ಚನ್ನಪಟ್ಟಣ: ಚನ್ನಪಟ್ಟಣದ ಪ್ರತಿ ಪಂಚಾಯಿತಿಯಲ್ಲಿ ರೂ.2 ಕೋಟಿಯಿಂದ 5-6 ಕೋಟಿ ರೂ.ವರೆಗೂ ಅನುದಾನ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಚನ್ನಪಟ್ಟಣದ (Channapatna) ವಿವಿಧ ಪಂಚಾಯಿತಿ ಮಟ್ಟದಲ್ಲಿ ಅನೇಕ ಕಾಮಗಾರಿಗಳಿಗೆ ಚಾಲನೆ ನೀಡಿ, ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ಚನ್ನಪಟ್ಟಣದಲ್ಲಿ 300 ಕೋಟಿ ರೂ.ಗೂ ಹೆಚ್ಚಿನ ಅನುದಾನದ ಅಭಿವೃದ್ಧಿ ಯೋಜನೆಗಳನ್ನು ನಮ್ಮ ಸರ್ಕಾರ ಕೈಗೆತ್ತಿಕೊಂಡಿದೆ. ಈ ತಾಲೂಕಿನ ಜನರಿಗೆ 5 ಸಾವಿರ ಮನೆಗಳನ್ನು ಮಂಜೂರು ಮಾಡಿ, ಫಲಾನುಭವಿಗಳಿಗೆ ಹಂಚಲಾಗುತ್ತಿದೆ. ಪ್ರತಿ ಪಂಚಾಯ್ತಿಯಲ್ಲಿ 100, 150 ಮನೆಗಳನ್ನು ನೀಡಲಾಗುತ್ತಿದೆ. ಇನ್ನು ನೀರಾವರಿ ಕಾಲುವೆ ಅಭಿವೃದ್ಧಿ, ಕೆರೆ ನೀರು ತುಂಬಿಸುವ ಕೆಲಸ ನಡೆಯಲಿದೆ.
ಈ ಸುದ್ದಿಯನ್ನೂ ಓದಿ | MB Patil: ಕರ್ನಾಟಕದಲ್ಲಿ ವಹಿವಾಟು ವಿಸ್ತರಣೆಗೆ ಸನ್ಮಿನಾ, ಲೀಪ್‌ಫೈವ್ ಟೆಕ್ನಾಲಜಿ ಆಸಕ್ತಿ: ಎಂ.ಬಿ. ಪಾಟೀಲ
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಇಡೀ ದಿನ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಶುಕ್ರವಾರ ನಾನು ಹಾಗೂ ರಾಮಲಿಂಗಾ ರೆಡ್ಡಿ ಅವರು ಸೇರಿ ಪಂಚಾಯಿತಿ ಮಟ್ಟದ ಕಾಮಗಾರಿಗಳ ಉದ್ಘಾಟನೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಾನೇ ಅಭ್ಯರ್ಥಿ ಎಂದು ಭಾವಿಸಿ ಮತ ಹಾಕಿ
ಮುಂದಿನ ಒಂದು ವಾರದಲ್ಲಿ ಉಪಚುನಾವಣೆ ದಿನಾಂಕ ಪ್ರಕಟವಾಗಲಿದ್ದು, ಅಭ್ಯರ್ಥಿ ಆಯ್ಕೆ ಬಗ್ಗೆ ಕೇಳಿದಾಗ, ನಾವು ಅಭ್ಯರ್ಥಿ ಬಗ್ಗೆ ಆಲೋಚಿಸುತ್ತಿಲ್ಲ. ಇಲ್ಲಿ ನಾನೇ ಅಭ್ಯರ್ಥಿ ಎಂದು ಭಾವಿಸಿ ಮತ ಹಾಕಿ ಎಂದು ನಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ವ್ಯಕ್ತಿ ಹಾಗೂ ಸರ್ಕಾರ ನಾನೇ ಆಗಿದ್ದು, ಅಭ್ಯರ್ಥಿಗಿಂತ ನನ್ನ ಮುಖ ನೋಡಿ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರ ವಿರುದ್ಧ 50 ಕೋಟಿ ವಸೂಲಿ ಆರೋಪ ಹಾಗೂ ಎಫ್ಐಆರ್ ದಾಖಲಾಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗುರುವಾರ ನಡೆದ ದಸರಾ ಮಹೋತ್ಸವದ ಉದ್ಘಾಟನೆ ಕಾರ್ಯಕ್ರಮಗಳಲ್ಲಿ ನಿರತವಾಗಿದ್ದೆ. ಶುಕ್ರವಾರ ಚನ್ನಪಟ್ಟಣ ಪ್ರವಾಸ ಮಾಡುತ್ತಿದ್ದೇನೆ. ಹೀಗಾಗಿ ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರ ಖಾಸಗಿ ವಿಚಾರಕ್ಕೆ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
ಇಡೀ ಮೈಸೂರು ತುಂಬಾ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಅದರ ಸೌಂದರ್ಯವನ್ನು ರಾಜ್ಯದ ಜನತೆ ಕಣ್ತುಂಬಿಕೊಳ್ಳಬೇಕು. ದಸರಾ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ರಾಜ್ಯದ ಎಲ್ಲಾ ಭಾಗಗಳಿಂದ ಜನ ಆಗಮಿಸಿ ಈ ಭವ್ಯ ಆಚರಣೆಯ ಭಾಗವಾಗಬೇಕು ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Aero India Show 2025: ಫೆ.10ರಿಂದ ಬೆಂಗಳೂರಿನಲ್ಲಿ ‘ಏರೋ ಇಂಡಿಯಾ-2025’ ವೈಮಾನಿಕ ಪ್ರದರ್ಶನ
ಜಾತಿ ಗಣತಿ; ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸಲಾಗುವುದು
ಜಾತಿ ಗಣತಿ ವಿಚಾರವಾಗಿ ಡಿ.ಕೆ. ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪಕ್ಷದ ನೀತಿಯಂತೆ ನಾವು ಈ ವಿಚಾರದಲ್ಲಿ ತೀರ್ಮಾನ ಮಾಡುತ್ತೇವೆ. ಎಲ್ಲಾ ಸಮುದಾಯಗಳಿಗೂ ನಾವು ನ್ಯಾಯ ಒದಗಿಸಿಕೊಡುತ್ತೇವೆ. ಈ ವರದಿಯಲ್ಲಿ ಏನಾದರೂ ನ್ಯೂನ್ಯತೆ ಇದ್ದರೆ ಸಿದ್ದರಾಮಯ್ಯ, ನಾನು ಹಾಗೂ ನಮ್ಮ ಪಕ್ಷದ ನಾಯಕರು ಕೂತು ಸರಿಪಡಿಸುತ್ತೇವೆ. ಈ ವಿಚಾರವಾಗಿ ಗೊಂದಲ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.