ಬೆಂಗಳೂರು: ಸಾಲದ ಸುಳಿಗೆ ಸಿಲುಕಿ ಕನ್ನಡ ಚಿತ್ರರಂಗದ ನಿರ್ದೇಶಕ ಗುರುಪ್ರಸಾದ್ (Director Guruprasad) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇವರು ಯಾರಲ್ಲಿ ಎಷ್ಟು ಸಾಲ ಮಾಡಿಕೊಂಡಿದ್ದರು ಎನ್ನುವ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಈ ನಡುವೆ ಚೆಕ್ ಬೌನ್ಸ್ ಕೇಸ್‌ನಲ್ಲಿ ಸಿಲುಕಿದ್ದ ಗುರು ಪ್ರಸಾದ್ ಅವರು ನ.19ರಂದು ಕೋರ್ಟ್‌ಗೆ ಹಾಜರಾಗಬೇಕಿತ್ತು. ಅವರ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಆಗುವ ಸಾಧ್ಯತೆಗಳು ಇದ್ದವು ಎಂಬ ವಿಷಯ ತಿಳಿದುಬಂದಿದೆ.
ವಿ. ಶ್ರೀನಿವಾಸ್ ಎಂಬುವವರಿಗೆ ನಿರ್ದೇಶಕ ಗುರುಪ್ರಸಾದ್ 30 ಲಕ್ಷ ಹಣ ಕೊಡಬೇಕಾಗಿತ್ತು. ಆದರೆ, ಅವರು ನೀಡಿದ್ದ ಚೆಕ್‌ಗಳು ಬೌನ್ಸ್ ಆಗಿದ್ದರಿಂದ ಶ್ರೀನಿವಾಸ್ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿಂದೆ ಅಕ್ಟೋಬರ್ 22 ರಂದು ಕೋರ್ಟ್‌ಗೆ ಹಾಜರಾಗಬೇಕಿತ್ತು, ಆದರೆ ಅನಾರೋಗ್ಯದ ಕಾರಣ ಹೇಳಿ, ಮೆಡಿಕಲ್ ಸರ್ಟಿಫಿಕೇಟ್ ಕೊಟ್ಟು ವಿಚಾರಣೆಗೆ ಹಾಜರಾಗುವುದರಿಂದ ಗುರು ಪ್ರಸಾದ್ ತಪ್ಪಿಸಿಕೊಂಡಿದ್ದರು ಎನ್ನಲಾಗಿದೆ. ಈ ಪ್ರಕರಣ ಸಂಬಂಧ ನ. 19ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿತ್ತು. ಸದ್ಯದಲ್ಲೇ ಕೋರ್ಟ್‌ನಲ್ಲಿ ಕೇಸ್ ಮುಗಿದು ಶ್ರೀನಿವಾಸ್ ಪರ ತೀರ್ಪು ಬರುವ ಸಾಧ್ಯತೆ ಇತ್ತು. ಈಗಾಗಲೇ ಹಲವು ಬಾರಿ ಕೋರ್ಟ್‌ಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಗುರುಪ್ರಸಾದ್ ವಿರುದ್ಧ ಮತ್ತೊಮ್ಮೆ ಅರೆಸ್ಟ್ ವಾರಂಟ್ ಜಾರಿ ಆಗುವ ಸಾಧ್ಯತೆಯೂ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ?
2015ರಲ್ಲಿ ಶ್ರೀನಿವಾಸ್ ಎನ್ನುವವರು ಎರಡನೇ ಸಲ ಚಿತ್ರದ ಮೂಲಕ ಗುರುಪ್ರಸಾದ್ ಅವರ ಡೈರೆಕ್ಷನ್ ತಂಡ ಸೇರಿದ್ದರು. ಈ ಸಿನಿಮಾ ಚಿತ್ರೀಕರಣ ಹಂತರದಲ್ಲಿದ್ದಾಗ ತಮಗೆ ಪರಿಚಯವಿದ್ದ ಮಾರ್ವಾಡಿಯೊಬ್ಬರಿಂದ ಗುರುಪ್ರಸಾದ್‌ಗೆ 17 ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ನಂತರ ತಮ್ಮ ಪತ್ನಿಯ ಒಡವೆಯನ್ನೆಲ್ಲಾ ಮಾರಿ 13 ಲಕ್ಷ ರೂ.ಗಳನ್ನು ಗುರುಪ್ರಸಾದ್ ಕೈಗೊಪ್ಪಿಸಿದ್ದರು. ʻನಮ್ಮ ಡೈರೆಕ್ಟ್ರು ಕಷ್ಟದಲ್ಲಿದ್ದಾರೆ, ಆರ್ಥಿಕ ಸಂಕಷ್ಟಗಳು ಅವರ ಪ್ರತಿಭೆಯನ್ನು ನುಂಗಿಹಾಕಬಾರದುʼ ಅಂದುಕೊಂಡು ಗುರು ಕಷ್ಟದಲ್ಲಿದ್ದಾಗಲೆಲ್ಲಾ ಶ್ರೀನಿವಾಸ್ ಕೈ ಹಿಡಿದಿದ್ದರು. ಆದರೆ ಗುರುಪ್ರಸಾದ್ ಶಿಷ್ಯನ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಬದಲಿಗೆ ಕೊಟ್ಟ ಹಣ ವಾಪಾಸ್ ಕೇಳಿದಾಗ ಈಗ, ಆಗ ಅಂತ ಅಲೆದಾಡಿಸಿದ್ದರು. ಕೊನೆಗೆ ಗುರುಪ್ರಸಾದ್ ಕೊಟ್ಟಿದ್ದ ಚೆಕ್ ಕೂಡ ಬೌನ್ಸ್ ಆಗಿತ್ತು. ಇದರಿಂದ ಶ್ರೀನಿವಾಸ್ ಹೈರಾಣಾಗಿ ಗಿರಿನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದರಿಂದ ಪೊಲೀಸರು ಗುರುಪ್ರಸಾದ್ ಅವರನ್ನು ಬಂಧಿಸಿದ್ದರು. ಆದರೆ ಅರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ಜಾಮೀನು ಪಡೆದು ಹೊರ ಬಂದಿದ್ದ ಗುರುಪ್ರಸಾದ್ ನಾನೇನೂ ತಪ್ಪು ಮಾಡಿಲ್ಲ. ಚೆಕ್ಬೌನ್ಸ್ ಆಗಿದೆ ಅಷ್ಟೇ ಎಂದಿದ್ದರು.
