ಚಿಕ್ಕಮಗಳೂರು: ಜಿಲ್ಲೆಯ (Chikkamagaluru news) ದತ್ತಪೀಠದಲ್ಲಿ (Datta Peetham) ದತ್ತಜಯಂತಿಗೆ (Datta Jayanti 2024) ದಿನಗಣನೆ ಆರಂಭವಾಗುತ್ತಿರುವಂತೆಯೇ, ಗುಹೆಯೊಳಗಿರುವ ಗೋರಿಗಳ ಮೇಲೆ ಕುಂಕುಮ ಹಚ್ಚಿರುವ ಆರೋಪ ಕೇಳಿಬಂದಿದೆ. ಇದು ಇಸ್ಲಾಂ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುವ ಪ್ರಯತ್ನ ಎಂದು ಶಾಖಾದ್ರಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಎದುರು ಶಾಖಾದ್ರಿ ಕುಟುಂಬಸ್ಥರು ಪ್ರತಿಭಟನೆ ನಡೆಸಿ, ಮುಜರಾಯಿ ಇಲಾಖೆಯ ಅಧಿಕಾರಿಗಳ ಜೊತೆ ಕೆಲ ಕಾಲ ವಾಗ್ವಾದಕ್ಕಿಳಿದರು. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ವಿವಾದಿತ ಗುಹೆಯೊಳಗಿರುವ ಗೋರಿಗಳಿಗೆ ಅರ್ಚಕರು ಕುಂಕುಮ ಹಚ್ಚಿ ಪೂಜೆ ಮಾಡಿದ್ದಾರೆ. ಇದು ಮುಸ್ಲಿಂ ಸಮುದಾಯಕ್ಕೆ ವಿರುದ್ಧವಾಗಿದೆ ಎಂದು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಮುಂಭಾಗ ಶಾಖಾದ್ರಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.
ಕಳೆದ ಸೆಪ್ಟೆಂಬರ್‌ನಲ್ಲೇ ಕುಂಕುಮ ಹಚ್ಚಿ ಪೂಜೆ ಮಾಡಿದ್ದಕ್ಕೆ ಮುಸ್ಲಿಂ ಸಮುದಾಯ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಇದೀಗ ಮತ್ತೆ ಕುಂಕುಮ ಹಚ್ಚಿ ಗೋರಿಗಳ ಪೂಜೆ ಮಾಡಿದಕ್ಕೆ ವಿರೋಧ ವ್ಯಕ್ತವಾಗಿದೆ. ಸಂಪೂರ್ಣ ಹಿಂದೂ ಪೀಠಕ್ಕೆ ಆಗ್ರಹಿಸಿ ಡಿಸೆಂಬರ್ 6 ರಿಂದ 14 ರ ವರೆಗೆ ದತ್ತಜಯಂತಿ ನಡೆಯಲಿದೆ. ಈ ಮಧ್ಯೆ ಕುಂಕುಮ ವಿವಾದ ಶುರುವಾಗಿದ್ದರಿಂದ ಹಿಂದೂ ಸಂಘಟನೆಗಳ ಮುಖಂಡರನ್ನ ಜಿಲ್ಲಾಡಳಿತ ಸಭೆ ಕರೆದಿದೆ.
ಬಾಬಾಬುಡನ್ ಗಿರಿ ಅಥವಾ ಶ್ರೀಗುರುದತ್ತಾತ್ರೇಯ ಪೀಠ ಮುಸ್ಲಿಮರಿಗೆ ಸೇರಿದ್ದೇ, ಹಿಂದೂಗಳಿಗೆ ಸೇರಿದ್ದೇ ಎನ್ನುವುದು ಹಿಂದಿನಿಂದಲೂ ವಿವಾದಕ್ಕೆ ಕಾರಣವಾಗಿದೆ. ಸರಕಾರಿ ದಾಖಲೆಗಳಲ್ಲಿ ಶ್ರೀ ಗುರು ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ಹೇಳಲಾಗಿದೆ. ಈ ಸ್ಥಳವನ್ನು ಬಾಬಾ ಬುಡನ್ ಗಿರಿ ಎಂದು ಕೆಲವರು ಕರೆದರೆ, ಇನ್ನು ಕೆಲವರು ಇನಾಂ ದತ್ತಾತ್ರೇಯ ಪೀಠ ಎನ್ನುತ್ತಾರೆ. ಒಂದು ಕಾಲದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ತಾಣವಾಗಿ ಇದು ಗುರುತಿಸಲ್ಪಟ್ಟಿತ್ತು. ಆದರೆ, ಬಳಿಕ ವಿವಾದ ಹುಟ್ಟಿಕೊಂಡಿತು. ದತ್ತಪೀಠಕ್ಕೆ ಹಿಂದೂ ಮತ್ತು ಮುಸ್ಲಿಮರಿಬ್ಬರೂ ನೂರಾರು ವರ್ಷಗಳಿಂದ ನಡೆದುಕೊಳ್ಳುತ್ತಿದ್ದರು. ಸಂಘಪರಿವಾರದವರು 1998ರಲ್ಲಿ ದತ್ತ ಮಾಲಾ ಅಭಿಯಾನ ಆರಂಭಿಸಿದ ನಂತರ ಕ್ಷೇತ್ರವು ದೇಶವ್ಯಾಪಿ ಗಮನ ಸೆಳೆಯಿತು.
ಇದನ್ನೂ ಓದಿ: Datta peetha: ದತ್ತಮಾಲಾ ಅಭಿಯಾನ ಆರಂಭ, ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