Monday, 16th December 2024

Dinesh Gundu Rao: ಸಿಸೇರಿಯನ್ ಹೆರಿಗೆಗಳಿಗೆ ಕಡಿವಾಣ ಹಾಕಲು ನೂತನ ಯೋಜನೆ ಜಾರಿ; ದಿನೇಶ್ ಗುಂಡೂರಾವ್ ಮಾಹಿತಿ

Dinesh Gundu Rao

ಬೆಳಗಾವಿ: ರಾಜ್ಯದಲ್ಲಿ ಸಿಸೇರಿಯನ್ ಹೆರಿಗೆಗಳನ್ನು (Cesarean Delivery) ನಿಯಂತ್ರಿಸುವ ನಿಟ್ಟಿನಲ್ಲಿ ಮುಂದಿನ ತಿಂಗಳು ನೂತನ ಕಾರ್ಯಕ್ರಮ ಜಾರಿಗೊಳಿಸುತ್ತಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ. ಬೆಳಗಾವಿಯ ಸುವರ್ಣಸೌಧದಲ್ಲಿ ಇಂದು ವಿಧಾನ ಪರಿಷತ್ ಕಲಾಪದಲ್ಲಿ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅವರ ಪ್ರಶ್ನೆಗೆ ಉತ್ತರಿಸುವ ವೇಳೆ ಸಚಿವರು ಈ ವಿಷಯ ತಿಳಿಸಿದರು.

ರಾಜ್ಯದಲ್ಲಿ ಪ್ರತಿ ವರ್ಷ ಸಿಸೇರಿಯನ್‌ ಹೆರಿಗೆ ಪ್ರಮಾಣ ಹೆಚ್ಚಾಗುತ್ತಿದೆ. 2021-2022 ರಲ್ಲಿ 35% ಇದ್ದ ಸಿಸೇರಿಯನ್‌ ಪ್ರಮಾಣ, 2022-23 ಕ್ಕೆ 38%ಕ್ಕೆ ಏರಿಕೆಯಾಗಿತ್ತು. ಪ್ರಸ್ತುತ ರಾಜ್ಯದಲ್ಲಿ ಸಿಸೇರಿಯನ್‌ ಹೆರಿಗೆ ಪ್ರಮಾಣ 46% ಇದೆ. ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 61 ರಷ್ಟು ಸಿಸೇರಿಯನ್‌ಗಳನ್ನ ಮಾಡಲಾಗುತ್ತಿದೆ. ಸಿಸೇರಿಯನ್‌ಗಳಿಂದ ಹೆಚ್ಚು ಆದಾಯ ಬರುತ್ತದೆ ಮತ್ತು ಸುಲಭವಾಗಿ ಸಿಸೇರಿಯನ್ ಮಾಡಬಹುದು ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆಗಳು ಸಿಸೇರಿಯನ್ ಹೆರಿಗೆಗಳನ್ನೇ ಹೆಚ್ಚು ಮಾಡುತ್ತಿದ್ದಾರೆ. ತಾಯಿ ಮತ್ತು ಮಗುವಿನ‌ ಆರೋಗ್ಯ ದೃಷ್ಟಿಯಿಂದ ಇದಕ್ಕೆ ಕಡಿವಾಣ ಹಾಕುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಹಿಳೆಯರನ್ನು ಸಹಜ ಹೆರಿಗೆ ಮಾಡಿಸಿಕೊಳ್ಳಲು ಮಾನಸಿಕವಾಗಿ ಸಜ್ಜುಗೊಳಿಸಿಬೇಕಿದೆ. ಇದಕ್ಕಾಗಿ ನೂತನ ಕಾರ್ಯಕ್ರಮ ಜಾರಿಗೊಳಿಸುತ್ತಿರುವುದಾಗಿ ಸದನಕ್ಕೆ ತಿಳಿಸಿದರು.

ಭ್ರೂಣ ಹತ್ಯೆ ವಿರುದ್ಧ ಯಶಸ್ವಿ ಡಿಕಾಯ್ ಆಪರೇಷನ್ – 46 ಜನರ ಬಂಧನ

ರಾಜ್ಯದಲ್ಲಿ 2023-24 ರಿಂದ ಇಲ್ಲಿಯವರೆಗೆ ಭ್ರೂಣಹತ್ಯೆ ಸಂಬಂಧಿಸಿದಂತೆ 8 ಪ್ರಕರಣ ದಾಖಲಿಸಿ 46 ಜನರನ್ನು ಬಂಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಸದನಕ್ಕೆ ಮಾಹಿತಿ ನೀಡಿದರು

ರಾಜ್ಯದಲ್ಲಿ ಸ್ಕ್ಯಾನಿಂಗ್ ಸೆಂಟರ್ ಮತ್ತು ಆಸ್ಪತ್ರೆಗಳ ಮೇಲೆ ತಪಾಸಣೆಗಳನ್ನು ಜಾಸ್ತಿ ಮಾಡಿರುವುದರಿಂದ ಹೆಚ್ಚಿನ ಸಂಖ್ಯೆಯ ಭ್ರೂಣ ಹತ್ಯೆ ಪ್ರಕರಣಗಳು ಕಂಡುಹಿಡಿಯಲಾಗಿದೆ. ಅಲ್ಲದೇ ಡಿಕಾಯ್‌ ಆಪರೇಷನ್‌ಗಳ ಯಶಸ್ವಿ ಕಾರ್ಯಾಚರಣೆಗಳನ್ನ ನಡೆಸಿ, ಭ್ರೂಣ ಹತ್ಯೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.‌

ಈ ಸುದ್ದಿಯನ್ನೂ ಓದಿ | Health tips: ಮಧುಮೇಹಿಗಳೇ ಎಚ್ಚರ! ಈ ಆಹಾರ ಸಕ್ಕರೆಗಿಂತ 3 ಪಟ್ಟು ಹೆಚ್ಚು ಅಪಾಯಕಾರಿಯಂತೆ!

