಠದ ಶ್ರೀ ವಾಮದೇವ ಮಹಾಂತ ಶಿವಾಚಾರ್ಯರು, ಆಹಾರ-ಆರೋಗ್ಯ ಮತ್ತು ಆಧ್ಯಾತ್ಮ ಕುರಿತು ರಾಯಚೂರಿನ ಡಾ.ಅರುಣಾ ಹಿರೇಮಠ, ಸಾವಯವ ಕೃಷಿ ಮಹತ್ವದ ಬಗ್ಗೆ ಬೆಂಗಳೂರಿನ ಕೃಷಿ ತಜ್ಞ ಆನಂದ ಆಶೀಸರ, ಧಾರ್ಮಿಕತೆಯಲ್ಲಿ ಮಹಿಳೆಯ ಪಾತ್ರ ಕುರಿತು ತುಮಕೂರಿನ ಡಾ.ಮೀನಾಕ್ಷಿ ಖಂಡಿಮಠ, ಯುವ ಜನಾಂಗದಲ್ಲಿ ಧರ್ಮ ಪ್ರಜ್ಞೆ -ರಾಷ್ಟ್ರ ಪ್ರಜ್ಞೆ ವಿಷಯವಾಗಿ ಮೈಸೂರಿನ ಸಂಸ್ಕೃತಿ ಚಿಂತಕ ಎ.ಆರ್.ರಘುರಾಮ ಉಪನ್ಯಾಸ ನೀಡಲಿದ್ದಾರೆ.

ಗಣ್ಯರಿಗೆ ಪ್ರತಿದಿನ ಗುರುರಕ್ಷೆ

ವಿವಿಧ ರಂಗದಲ್ಲಿ ಸಾಧನೆ ತೋರಿದವರಿಗೆ ಗುರುರಕ್ಷೆ ನೀಡಲಾಗುವುದು. ಸಮಾರಂಭದಲ್ಲಿ ಅ.ಭಾ.ವೀ.ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ, ಮುಕ್ತಿಮಂದಿರದ ಶ್ರೀ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು, ಸಿದ್ಧರಬೆಟ್ಟ-ಅಬ್ಬಿಗೇರಿ ಶ್ರೀ ವೀರಭದ್ರ ಶಿವಾಚಾರ್ಯರು, ನರೇಗಲ್-ಸವದತ್ತಿ ಮಲ್ಲಿಕಾರ್ಜುನ ಶಿವಾಚಾರ್ಯರು, ಜುಕ್ತಿ ಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶ್ರೀಗಳು ಸೇರಿ 50ಕ್ಕೂ ಹೆಚ್ಚು ಪೀಠಾಧೀಶರು ಭಾಗವಹಿಸಿ ಆಶೀರ್ವಚನ ನೀಡಲಿದ್ದಾರೆ.

ಇಷ್ಟಲಿಂಗ ಮಹಾಪೂಜಾ

ವಿಶ್ವಶಾಂತಿ ಲೋಕಲ್ಯಾಣಕ್ಕಾಗಿ ಪ್ರತಿನಿತ್ಯ ಬೆಳಗ್ಗೆ 8 ಗಂಟೆಗೆ ಅಬ್ಬಿಗೇರಿ ನರೇಗಲ್ಲ ರಸ್ತೆಯ ಹೊಸ
ಹಿರೇಮಠದಲ್ಲಿ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜಾ ನಡೆಯಲಿದೆ. ಅಕ್ಟೋಬರ್ 2ರಂದು ಸಂಜೆ 4 ಗಂಟೆಗೆ ಅಬ್ಬಿಗೇರಿಗೆ ಆಗಮಿಸುವ ಶ್ರೀಗಳನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲು ಸಿದ್ಧತೆ ನಡೆದಿದೆ. ಅಕ್ಟೋಬರ್ 12ರಂದು ವಿಜಯದಶಮಿಯ ದಿನ ಶ್ರೀಗಳು ಇಷ್ಟಲಿಂಗ ಪೂಜೆಗಾಗಿ ತಾವೇ ಸ್ವತ: ಕುಂಭ ಹೊತ್ತು ಅಗ್ರೋದಕ ತರುವುದು ಬಹು ವಿಶೇಷವಾಗಿದೆ.

ನಜರ್ ಸಮರ್ಪಣೆ

ಪ್ರತಿ ದಿನದ ಸಮಾರಂಭದ ನಂತರ ಶ್ರೀ ಪೀಠದ ಸಿಬ್ಬಂದಿ, ಧರ್ಮಾಭಿಮಾನಿಗಳಿಂದ ಸಾಂಪ್ರದಾಯಿಕ ಉಡುಪು ಮತ್ತು ಜಯ ಘೋಷಗಳ ನಡುವೆ ನಜರ್ (ಗೌರವ) ಸಮರ್ಪಣೆ ನಡೆಯುವುದು ಜನಮನ ಸೆಳೆಯಲಿದೆ.

ಈ ಸುದ್ದಿಯನ್ನೂ ಓದಿ | Dasara Shopping 2024: ವೀಕೆಂಡ್‌‌‌ನಲ್ಲೇ ನಡೆಯುತ್ತಿದೆ ದಸರಾ- ನವರಾತ್ರಿ ಭರ್ಜರಿ ಶಾಪಿಂಗ್‌!

ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಮಾನವ ಧರ್ಮಕ್ಕೆ ಜಯವಾಗಲಿ ಎಂಬುದು ನಮ್ಮ ಪರಮ ಧ್ಯೇಯ. ದಸರಾ ದರ್ಬಾರ್, ಸಮ್ಮೇಳನ, ಶರನ್ನವರಾತ್ರಿ ಕೇವಲ ಧರ್ಮ ಸಭೆ ಮಾತ್ರವಾಗದೇ ಅನ್ನ ಕೊಡುವ ಕೃಷಿಕರ ಬಗ್ಗೆಯೂ ಕಳಕಳಿ ಬಿಂಬಿಸಲಿದೆ. ಜನ್ಮ ನೀಡಿದ ಮಾತೆಯರ ಸಮೂಹಕ್ಕೆ ಗೌರವ ಸೂಚಿಸಲಿದೆ. ಅಕ್ಟೋಬರ್ 7 ರಂದು ಕೃಷಿ ಇಲಾಖೆ ಸಹಕಾರದೊಂದಿಗೆ ಕೃಷಿ ಮೇಳ ನಡೆಯಲಿದೆ. ಅ. 8 ರಂದು ಸಾವಿರಾರು ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವಿದೆ. ಸಮಾರಂಭದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಅಚ್ಚುಕಟ್ಟಾದ ಅನ್ನ ದಾಸೋಹ ವ್ಯವಸ್ಥೆ ಇದೆ. ಸದ್ಭಕ್ತರು ಸಂಗಮಿಸಿ ದಸರಾ ಸಂಭ್ರಮ ನೂರ್ಮಡಿಸಬೇಕು.

-ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು, ಬಾಳೆಹೊನ್ನೂರು ಮಹಾ ಸಂಸ್ಥಾನ