Wednesday, 9th October 2024

DK Shivakumar: ಒಂದು ರಾಷ್ಟ್ರ, ಒಂದು ಚುನಾವಣೆ ಹಾಸ್ಯಾಸ್ಪದ ಎಂದ ಡಿ.ಕೆ. ಶಿವಕುಮಾರ್

DK Shivakumar

ಬೆಂಗಳೂರು: ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ರಾಷ್ಟ್ರ, ಒಂದು ಚುನಾವಣೆ (One Nation One Election) ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಆಪರೇಷನ್ ಕಮಲಕ್ಕೆ ಮೂಲದಾತರುಗಳಾದ ಬಿಜೆಪಿಯವರೇ (BJP) ಒಂದು ರಾಷ್ಟ, ಒಂದು ಚುನಾವಣೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.

ಕುಮಾರಪಾರ್ಕ್ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಬುಧವಾರ ಮಾತನಾಡಿದ ಅವರು, ಅನೇಕ ರಾಜ್ಯಗಳಲ್ಲಿ ಸರ್ಕಾರಗಳನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಮುಂದಾಗಿದ್ದಾರೆ. ಪ್ರಾದೇಶಿಕ ಪಕ್ಷಗಳು ಬೆಳೆಯುತ್ತಿರುವುದನ್ನು ತಡೆಯಲು ಕೇಂದ್ರ ಬಿಜೆಪಿ ಸರ್ಕಾರ ಈ ಹುನ್ನಾರ ಮಾಡಿದೆ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | UGCET-UGNEET 2024: ಸಿಇಟಿ-ನೀಟ್ 2ನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ಫಲಿತಾಂಶ ಪ್ರಕಟ

ದೇಶದಲ್ಲಿ ಎಲ್ಲಾ ಪಕ್ಷಗಳಿಗೂ ಅವಕಾಶ ಸಿಗಬೇಕು. ಈ ಹಿಂದೆಯೂ ಒಂದು ರಾಷ್ಡ್ರ, ಒಂದು ಚುನಾವಣೆ ವ್ಯವಸ್ಥೆ ನಮ್ಮಲ್ಲಿತ್ತು. ನಮ್ಮ ರಾಜ್ಯದಲ್ಲಿಯೂ ಒಟ್ಟಿಗೆ ಚುನಾವಣೆ ಮಾಡಲಾಯಿತು. ಆನಂತರ ಸಾಧ್ಯವಾಯಿಯೇ? ಆಗಲಿಲ್ಲ. ಏಕೆಂದರೆ ಒಂದಷ್ಟು ಸರ್ಕಾರಗಳು ಕ್ಯಾಬಿನೆಟ್ ಅಲ್ಲಿ ಆರು ಹಾಗೂ ಮೂರು ತಿಂಗಳು ಮುಂಚಿತವಾಗಿ ಚುನಾವಣೆಗೆ ಹೋಗುತ್ತೇವೆ ಎಂದರು, ಒಂದಷ್ಟು ರಾಜ್ಯಗಳಲ್ಲಿ ಸರ್ಕಾರಗಳೇ ವಿಸರ್ಜನೆಗೊಂಡವು. ಹೀಗಿರುವಾಗ ಈ ವ್ಯವಸ್ಥೆಯನ್ನು ಜಾರಿಗೆ ತರಲು ಹೇಗೆ ಸಾಧ್ಯ?” ಎಂದರು.

ಬಿಜೆಪಿ ಮೊದಲು ಮಹಿಳಾ ಮೀಸಲಾತಿ ಬಗ್ಗೆ ಮಾತನಾಡಲಿ

ಬಿಜೆಪಿ ಈ ಪ್ರಯತ್ನ ಮಾಡುತ್ತಿರುವುದು ಸರಿಯಿಲ್ಲ. ಅಲ್ಲದೇ ಮೂರನೇ ಒಂದರಷ್ಟು ಬಹುಮತವು ಅವರಿಗಿಲ್ಲ. ಹೀಗಿರುವಾಗ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಒಮ್ಮತದ ಅಭಿಪ್ರಾಯ ಕೇಳಲಿ. ಇದರ ಹೊರತು ಇಂತಹ ಪ್ರಸ್ತಾವನೆಗಳು ವ್ಯರ್ಥ. ಮೊದಲು ಮಹಿಳಾ ಮೀಸಲಾತಿ ಬಗ್ಗೆ ಕ್ರಮ ತೆಗೆದುಕೊಳ್ಳಲಿ. ಕ್ಷೇತ್ರ ವಿಂಗಡಣೆಗೆ ಕ್ರಮ ತೆಗೆದುಕೊಳ್ಳಲಿ. ಒಂದು ಚುನಾವಣೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಅರ್ಥಪೂರ್ಣವಾದ ಮಾತಿಗೆ ನಮ್ಮ ಒಮ್ಮತದ ಒಪ್ಪಿಗೆಯಿದೆ ಎಂದರು.

