Saturday, 14th December 2024

Dasara Jamboo Savari: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ಸಿಎಂ ಚಾಲನೆ; LIVE ವಿಡಿಯೊ ಇಲ್ಲಿದೆ

Dasara Jamboo Savari

ಮೈಸೂರು: ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಸಂಭ್ರಮದಿಂದ ವಿಜಯದಶಮಿ ಆಚರಣೆ ನಡೆಯುತ್ತಿದೆ. ಶನಿವಾರ ಸಂಜೆ 5ಗಂಟೆಗೆ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ (Dasara Jamboo Savari) ಚಾಲನೆ ನೀಡಲಾಗಿದ್ದು, ಅಭಿಮನ್ಯು ಆನೆಯು 750 ಕೆಜಿ ತೂಕದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿ ಮೂರ್ತಿಯನ್ನು ಹೊತ್ತು ಸಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಅರಮನೆಯಿಂದ ಬನ್ನಿ ಮಂಟಪದವರೆಗೆ ಜಂಬೂ ಸವಾರಿ ಸಾಗಲಿದೆ.

750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಗಜಪಡೆ ಕ್ಯಾಫ್ಟನ್‌ ಅಭಿಮನ್ಯು ಐದನೇ ಬಾರಿ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕುತ್ತಿದ್ದಾನೆ. ಹಿರಣ್ಯ ಮತ್ತು ಲಕ್ಷ್ಮಿ ಕುಮ್ಕಿ ಆನೆಗಳಾಗಿ ಹೆಜ್ಜೆ ಹಾಕುತ್ತಿದ್ದು, ನಿಶಾನೆ ಆನೆಯಾಗಿ ಧನಂಜಯ್‌, ನೌಫಥ್‌ ಆನೆಯಾಗಿ ಗೋಪಿ ಸೇರಿ 9 ಆನೆಗಳು ಜಂಬೂ ಸವಾರಿಯಲ್ಲಿ ಭಾಗಿಯಾಗಿವೆ.

ಇದಕ್ಕೂ ಮುನ್ನಾ ದಸರಾ ಮೆರವಣಿಗೆ (Mysuru Dasara 2024) ನಡೆದಿದ್ದು, 51 ಸ್ತಬ್ಧ ಚಿತ್ರಗಳ ಪ್ರದರ್ಶನ, ಜಾನಪದ ಕಲಾತಂಡಗಳು ಗಮನ ಸೆಳೆದವು. ವಿಶ್ವ ವಿಖ್ಯಾತ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಲಕ್ಷಾಂತರ ಜನರು ನಗರಕ್ಕೆ ಆಗಮಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ಮಧ್ಯಾಹ್ನ ನಂದಿ ಧ್ವಜ ಪೂಜೆ ನೆರವೇರಿಸಿದ ಬಳಿಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು.

ದಸರಾ ಮೆರವಣಿಗೆಯಲ್ಲಿ ಬೀದರ್‌ನಿಂದ ಚಾಮರಾಜನಗರ ಹಾಗೂ ಉತ್ತರ ಕನ್ನಡದಿಂದ ಕೋಲಾರದವರೆಗೆ ಕರುನಾಡಿನ ಕಲಾಸೊಬಗು ಅನಾವರಣಗೊಂಡಿತು. ಸ್ತಬ್ಧಚಿತ್ರಗಳು ಹಾಗೂ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು. ಸಂಜೆ 7 ಗಂಟೆಗೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಮೂಲಕ ದಸರೆ ಸಂಭ್ರಮಕ್ಕೆ ತೆರೆಬೀಳಲಿದೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಪಂಜಿನ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಡ್ರೋನ್ ಶೋ ಹಾಗೂ ಬೈಕ್‌ ಸ್ಟಂಟ್‌ ನೋಡುಗರನ್ನು ಆಕರ್ಷಿಸಲಿದೆ.

ದಸರಾ ಸ್ತಬ್ಧ ಚಿತ್ರಗಳು

  • ಬಳ್ಳಾರಿ-ಕುರುಗೋಡು ಬಸವೇಶ್ವರ ದೇವಸ್ಥಾನ
  • ಮಂಡ್ಯ-ರಂಗನ ತಿಟ್ಟು ಪಕ್ಷಿಧಾಮ ಮತ್ತು ಕೆಆರ್‌ಎಸ್‌
  • ದಾವಣಗೆರೆ-ನಾವು ಮನುಜರು ಸ್ತಬ್ಧಚಿತ್ರ
  • ಮೈಸೂರು-ಮಾನವ ಕುಲ ಸಮಾನತೆ
  • ಚಿತ್ರದುರ್ಗ- ಚಿತ್ರದುರ್ಗ ಕೋಟೆ ಮತ್ತು ಗಾಳಿ ಯಂತ್ರಗಳು
  • ಹಾಸನ-ವಿಶ್ವಪಾರಂಪರಿಕ ತಾಣ ಬೇಲೂರು, ಹಳೇಬೀಡು
  • ತುಮಕೂರು-ಬಯಲುಸೀಮೆಯನ್ನಾಳಿದ ಅರಸರು
  • ಚಿಕ್ಕಮಗಳೂರು-ತೇಜಸ್ವಿಯ ವಿಸ್ಮಯ ಲೋಕ‌
  • ಹಾವೇರಿ-ಏಲಕ್ಕಿ ಕಂಪಿನ ನಾಡು ಹಾಗೂ ಸಂತರು
  • ರಾಮನಗರ- ರಾಮನಗರ ಜಿಲ್ಲೆಯ ವೈವಿಧ್ಯತೆಗಳು
  • ಮೈಸೂರು-ಮಾನವ ಕುಲದ ಸಮಾನತೆ
  • ಧಾರವಾಡ- ಇಸ್ರೋ ಗಗನಯಾನದಲ್ಲಿ ಹಣ್ಣಿನ ನೊಣಗಳು
  • ಚಾಮರಾಜನಗರ- ಸೋಲಿಗರ ಸೊಗಡು, ಒಮ್ಮೆ ನೀ ಬಂದು ನೋಡು
  • ಕೋಲಾರ-ಕೋಟಿ ಲಿಂಗೇಶ್ವರ ದೇವಸ್ಥಾನ
  • ವಾರ್ತಾ ಇಲಾಖೆ- ಬಸವಣ್ಣ, ಮಹಾತ್ಮ ಗಾಂಧಿ
  • ಭಾರತೀಯ ರೈಲ್ವೆ ಇಲಾಖೆ- ವಂದೇ ಭಾರತ್‌ ಎಕ್ಸ್‌ಪ್ರೆಸ್‌

ಈ ಸುದ್ದಿಯನ್ನೂ ಓದಿ | Mysuru Dasara: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ; ಧಾರ್ಮಿಕ ಕೈಂಕರ್ಯ ನೆರವೇರಿಸಿದ ಯದುವೀರ್‌