Thursday, 12th December 2024

ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಿಯಮ ಬದಲಾವಣೆ, ಯಾವುದೇ ಗೊಂದಲಗಳಿಲ್ಲ: ಸಚಿವ ಸುಧಾಕರ್

ಬೆಂಗಳೂರು: ಇದೀಗ ಹೊಸ ವರ್ಷಾಚರಣೆಯ ನಿಯಮಗಳಲ್ಲಿ ಸರ್ಕಾರ ಮತ್ತೆ ಬದಲಾವಣೆ ಮಾಡಿದೆ. ಸಂಜೆಯಿಂದ ಜಾರಿಗೆ ತರಲಾಗುತ್ತಿದ್ದ ನಿಷೇಧಾಜ್ಞೆ ಮಧ್ಯಾಹ್ನ 12 ಗಂಟೆಯಿಂದಲೇ ಜಾರಿಗೆ ಬರುತ್ತಿದ್ದು, ಸರ್ಕಾರದ ಏಕಾಏಕಿ ಮಾರ್ಪಾಡು ಕ್ರಮ ಗಳನ್ನು ಸಚಿವ ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ.

ಮಧ್ಯಾಹ್ನದಿಂದಲೇ ಬೆಂಗಳೂರಿನಲ್ಲಿ ಹಲವು ನಿಯಮಗಳು ಬದಲಾಗುತ್ತಿರುವುದಕ್ಕೆ ಹೋಟೆಲ್, ಬಾರ್, ಪಬ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ನಡುವೆ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಚಿವ ಸುಧಾಕರ್, ರಾಜ್ಯದ ಜನತೆಯ ಹಿತದೃಷ್ಟಿಯಿಂದ ನಿಯಮ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ನಿಷೇಧಾಜ್ಞೆ ಹೇರಿದ್ದು ಗೃಹ ಇಲಾಖೆಗೆ ಸಂಬಂಧಿಸಿದ್ದು. ಗೃಹ ಸಚಿವ ಬೊಮ್ಮಾಯಿ ಅವರು ಹಿರಿಯರು, ಅನುಭವಿ ರಾಜಕಾರಣಿ. ಅವರ ನಿರ್ಧಾರದಂತೆ ಈ ಕ್ರಮ ಜಾರಿಯಾಗುತ್ತಿದೆ. ಇನ್ನು ಜನಪರ ಆಡಳಿತ ನೀಡುವ ಸಂದರ್ಭದಲ್ಲಿ ಜನರಿಗೆ ಪೂರಕವಾದ ರೀತಿಯಲ್ಲಿ ನಿರ್ಧಾರ ಬದಲಿಸುವುದರಿಂದ ಒಳ್ಳೆಯದೇ ಹೊರತು ಗೊಂದಲ ಎಂದು ಹೇಳಲಾಗುವುದಿಲ್ಲ ಎಂದು ಹೇಳಿದರು.

ಈ ಹಿಂದೆ ನೈಟ್ ಕರ್ಫ್ಯೂ ಹೇರಲಾಗಿತ್ತು. ಆದರೆ ವಿಪಕ್ಷದವರು ವಿರೋಧಿಸಿದ ಕಾರಣ ನೈಟ್ ಕರ್ಫ್ಯೂ ಹಿಂಪಡೆಯಲಾಯಿತು. ಕಂದಾಯ ಸಚಿವ ಆರ್.ಅಶೋಕ್ ನೈಟ್ ಕರ್ಫ್ಯೂ ಮಾಡಿದರೆ ಚೆನ್ನಾಗಿರುತ್ತಿತ್ತು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಷ್ಟೇ. ಈ ಬಗ್ಗೆ ಯಾವ ಗೊಂದಲಗಳಿಲ್ಲ ಎಂದು ಹೇಳಿದರು.