Thursday, 12th December 2024

Dasara Gombe Habba 2024: ಮಾರುಕಟ್ಟೆಯಲ್ಲಿ ದಸರಾ ಗೊಂಬೆಗಳ ಕಲರವ!

Dasara Gombe Habba 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾರುಕಟ್ಟೆಯಲ್ಲಿ ದಸರಾ ಗೊಂಬೆಗಳ (Dasara Gombe Habba 2024) ಕಲರವ ಹೆಚ್ಚಾಗಿದೆ. ಹೌದು, ನವರಾತ್ರಿಯಲ್ಲಿ (Navaratri) ಮನೆಯಲ್ಲಿ ಗೊಂಬೆ ಹಬ್ಬ ಮಾಡುವವರಿಗೆಂದೇ ನಾನಾ ಬಗೆಯ ಟ್ರೆಡಿಷನಲ್‌ ಹಾಗೂ ಕಂಟೆಂಪರರಿ ಗೊಂಬೆಗಳು ಕಾಲಿಟ್ಟಿವೆ. ಈ ಹಿಂದೆ ಎಲ್ಲರೂ ಕೇವಲ ಮಣ್ಣಿನ ಗೊಂಬೆಗಳಿಗೆ ಮಾತ್ರ ಆದ್ಯತೆ ನೀಡುತ್ತಿದ್ದರು. ಇತ್ತೀಚೆಗೆ ಆಚರಣೆ ಶೈಲಿ ಬದಲಾಗಿದೆ. ಇದಕ್ಕೆ ಪೂರಕ ಎಂಬಂತೆ, ಇಂದಿನ ಪ್ರಸ್ತುತ ಸಮಯಕ್ಕೆ ಹೊಂದುವಂತಹ ಲೈಟ್‌ವೇಟ್‌ ಗೊಂಬೆಗಳು ಹಾಗೂ ಸಿನಿಮಾ ಮತ್ತು ಕಾರ್ಟೂನ್‌ ಕ್ಯಾರೆಕ್ಟರ್‌ ಗೊಂಬೆಗಳು ಬಂದಿವೆ ಎನ್ನುತ್ತಾರೆ ಗಾಂಧಿ ಬಜಾರ್‌ನಲ್ಲಿ 10 ವರ್ಷಗಳಿಂದ ದಸರಾ ಗೊಂಬೆಗಳ ಮಾರಾಟ ಮಾಡುತ್ತಿರುವ ಜಯರಾಮ್‌ ಹಾಗೂ ದಿನಕರ್‌.

ಚಿತ್ರಗಳು: ಮಿಂಚು

ಮಕ್ಕಳನ್ನು ಸೆಳೆದ ಕಾರ್ಟೂನ್‌ ಕ್ಯಾರೆಕ್ಟರ್‌ನ ಗೊಂಬೆಗಳು

ಸುಮಾರು ಐದು ವರ್ಷಗಳಿಂದ ಈ ಜನರೇಷನ್‌ ಮಕ್ಕಳಿಗೂ ಇಷ್ಟವಾಗುವಂತಹ ಡೋರಾ, ಮೋಟು-ಪತ್ಲು, ಶೀಪ್‌, ನಿಂಜಾ, ಮೊಗ್ಲಿ ಸೇರಿದಂತೆ ನಾನಾ ಕಾರ್ಟೂನ್‌ ಕ್ಯಾರೆಕ್ಟರ್‌ನ ದಸರಾ ಬೊಂಬೆಗಳು ಮಾರುಕಟ್ಟೆಗೆ ಬಂದಿದ್ದು, ಮಕ್ಕಳನ್ನು ಸೆಳೆಯುತ್ತಿವೆ.

ಸಿನಿಮಾ ಕ್ಯಾರೆಕ್ಟರ್‌ ಬೊಂಬೆಗಳು

ಹಾಲಿವುಡ್‌ ಸಿನಿಮಾ ಕ್ಯಾರೆಕ್ಟರ್‌ಗಳಾದ ಐರನ್‌ ಮ್ಯಾನ್‌, ಎಕ್ಸ್‌ಮನ್‌, ನರೋಟಾ, ಮ್ಯಾಟ್ರಿಕ್ಸ್‌, ಬ್ಯಾಟ್‌ಮನ್‌, ಟರ್ಮಿನೇಟರ್‌, ಪವರ್‌ ರೇಂಜರ್ಸ್‌, ಸ್ಪೈಡರ್‌ ಮ್ಯಾನ್‌, ಟ್ರಾನ್ಸ್‌ಫಾರ್ಮರ್ಸ್‌ ಹೀಗೆ ಲೆಕ್ಕವಿಲ್ಲದಷ್ಟು ಕ್ಯಾರೆಕ್ಟರ್‌ನ ಸಿನಿಮಾ ಕ್ಯಾರೆಕ್ಟರ್‌ ಬೊಂಬೆಗಳು ದಸರಾ ಗೊಂಬೆಗಳ ಜತೆಯಾಗಿವೆ ಎನ್ನುತ್ತಾರೆ ಮಾರಾಟಗಾರರಾದ ಧನವಂತ್‌.

