Friday, 22nd November 2024

Deepavali 2024: ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸುವ ಕನ್ನಡ ಸಿನಿಮಾ ಹಾಡುಗಳಿವು! ವಿಡಿಯೊಗಳಿವೆ

Deepavali 2024

ದೇಶಾದ್ಯಂತ ಐದು ದಿನಗಳ ಕಾಲ ಆಚರಿಸಲಾಗುವ ಬೆಳಕಿನ ಹಬ್ಬ ದೀಪಾವಳಿಯ (Deepavali 2024) ಸಂಭ್ರಮ ಹೆಚ್ಚಿಸುವ ಸಾಕಷ್ಟು ಹಾಡುಗಳು ಕನ್ನಡ ಸಿನಿಮಾದಲ್ಲೂ (Kannada film songs) ಇವೆ. ತುಂಬಾ ಹಳೆಯದಾದರೂ ಇಂದಿಗೂ ಜನಪ್ರಿಯವಾಗಿದೆ. ಈ ಹಾಡುಗಳು (deepavali kannada songs) ಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸುತ್ತವೆ. ಈ ಬಾರಿಯ ದೀಪಾವಳಿ ಹಬ್ಬದ ವೇಳೆ ಮನೆಯಲ್ಲಿ ಹಬ್ಬದ ಉತ್ಸವವನ್ನು ಹೆಚ್ಚಿಸಬಲ್ಲ ಕೆಲವು ಕನ್ನಡ ಚಿತ್ರದ ಹಾಡುಗಳು ಇಂತಿವೆ.

ಮುದ್ದಿನ ಮಾವ ಚಿತ್ರದ ದೀಪಾವಳಿ ದೀಪಾವಳಿ

1993ರಲ್ಲಿ ಬಿಡುಗಡೆಯಾದ ಮುದ್ದಿನ ಮಾವ ಚಿತ್ರದ ದೀಪಾವಳಿ ದೀಪಾವಳಿ ಹಾಡು ಇಂದಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಶಶಿಕುಮಾರ್, ಶ್ರುತಿ ಅಭಿನಯದ ಈ ಚಿತ್ರದ ದೀಪಾವಳಿ ದೀಪಾವಳಿ ಹಾಡನ್ನು ಮರೆಯುವಂತಿಲ್ಲ. ಹಂಸಲೇಖ ಸಾಹಿತ್ಯ , ಎಸ್.ಪಿ. ಬಾಲಸುಬ್ರಮಣ್ಯಂ ಸಂಗೀತ ನೀಡಿರುವ ಈ ಹಾಡನ್ನು ಡಾ. ರಾಜ್‌ಕುಮಾರ್, ಮಂಜುಳಾ ಗುರುರಾಜ್ ಮತ್ತು ಎಸ್.ಪಿ ಬಾಲಸುಬ್ರಮಣ್ಯಂ ಹಾಡಿದ್ದು, ದೀಪಾವಳಿ ಸಂದರ್ಭದಲ್ಲಿ ಎಲ್ಲರೂ ಇದನ್ನು ನೆನಪಿಸಿಕೊಳ್ಳುತ್ತಾರೆ.

ನಂಜುಂಡಿ ಚಿತ್ರದ ದೀಪದಿಂದ ದೀಪವಾ ಹಚ್ಚಬೇಕು ಮಾನವ

ಮಧುಬಾಲಕೃಷ್ಣ, ನಂದಿತಾ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಡಾ. ಶಿವರಾಜ್‌ಕುಮಾರ್‌ ನಟನೆಯ ನಂಜುಡಿ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಹಂಸಲೇಖ ಅವರು ಬರೆದಿದ್ದಾರೆ. ಎಸ್‌.ಆರ್. ಬ್ರದರ್ಸ್ ನಿರ್ದೇಶನದ ಈ ಸಿನಿಮಾದಲ್ಲಿ ಉಮಾಶ್ರೀ, ಡೆಬಿನಾ ಬ್ಯಾನರ್ಜಿ, ಲೋಕೇಶ್, ಸಾಧುಕೋಕಿಲ, ದೊಡ್ಡಣ್ಣ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ. ರಾಜ್ಯ ಪ್ರಶಸ್ತಿ ಪಡೆದ ಈ ಸಿನಿಮಾ 2003ರಲ್ಲಿ ತೆರೆಗೆ ಬಂದಿತ್ತು.

ಆಂಟಿ ಪ್ರೀತ್ಸೆ ಚಿತ್ರದ ಸ್ನೇಹಾ ದೀಪಾವಳಿ

ದೀಪಾವಳಿಯಂದು ಪ್ಲೇ ಮಾಡಬಹುದಾದ ಮತ್ತೊಂದು ಹಾಡು ಅನಂತ್ ನಾಗ್, ಖುಷ್ಬೂ, ರಾಮ್ ಕುಮಾರ್, ಅನು ಪ್ರಭಾಕರ್ ಅಭಿನಯದ ‘ಆಂಟಿ ಪ್ರೀತ್ಸೆ’ ಚಿತ್ರದ ಸ್ನೇಹಾ ದೀಪಾವಳಿ.. 2001ರಲ್ಲಿ ತೆರೆಗೆ ಬಂದ ಈ ಚಿತ್ರದ ಸ್ನೇಹ ದೀಪಾವಳಿ ಹಾಡು ಕೆ ಕಲ್ಯಾಣ್ ಸಾಹಿತ್ಯ, ಎಲ್‌.ಎನ್. ಶಾಸ್ತ್ರಿ ಸಂಗೀತದಲ್ಲಿ ಮೂಡಿಬಂದಿದ್ದು, ಕೆ.ಎಸ್. ಚಿತ್ರಾ, ಎಲ್‌.ಎನ್. ಶಾಸ್ತ್ರಿ ಹೇಮಂತ್ ಹಾಡಿದ್ದಾರೆ.

