ಬೆಂಗಳೂರು: ಡೆಂಗ್ಯೂ (Dengue) ಜ್ವರ ಉಲ್ಭಣಗೊಂಡು ಆರು ವರ್ಷದ ಬಾಲಕಿ ಕೇವಲ 48 ಗಂಟೆಗಳಲ್ಲಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ (bengaluru) ನಡೆದಿದೆ. ರೋಗ ನಿರ್ಣಯ ಮಾಡುವ ಮೊದಲೇ ಅವಳ ಮೆದುಳಿನ ಕಾರ್ಯನಿರ್ವಹಣೆ ಮೇಲೆ ಜ್ವರ ಪರಿಣಾಮ ಬೀರಿತ್ತು. ಇದರಿಂದ ಬಾಲಕಿ ಚಿಕಿತ್ಸೆ ಆರಂಭಕ್ಕೂ ಮುನ್ನವೇ ಸಾವನ್ನಪ್ಪಿದ್ದಾಳೆ.
ಡೆಂಗ್ಯೂ ಜ್ವರದಿಂದ ಬಾಲಕಿ ಮೃತಪಟ್ಟಿರುವುದು ಬಳಿಕ ತಿಳಿದು ಬಂದಿದೆ. ಆದರೆ ಇದಕ್ಕೆ ಚಿಕಿತ್ಸೆ ಆರಂಭಿಸುವ ಮೊದಲೇ ಆಕೆ ಮೃತಪಟ್ಟಿದ್ದಾಳೆ. ಸಾಮಾನ್ಯವಾಗಿ, ವೈದ್ಯರು ಡೆಂಗ್ಯೂ ಪರೀಕ್ಷೆಗಳನ್ನು ನಡೆಸುವ ಮೊದಲು ಕನಿಷ್ಠ ಮೂರು ದಿನಗಳ ಕಾಲ ಕಾಯುತ್ತಾರೆ. ಹೀಗಾಗಿ ಬಾಲಕಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಪ್ರಾಣ ಕಳೆದುಕೊಂಡಿದ್ದಾಳೆ. ಬೆಂಗಳೂರಿನಲ್ಲಿ ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿರುವ ಬಾಲಕಿಯ ತಂದೆ ರವೀಂದ್ರ ಅವರು, ಬಾಲಕಿಯ ಸಾವಿನ ಬಳಿಕ ಇತರ ಮಕ್ಕಳ ಪೋಷಕರಲ್ಲಿ ಜಾಗೃತಿ ಮೂಡಿಸಲು ಡೆಂಗ್ಯೂ ಜ್ವರದ ವಿರುದ್ಧ ಎಚ್ಚರಿಕೆಯ ಪೋಸ್ಟರ್ಗಳನ್ನು ತಮ್ಮ ಅಂಗಡಿಯಲ್ಲಿ ಹಾಕುವುದಾಗಿ ತಿಳಿಸಿದ್ದಾರೆ.
ಸೆಪ್ಟೆಂಬರ್ 10ರಂದು ಬಾಲಕಿ ತಲೆನೋವು ಎಂದು ಹೇಳಿಕೊಂಡಿದ್ದಳು. ಬಳಿಕ ಜ್ವರ ಕಾಣಿಸಿಕೊಂಡಿದ್ದು, ಅವಳ ಆರೋಗ್ಯ ಹದಗೆಡಲು ಪ್ರಾರಂಭವಾಯಿತು. ಬಾಲಕಿಗೆ ಜ್ವರ ಉಲ್ಬಣಗೊಂಡಿದ್ದರಿಂದ ಆಕೆಯನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಆದರೆ ಉಳಿಸಲಾಗಲಿಲ್ಲ ಎಂದರು. ಭಾನುವಾರ ಅವಳ ಅಂತಿಮ ಸಂಸ್ಕಾರ ಮುಗಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೆಪ್ಟೆಂಬರ್ 10ರಂದು ಮಧ್ಯಾಹ್ನ 2.30ರ ಸುಮಾರಿಗೆ ಮಗಳನ್ನು ಶಾಲೆಯಿಂದ ಕರೆದುಕೊಂಡು ಬರುವಾಗ ಅಸ್ವಸ್ಥಳಾಗಿದ್ದಳು. ತೀವ್ರ ತಲೆನೋವಿದೆ ಎಂದು ಹೇಳಿದಳು. ಅದಕ್ಕಾಗಿ ಔಷಧವನ್ನು ನೀಡಿದ ಬಳಿಕ ಅವಳು ಮಲಗಿದಳು. ನಿಧಾನಕ್ಕೆ ಜ್ವರ ಕಾಣಿಸಿಕೊಂಡಿದ್ದು, ತಲೆನೋವು ಮುಂದುವರಿದಿತ್ತು. ಅದೇ ದಿನ ರಾತ್ರಿ ಸ್ಥಳೀಯ ವೈದ್ಯರ ಬಳಿಗೆ ಕರೆದುಕೊಂಡು ಹೋದಾಗ ಮಕ್ಕಳಲ್ಲಿ ಜ್ವರದ ಸಮಯದಲ್ಲಿ ತಲೆನೋವು ಸಾಮಾನ್ಯವಾಗಿರುತ್ತದೆ ಎಂದು ವೈದ್ಯರು ಹೇಳಿದರು. ಅವರು ಸೂಚಿಸಿದ ಔಷಧಿಯನ್ನು ಸೇವಿಸಿದ ಅನಂತರ ಅವಳು ಚೆನ್ನಾಗಿ ಮಲಗಿದ್ದಳು ಎಂದು ವಿವರಿಸಿದರು.