ಸ್ಟೋರಿ ಟೆಲ್ಲಿಂಗ್‌ ಗೊಂಬೆಗಳಿಗೆ ಕುಗ್ಗದ ಬೇಡಿಕೆ

ಮಹಾಭಾರತ, ರಾಮಾಯಣ ಸೇರಿದಂತೆ ನಾನಾ ಪುರಾಣ ಕಥೆಗಳನ್ನು ಬಿಂಬಿಸುವ ಸ್ಟೋರಿ ಟೆಲ್ಲಿಂಗ್‌ ದಸರಾ ಗೊಂಬೆಗಳಿಗೆ ಬೇಡಿಕೆ ಇಂದಿಗೂ ಕುಂದಿಲ್ಲ ಎನ್ನುತ್ತಾರೆ ಮಲ್ಲೇಶ್ವರದ ಮಾರಾಟಗಾರರಾದ ಮೀನಾ.

ಜನರನ್ನು ಆಕರ್ಷಿಸುತ್ತಿರುವ ದಸರಾ ಗೊಂಬೆಗಳು

ದಸರಾ ಜಂಬೂ ಸವಾರಿ, ಕೃಷ್ಣಲೀಲಾ, ಸಮುದ್ರ ಮಂಥನದ ಸೆಟ್‌, ರಾಮಾಯಣ, ಮಹಾಭಾರತ, ಬುದ್ಧನ ಧ್ಯಾನ, ಶ್ರೀ ಕೃಷ್ಣದೇವರಾಯನ ಅರಮನೆ, ಶ್ರೀರಾಮ ಚಂದ್ರನ ಸೈನ್ಯ ಸೇರಿದಂತೆ ನಾನಾ ಬಗೆಯ ಕಥೆಯನ್ನು ಹೇಳುವ ಚಿತ್ರಣದ ಗೊಂಬೆ ಸೆಟ್‌ಗಳು ಜನರನ್ನು ಆಕರ್ಷಿಸುತ್ತಿವೆ.

ಹೆಚ್ಚಾಯ್ತು ಆನ್‌ಲೈನ್‌ನಲ್ಲೂ ಗೊಂಬೆ ಖರೀದಿ

ತಿರುಗಿ ತಿರುಗಿ ಗೊಂಬೆ ಖರೀದಿಸಲಾಗದಿದ್ದವರಿಗೆ ಇದೀಗ ಆನ್‌ಲೈನ್‌ನಲ್ಲೂ ಈ ಸೌಲಭ್ಯ ಕೈಗೆಟಕುತ್ತಿದೆ. ನಾನಾ ಆನ್‌ಲೈನ್‌ ಗೊಂಬೆ ಶಾಪ್‌ಗಳು ಬಗೆಬಗೆಯ ದಸರಾ ಗೊಂಬೆಗಳನ್ನು ಮಾರಾಟ ಮಾಡುತ್ತಿದೆ. ಇಲ್ಲಿಯೂ ಕೂಡ ಟ್ರೆಡಿಷನಲ್‌ ಬೊಂಬೆಯಿಂದಿಡಿದು ಕಂಟೆಂಪರರಿ ಗೊಂಬೆಗಳು ದೊರಕುತ್ತಿವೆ ಎನ್ನುತ್ತಾರೆ ಆನ್‌ಲೈನ್‌ ಶಾಪಿಂಗ್‌ ಎಕ್ಸ್‌ಪರ್ಟ್ ರಾಘವ್‌ ಮಿತ್ರಾ.

ಈ ಸುದ್ದಿಯನ್ನೂ ಓದಿ | Navaratri Colour Tips: ನವರಾತ್ರಿ 2ನೇ ದಿನದ ಹಸಿರು ಎಥ್ನಿಕ್‌ವೇರ್ಸ್‌‌ನಲ್ಲಿ ಆಕರ್ಷಕವಾಗಿ ಕಾಣಿಸಲು ಇಲ್ಲಿದೆ 5 ಸಿಂಪಲ್‌ ಐಡಿಯಾ

ದಸರಾ ಗೊಂಬೆ ಶಾಪಿಂಗ್‌ ಪ್ರಿಯರ ಗಮನಕ್ಕೆ

ಗೊಂಬೆ ಕೂರಿಸುವವರಿಗೆ ಹೊಸ ಗೊಂಬೆ ಕೊಳ್ಳಲು ಇದು ಸಕಾಲ.
ಗೊಂಬೆ ಯಾವ ಮೆಟೀರಿಯಲ್‌ನದ್ದು ಎಂದು ತಿಳಿದು ಕೊಳ್ಳಿ. ನಿರ್ವಹಣೆಗೆ ಸುಲಭವಾಗುವುದು.
ಇದೀಗ ಗೊಂಬೆಗಳನ್ನು ಜೋಡಿಸುವ ಸ್ಟ್ಯಾಂಡ್‌ ಕೂಡ ದೊರೆಯುತ್ತವೆ.
ಇನ್‌ಸ್ಟಂಟ್‌ ರೆಡಿಮೇಡ್‌ ಡೆಕೋರೇಷನ್‌ ಸಾಮಗ್ರಿಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)