ರಾಜ್ಯದಲ್ಲಿ ಭ್ರೂಣ ಹತ್ಯೆ ತಡೆಯಲು ಸರ್ಕಾರವು ಪಿ.ಸಿ&ಪಿ.ಎನ್.ಡಿ.ಟಿ. ಕಾಯ್ದೆಯಡಿ ಬರುವ ಎಲ್ಲಾ ಶಾಸನಬದ್ದ ಸಮಿತಿಗಳನ್ನು ರಾಜ್ಯ ಮತ್ತು ಜಿಲ್ಲೆಗಳಲ್ಲಿ ರಚನೆ ಮಾಡಲಾಗಿದೆ. 2018 ರಿಂದ ರಾಜ್ಯದಲ್ಲಿ ‘ಬಾಲಿಕಾ’ ಆನ್‌ಲೈನ್ ಸಾಫ್ಟ್‌ವೇರ್ ಮುಖಾಂತರ ಎಲ್ಲಾ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ಕಡ್ಡಾಯವಾಗಿ ನೋಂದಣಿ ಮತ್ತು ನವೀಕರಣ ನಡೆಸಲಾಗುತ್ತಿದೆ.

ರಾಜ್ಯ ಮಟ್ಟದಲ್ಲಿ ಶೇ.100 ರಷ್ಟು ಗರ್ಭಿಣಿಯರ ನೊಂದಣಿ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಗ್ರಾಮ ಮಟ್ಟದಲ್ಲಿ ಜನನ ಸಮಯದ ಲಿಂಗಾನುಪಾತದ ದತ್ತಾಂಶಗಳನ್ನು ಮಾಹಿತಿ ತಂತ್ರಜ್ಞಾನದ ಮುಖಾಂತರ ಮೇಲ್ವಿಚಾರಣೆ ಮಾಡಲು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಇದುವರೆಗೂ ಪಿ.ಸಿ & ಪಿ.ಎನ್.ಡಿ.ಟಿ. ಕಾಯ್ದೆಯನ್ನು ಉಲ್ಲಂಘಿಸಿರುವ ಸ್ಕ್ಯಾನಿಂಗ್ ಸೆಂಟರ್ / ಮಾಲೀಕರು/ ವೈದ್ಯರ ವಿರುದ್ಧ ಒಟ್ಟು 136 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, 74 ಪ್ರಕರಣಗಳು ದಂಡವಿಧಿಸಿ ಖುಲಾಸೆಗೊಂಡಿದ್ದು, 65 ಪ್ರಕರಣಗಳು ನ್ಯಾಯಾಲಯದಲ್ಲಿ ವಿವಿಧ ಹಂತದಲ್ಲಿ ಬಾಕಿಯಿರುತ್ತದೆ ಎಂದು ತಿಳಿಸಿದರು.

ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುವಂತಹ ಸ್ಕ್ಯಾನಿಂಗ್ ಸೆಂಟರ್ / ಆಸ್ಪತ್ರೆ/ ವೈದ್ಯರು / ದಲ್ಲಾಳಿಗಳು / ಗರ್ಭಿಣಿಯರ ಸಂಬಂಧಿಕರ ವಿರುದ್ಧ ಮಾಹಿತಿ ನೀಡಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಸಹಕರಿಸುವ ಮಾಹಿತಿದಾರರಿಗೆ ಕರ್ನಾಟಕ ಸರ್ಕಾರದಿಂದ ನೀಡುತ್ತಿದ್ದ ಬಹುಮಾನವನ್ನು ರೂ.50 ಸಾವಿರದಿಂದ ರೂ.1 ಲಕ್ಷದವರೆಗೆ ಹೆಚ್ಚಿಸಲಾಗಿದೆ ಎಂದರು.

ಪಿ.ಸಿ. & ಪಿ.ಎನ್.ಡಿ.ಟಿ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಯುಕ್ತರ ಅಧ್ಯಕ್ಷತೆಯಲ್ಲಿ ರಾಜ್ಯ ಕಾರ್ಯಪಡೆಯನ್ನು ರಚಿಸಲಾಗಿದ್ದು, ರಾಜ್ಯ ಮಟ್ಟದಿಂದ ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ಗುಪ್ತ ಕಾರ್ಯಚರಣೆ ನಡೆಸಲಾಗಿದೆ ಎಂದರು.

ಈ ಸುದ್ದಿಯನ್ನೂ ಓದಿ | Bengaluru News: ಬೆಂಗಳೂರಿನ ವಿದ್ಯಾರ್ಥಿಗಳಿಗೆ ‘ನಾಸಾ’ ಆಶೋತ್ತರಗಳ ಪರಿಚಯ

ಹೆಣ್ಣು ಭ್ರೂಣ ಹತ್ಯೆ ಮಾಡದಂತೆ ರಾಜ್ಯದಂತ ಜನ ಜಾಗೃತಿ ಹಾಗೂ ಅರಿವು ಮೂಡಿಸುವಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ವಿವರಿಸಿದರು.