ಮರುದಿನ ಅವಳು ಚೆನ್ನಾಗಿದ್ದಳು. ಆದರೆ ರಾತ್ರಿ 7.45ರ ಸುಮಾರಿಗೆ ಆಕೆಯಲ್ಲಿ ಶೀತ ಕಾಣಿಸಿಕೊಂಡಿತು. ಒಂದು ಗಂಟೆಯ ಅನಂತರ ವಾಂತಿ ಮಾಡಲು ಪ್ರಾರಂಭಿಸಿದಳು. ಕೂಡಲೇ ಅವಳನ್ನು ರಾತ್ರಿ 9.30ರ ಸುಮಾರಿಗೆ ನಾಗರಬಾವಿ ಆಸ್ಪತ್ರೆಗೆ ಕರೆದೊಯ್ದೆವು. ಅವಳಿಗೆ ಜ್ವರ ಹೆಚ್ಚಾಗಿದ್ದರಿಂದ ಬಳಿಕ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಔಷಧ ಸೇವಿಸಿದ ಬಳಿಕವೂ ಅವಳು ಜೊಲ್ಲು ಸುರಿಸಲು ಶುರು ಮಾಡಿದಳು. ಮೂರ್ಛೆ ತಪ್ಪುತ್ತಿದ್ದಳು. ಬಳಿಕ ಅವಳಿಗೆ ಡೆಂಗ್ಯೂ ಪಾಸಿಟಿವ್ ಆಗಿರುವುದು ತಿಳಿದು ಬಂತು. ಆಕೆಯ ಪ್ಲೇಟ್ಲೆಟ್ ಸಂಖ್ಯೆ 2.87 ಲಕ್ಷದ ಕಾರಣ ತಕ್ಷಣ ಆತಂಕವಿರಲಿಲ್ಲ. ಆದರೆ ಆಕೆಯ ಪರಿಸ್ಥಿತಿ ಶೀಘ್ರವಾಗಿ ಹದಗೆಟ್ಟಿತು. ಉಸಿರಾಡಲು ಕಷ್ಟಪಡುತ್ತಿದ್ದಳು ಮತ್ತು ವೆಂಟಿಲೇಟರ್ನಲ್ಲಿ ಇರಿಸಲಾಯಿತು. ಆಕೆಯ ಮೆದುಳಿನ ಚಟುವಟಿಕೆಯು ಶೇ. 10ಕ್ಕೆ ಇಳಿಯಿತು. ಆಕೆಯ ಬದುಕುಳಿಯುವ ಸಾಧ್ಯತೆಗಳು ಕ್ಷೀಣವಾಗಿವೆ ಎಂದು ವೈದ್ಯರು ಹೇಳಿದಾಗ ನಾವು ಕುಸಿದು ಹೋದೆವು ಎಂದು ಬಾಲಕಿಯ ತಂದೆ ನೋವಿನಿಂದ ವಿವರಿಸಿದರು.