ನಂದಾದೀಪ ಚಿತ್ರದ ನಾಡಿನಿಂದ ಈ ದೀಪಾವಳಿ

1963ರಲ್ಲಿ ತೆರೆಗೆ ಬಂದಿರುವ ಈ ಚಿತ್ರದಲ್ಲಿ ಡಾ.ರಾಜ್‌ಕುಮಾರ್, ಹರಿಣಿ ಮತ್ತು ಲೀಲಾವತಿ ಪ್ರಮಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಪ್ರಸಿದ್ಧ ಹಾಡುಗಳಲ್ಲಿ ಒಂದಾದ ನಾಡಿನಿಂದ ಈ ದೀಪಾವಳಿ ಹಾಡನ್ನು ಎಸ್. ಜಾನಕಿ ಮತ್ತು ಪಿ. ಲೀಲಾ ಹಾಡಿದ್ದರು. ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಈ ಚಿತ್ರ ಗೆದ್ದುಕೊಂಡಿದೆ.

Deepvavali 2024: ದೀಪಾವಳಿ ಹಬ್ಬದ ಸಂಭ್ರಮ ಹೆಚ್ಚಿಸುವ ಬಾಲಿವುಡ್ ಹಾಡುಗಳಿವು; ವಿಡಿಯೊಗಳಿವೆ

ಚೆಲ್ಲಾಟ ಚಿತ್ರದ ಪಟ ಪಟ ಪಟಾಕಿ

ಗೋಲ್ಡನ್ ಸ್ಟಾರ್ ಗಣೇಶ್, ರೇಖಾ ವೇದವ್ಯಾಸ್ ಅಭಿನಯದ 2006ರಲ್ಲಿ ತೆರೆಗೆ ಬಂದ ಚೆಲ್ಲಾಟ ಚಿತ್ರದ ಪಟ ಪಟ ಪಟಾಕಿ ಹಾಡನ್ನು ಯಾರೂ ಮರೆಯುವಂತಿಲ್ಲ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಗುರುಕಿರಣ್ ಸಂಗೀತದಲ್ಲಿ ಮೂಡಿಬಂದ ಈ ಹಾಡನ್ನು ಉದಿತ್ ನಾರಾಯಣ್ ಹಾಡಿದ್ದರು.

ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ ಚಿತ್ರದ ಊರೆಲ್ಲ ಬೆಳಕಾಗೋ ದೀಪಾವಳಿ

1980ರಲ್ಲಿ ತೆರೆಕಂಡ ರಾಜೇಶ್, ಬಿ. ಸರೋಜಾದೇವಿ ಅಭಿನಯದ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಕರುಣೆ ಚಿತ್ರದ ಊರೆಲ್ಲ ಬೆಳಕಗೋ ದೀಪಾವಳಿ.. ಹುಣಸೂರು ಕೃಷ್ಣಮೂರ್ತಿ ಅವರ ಸಾಹಿತ್ಯವಿರುವ ಈ ಹಾಡನ್ನು ಪಿ ಸುಶೀಲಾ, ಬೆಂಗಳೂರು ಲತಾ ಹಾಡಿದ್ದಾರೆ.

ಯಾರಿಗೆ ಸಾಲುತ್ತೆ ಸಂಬಳ ಚಿತ್ರದ ದೀಪದಿಂದ ದೀಪ ಹಚ್ಚೆ ದೀಪಾವಳಿ

2000ರಲ್ಲಿ ತೆರೆಗೆ ಬಂದಿರುವ ಶಶಿಕುಮಾರ್, ಸುಹಾಸಿನಿ, ಮಣಿರತ್ನಂ, ಅನಂತ್ ನಾಗ್, ಊರ್ವಶಿ, ಅನು ಪ್ರಭಾಕರ್, ಮೋಹನ್ ಶಂಕರ್, ಉಮಾಶ್ರೀ ಅಭಿನಯದ ಯಾರಿಗೆ ಸಾಲುತ್ತೆ ಸಂಬಳ ಚಿತ್ರದ ಹಂಸಲೇಖ ಅವರ ಸಾಹಿತ್ಯದ ದೀಪದಿಂದ ದೀಪ ಹಚ್ಚೆ ದೀಪಾವಳಿ ಹಾಡನ್ನು ಮಂಜುಳಾ ಗುರುರಾಜ್ , ಅರ್ಚನಾ ಉಡುಪ , ನಂದಿತಾ , ರಾಜೇಶ್ ಕೃಷ್ಣನ್, ರಮೇಶ್ ಚಂದ್ರ, ಹೇಮಂತ್ ಹಾಡಿದ್ದಾರೆ.