Saturday, 23rd November 2024

DK Shivakumar: ಕಾಂಗ್ರೆಸ್‌ ಸರ್ಕಾರ ಒಳ ಮೀಸಲಾತಿ ಜಾರಿಗೆ ತಂದೇ ತರುತ್ತದೆ; ಡಿ.ಕೆ. ಶಿವಕುಮಾರ್

DK Shivakumar

ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಕೊಟ್ಟ ಮಾತಿನಂತೆ ಒಳ ಮೀಸಲಾತಿ ಜಾರಿಗೆ ಬದ್ಧವಾಗಿದ್ದು, ಈ ಸಂಬಂಧ ನಿನ್ನೆ ಸಚಿವ ಸಂಪುಟ ಸಭೆಯಲ್ಲಿ, ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿ ರಚಿಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಹೇಳಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

ಮಾದಿಗ ಸಮುದಾಯಕ್ಕೆ ಒಳಮೀಸಲು ಆದಷ್ಟು ಶೀಘ್ರ ಜಾರಿಗೆ ತರಬೇಕು ಎಂದು ಮಾಜಿ ಸಚಿವರಾದ ಎಚ್. ಆಂಜನೇಯ, ಶಿವಣ್ಣ, ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ, ಮಾಜಿ ಸಂಸದ ಚಂದ್ರಪ್ಪ ಅವರ ನೇತೃತ್ವದ ನಿಯೋಗವು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ವೇಳೆ ಸಮಿತಿಗೆ ಮೂರು ತಿಂಗಳಿಗಿಂತ ಹೆಚ್ಚು ಕಾಲಾವಕಾಶ ನೀಡಬಾರದು. ಮೂರು ತಿಂಗಳ ನಂತರ ಶೀಘ್ರ ಒಳಮೀಸಲಾತಿ ಜಾರಿಯಾಗಬೇಕು ಎಂದು ನಿಯೋಗವು ಉಪಮುಖ್ಯಮಂತ್ರಿಗಳ ಬಳಿ ಮನವಿ ಮಾಡಿತು.

ಈ ಸುದ್ದಿಯನ್ನೂ ಓದಿ | CM Siddaramaiah: ವರದಿ ಬಂದ ತಕ್ಷಣ ಒಳ ಮೀಸಲಾತಿ ಜಾರಿ: ಸಿದ್ದರಾಮಯ್ಯ

ನಂತರ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ಜಾರಿ ವಿಚಾರವಾಗಿ ನಾವು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೆವು. ಚಿತ್ರದುರ್ಗದ ಸಮಾವೇಶದಲ್ಲೂ ನಾವು ಈ ವಿಚಾರವಾಗಿ ಜನರಿಗೆ ಮಾತು ಕೊಟ್ಟಿದ್ದು, ಅದಕ್ಕೆ ನಾವು ಬದ್ಧರಾಗಿದ್ದೇವೆ. ಒಳಮೀಸಲಾತಿ ವಿಚಾರದಲ್ಲಿ ಜನಸಂಖ್ಯೆ ಆಧಾರದ ಹಾಗೂ ಎಲ್ಲಾ ವರ್ಗಕ್ಕೂ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಸದಾ ಸಾಮಾಜಿಕ ನ್ಯಾಯಕ್ಕೆ ಸದಾ ಬದ್ಧ