ಕೂಡಲೇ ತಡರಾತ್ರಿಯಲ್ಲಿ ಅವಳನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ಮಾಡುವಾಗ ದಾರಿಯಲ್ಲಿ ಏನು ಬೇಕಾದರೂ ಆಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದರು. ಆದರೆ ಮಗಳನ್ನು ಉಳಿಸಲು ನಾವು ಪ್ರಯತ್ನಿಸಬೇಕಾಗಿತ್ತು. ಸೆಪ್ಟೆಂಬರ್ 12ರಂದು ಬೆಳಗ್ಗೆ 6 ಗಂಟೆಗೆ ಆಸ್ಪತ್ರೆಗೆ ಬಂದ ವೈದ್ಯರು ಅವಳ ಜ್ವರವು ಅವಳ ಮೆದುಳಿನ ಮೇಲೆ ತೀವ್ರವಾಗಿ ಪರಿಣಾಮ ಬೀರಿದೆ. ಇದರಿಂದ ಅದು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ. ಇದು ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಿದೆ ಎಂದು ಹೇಳಿದರು. ಮಧ್ಯಾಹ್ನ 2.45 ಕ್ಕೆ ಅವಳ ಹೃದಯ ಬಡಿತವು ನಿಂತಿತು ಎಂದು ರವೀಂದ್ರ ದುಃಖದಿಂದ ಹೇಳಿದರು.
ಈ ವಿವರಗಳನ್ನು ಇತರ ಪೋಷಕರೊಂದಿಗೆ ಹಂಚಿಕೊಳ್ಳುವುದು ಅಗತ್ಯವಾಗಿದೆ ಎಂದ ಅವರು, ನಮಗೆ ಡೆಂಗ್ಯೂ ಬಗ್ಗೆ ಅಷ್ಟಾಗಿ ತಿಳಿದಿರಲಿಲ್ಲ. ಇಂತಹ ಮಾಹಿತಿಯ ಕೊರತೆ ಇತ್ತು. ನಾವು ಏನು ಯೋಚಿಸಿದ್ದೇವೆ. ನಿದ್ರೆಯ ಸಮಯದಲ್ಲಿ ಜೊಲ್ಲು ಸುರಿಸುವುದು ಕೂಡ ಡೆಂಗ್ಯೂನ ರೋಗ ಲಕ್ಷಣವಾಗಿದೆ. ಡೆಂಗ್ಯೂ ಪರೀಕ್ಷಿಸುವ ಮೊದಲು ಜ್ವರ ಪ್ರಾರಂಭವಾದ ಮೂರು ದಿನಗಳ ಕಾಲ ಕಾಯಲು ಹೇಳುತ್ತಾರೆ. ಆದರೆ ಅದಕ್ಕೂ ಮೊದಲೇ ನಾವು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ರವೀಂದ್ರ ಬೇಸರದಿಂದ ಹೇಳಿದರು.
Tirupati Laddu: ತಿರುಪತಿಗೆ ನಂದಿನಿ ತುಪ್ಪ ಸಾಗಿಸುವ ಟ್ಯಾಂಕರ್ಗಳಿಗೆ ಜಿಪಿಎಸ್ ಅಳವಡಿಕೆ
ಎರಡನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕಿಗೆ ಬುಧವಾರ ಡೆಂಗ್ಯೂ ಇರುವುದು ಗೊತ್ತಾಗಿದೆ. ಅವಳು ಕೊನೆಯ ಬಾರಿಗೆ ಪರೀಕ್ಷೆಗೆ ಹಾಜರಾಗಲು ಶನಿವಾರ ಶಾಲೆಗೆ ಬಂದಿದ್ದಳು. ಭಾನುವಾರ ತೀವ್ರ ಜ್ವರ ಕಾಣಿಸಿಕೊಂಡಿತು. ಸೋಮವಾರ ರಜೆ ಇತ್ತು. ಮಂಗಳವಾರ, ಆಕೆಯ ತಾಯಿ ತನ್ನ ಅನಾರೋಗ್ಯದ ಕಾರಣ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು. ಮಗುವಿನ ಬಗ್ಗೆ ಎಚ್ಚರಿಕೆ ವಹಿಸಲು ಹೇಳಿದ್ದೆವು. ಆದರೆ ಬುಧವಾರ ರಾತ್ರಿ ಮಗು ವನ್ನು ವೆಂಟಿಲೇಟರ್ ಇಲ್ಲದ ನರ್ಸಿಂಗ್ ಹೋಂಗೆ ಕರೆದೊಯ್ಯಲಾಯಿತು. ಬಳಿಕ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಷ್ಟರಲ್ಲಾಗಲೇ ಆಕೆಯ ಸ್ಥಿತಿ ಹದಗೆಟ್ಟಿತ್ತು ಎಂದು ಪೋಷಕರಿಂದ ತಿಳಿಯಿತು ಎಂದು ಬಾಲಕಿಯ ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.