ಒಕ್ಕಲಿಗ ನಾಯಕರ ನಿಯೋಗ ಭೇಟಿಗೆ ಸಮಯ

ಮುನಿರತ್ನ ವಿಚಾರವಾಗಿ ಒಕ್ಕಲಿಗ ನಾಯಕರ ನಿಯೋಗದ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಒಕ್ಕಲಿಗ ನಾಯಕರ ನಿಯೋಗದ ಭೇಟಿಗೆ ಗುರುವಾರ (ಸೆ.18) ಸಂಜೆ ಸಮಯ ನೀಡಿದ್ದೇನೆ. ಈ ವಿಚಾರವಾಗಿ ಅಶೋಕ್ ಅವರ ಹಾಗೂ ಬೇರೆಯವರ ನುಡಿಮುತ್ತುಗಳನ್ನು ತಾವೆಲ್ಲಾ ಗಮನಿಸಿದ್ದೀರಿ. ಇದರ ಬಗ್ಗೆ ಆನಂತರ ಮಾತನಾಡುತ್ತೇನೆ ಎಂದರು.

ದೇವೇಗೌಡರೇ ಒಕ್ಕಲಿಗರ ಸರ್ವೋಚ್ಚ ನಾಯಕ ಎನ್ನುವ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌ ಅವರು, ದೇಶದ ಪ್ರಧಾನಿಗಳಾಗಿದ್ದ ದೇವೇಗೌಡರನ್ನು ಸರ್ವೋಚ್ಚ ನಾಯಕರಲ್ಲ ಎಂದು ನಾವು ಹೇಳಿಲ್ಲ. ಅವರನ್ನು ನಾವು ನಾಯಕರಲ್ಲ ಎಂದು ಹೇಳಲು ಸಾಧ್ಯವೇ? ದೇವೇಗೌಡರನ್ನು ದೇಶದ ಪ್ರಧಾನಿಗಳನ್ನಾಗಿ ಮಾಡಿದ್ದೇ ಕಾಂಗ್ರೆಸ್ ಪಕ್ಷ. ಬಿಜೆಪಿ ಅವರಿಗೆ ಸ್ಥಾನ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ನೀಡದೇ ಇದ್ದಾಗ ಯಡಿಯೂರಪ್ಪ ಅವರು, ಆರ್. ಅಶೋಕ್ ಅವರು ಏನೇನು ಮಾತನಾಡಿದ್ದರು? ಸುಮ್ಮನೆ ಸಮಯಕ್ಕೆ ತಕ್ಕಂತೆ ಮಾತನಾಡುವುದಲ್ಲ ಎಂದರು.

ಈ ಸುದ್ದಿಯನ್ನೂ ಓದಿ | Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ!

ಡಿ.ಕೆ. ಸಹೋದರರು ಮುನಿರತ್ನ ವಿರುದ್ದ ಪಿತೂರಿ ಮಾಡುತ್ತಿದ್ದಾರೆ ಎನ್ನುವ ಬಿಜೆಪಿಯವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹಾಗಾದರೆ ನಾವು ಹೇಳಿಕೊಟ್ಟಂತೆ ಅವರು (ಮುನಿರತ್ನ) ಡೈಲಾಗ್ ಹೊಡೆಯುತ್ತಿದ್ದಾರಾ? ಅವರ ಮಾತುಗಳನ್ನು ನಾನು ನೋಡಿದೆ, ಸ್ವಾಮೀಜಿಗಳು ನೋಡಿದ್ದಾರಂತೆ. ಹೀಗೆ ಮಾತನಾಡು ಎಂದು ನಾವು ಅವರಿಗೆ ಹೇಳಿಕೊಟ್ಟಿದ್ದೇವೆಯೇ? ಇಲ್ಲಿ ಡೈಲಾಗ್ ನಿರ್ದೇಶಕರು, ನಿರ್ಮಾಪಕರು ಯಾರಿದ್ದಾರೆ? ಎಲ್ಲರೂ ಅವರ ಜತೆಯಲ್ಲೇ ಇದ್ದಾರೆ ಎಂದರು.