ಕಾಂಗ್ರೆಸ್ ಪಕ್ಷ ಸದಾ ಸಾಮಾಜಿಕ ನ್ಯಾಯಕ್ಕೆ ಸದಾ ಬದ್ಧವಾಗಿದೆ. ಸಂವಿಧಾನ ಆರಂಭದಿಂದ ಇಲ್ಲಿಯವರೆಗೂ ಸಾಮಾಜಿಕ ನ್ಯಾಯ ಕಾಪಾಡುತ್ತಾ ಬಂದಿದೆ. ಸರ್ವರಿಗೂ ಸಮಬಾಳು, ಸಮಪಾಲು ತತ್ವ ಮುಂದುವರಿಸಿಕೊಂಡು ಹೋಗುತ್ತೇವೆ. ನಮ್ಮ ಸರ್ಕಾರದ ತೀರ್ಮಾನವನ್ನು ಸ್ವಾಗತಿಸಿ ಪಕ್ಷಾತೀತವಾಗಿ ನಾಯಕರುಗಳು ಬಂದು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಸಮಿತಿ ವರದಿ ವಿಳಂಬವಾದರೆ ನೇಮಕಾತಿಯೂ ವಿಳಂಬವಾಗಲಿದೆ ಎಂದು ಕೇಳಿದಾಗ, “ಮೂರು ತಿಂಗಳಲ್ಲಿ ವರದಿ ನೀಡಲು ನಾವು ಸೂಚಿಸಿದ್ದು, ಅವರು ಮೂರು ತಿಂಗಳಲ್ಲಿ ವರದಿ ನೀಡುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

ಕುನ್ಹಾ ವರದಿ ನೋಡಿ ನನಗೇ ಕೊರೋನಾ ಬಂದಂತಾಗಿದೆ

ಕೋವಿಡ್ ಅವಧಿಯ ಹಗರಣಗಳ ಸಂಬಂಧ ಕುನ್ಹಾ ಅವರ ವರದಿ ಮೇಲೆ ಉಪಸಮಿತಿ ಸಭೆ ಬಗ್ಗೆ ಕೇಳಿದಾಗ, “ಕುನ್ಹಾ ಅವರ ವರದಿ ನೋಡಿ, ನನಗೇ ಕೊರೋನಾ ಬರುವಂತೆ ಕಾಣುತ್ತಿದೆ. ಅಷ್ಟು ಗಾಬರಿಯಾಗಿದೆ. ನಾವು ಅವರಿಂದ ಹೆಚ್ಚಿನ ಮಾಹಿತಿ ಕೇಳಿದ್ದೇವೆ. ವರದಿಯಿಂದಲೇ ಕೋರೋನಾ ಹರಡುವಂತಿದೆ. ಈ ಬಗ್ಗೆ ಆರೋಗ್ಯ ಸಚಿವರು ಮಾತನಾಡುತ್ತಾರೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನಲ್ಲಿ ‘ಕ್ರೊಮ್ಯಾಟಿಕ್ ರಿದಮ್ಸ್’ ವರ್ಣಚಿತ್ರಗಳ ಪ್ರದರ್ಶನ

ನಾನೇ ಅನುದಾನ ಕೊಟ್ಟಿಲ್ಲ

ಜಯನಗರಕ್ಕೆ ಅನುದಾನ ನೀಡಿಲ್ಲ ಎಂಬ ಬಿಜೆಪಿ ಶಾಸಕರ ಆರೋಪದ ಬಗ್ಗೆ ಕೇಳಿದಾಗ, ನಾನೇ ಅನುದಾನ ಕೊಟ್ಟಿಲ್ಲ. ಅವರು ನಮ್ಮ ಸರ್ಕಾರದ ಮೇಲೆ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲಿ ಎಂದು ತಿಳಿಸಿದರು. ಅವರು “ನಮ್ಮ ತೆರಿಗೆ, ನಮ್ಮ ಹಕ್ಕು” ಪ್ರತಿಭಟನೆ ಮಾಡುತ್ತಾರಂತೆ ಎಂದು ಕೇಳಿದಾಗ, ತಡ ಮಾಡುವುದು ಬೇಡ, ಕೂಡಲೇ ಮಾಡಲಿ. ಅವರು ನನ್ನ ಭೇಟಿಗೆ ಬಂದಿದ್ದರು. ಅವರು ಪ್ರತಿಭಟನೆ ಮಾಡಬೇಕು ಎಂದು ತಿಳಿಸಿದರು.