ಸರಸ್ವತಿ ಪುತ್ರನಿಗೆ ಬೆಂಬಿಡದೇ ಕಾಡಿತ್ತು ಸಾಲು ಸಾಲು ವಿವಾದಗಳು!
ನಿರ್ದೇಶಕ,ನಟ ಗುರುಪ್ರಸಾದ್(Guruprasad Death) ಆತ್ಮಹತ್ಯೆ ಬಗ್ಗೆ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಆಘಾತ ನೀಡಿದೆ. ಸಾಲಬಾಧೆಯಿಂದ ಖಿನ್ನತೆಗೊಳಗಾಗಿದ್ದ ಗುರುಪ್ರಸಾದ್, ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇನ್ನು ಸರಸ್ವತಿ ಪುತ್ರನೆಂದೇ ಖ್ಯಾತಿ ಪಡೆದಿದ್ದ ಈ ನಟ ನಿರ್ದೇಶಕ ಸದಾ ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುತ್ತಲೇ ಇದ್ದರು. ಒಂದು ಬಾರಿ ಅರೆಸ್ಟ್ ಕೂಡ ಆಗಿದ್ದರು.
ಪ್ರಚಾರಕ್ಕೆ ಬಾರದೇ ಸತಾಯಿಸಿದ್ದ ಗುರುಪ್ರಸಾದ್
ಇನ್ನೂ ಎರಡನೇ ಸಲ ಚಿತ್ರದ ಸಮಯದಲ್ಲಿ ಕೂಡ ಗುರುಪ್ರಸಾದ್ ವಿವಾದ ಮೈಮೇಲೆ ಎಳೆದುಕೊಂಡರು. ಒಂಬತ್ತು ತಿಂಗಳ ಒಳಗೆ ಸಂಪೂರ್ಣ ಚಿತ್ರೀಕರಣ ಮುಗಿಸುವುದಾಗಿ ಹೇಳಿದ ಗುರುಪ್ರಸಾದ್ ಚಿತ್ರದ ಚಿತ್ರೀಕರಣ ಮುಗಿಸಲು ಹತ್ ಹತ್ರ ನಾಲ್ಕು ವರ್ಷಗಳನ್ನು ತೆಗೆದುಕೊಂಡರು. ಇದು ಸಾಲದು ಎಂಬಂತೆ ಚಿತ್ರ ಬಿಡುಗಡೆಗೆ ಸಿದ್ಧವಾದಾಗ ಪ್ರಚಾರಕ್ಕೆ ಬಾರದೇ ಸತಾಯಿಸಿದರು. ಈ ಕಾರಣಕ್ಕೆ ಎರಡನೇ ಸಲ ಚಿತ್ರದ ನಿರ್ಮಾಪಕ ಯೋಗೀಶ್ ನಾರಾಯಣ್ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದರು.
ಹಣ ವಂಚನೆ ಆರೋಪ
ಕೇವಲ ಇದು ಮಾತ್ರವಲ್ಲದೇ ಗುರುಪ್ರಸಾದ್ ವಿರುದ್ಧ ಟೋಟಲ್ ಕನ್ನಡ ಹೆಸರಿನಲ್ಲಿ ಪುಸ್ತಕ ಮಳಿಗೆ ನಡೆಸುತ್ತಿರುವ ವಿ. ಲಕ್ಷ್ಮೀಕಾಂತ್ ಅವರು ಜಯನಗರ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟು ನೀಡಿದ್ದರು. ನಮ್ಮ ಮಳಿಗೆಯಿಂದ ಕನ್ನಡದ ಪುಸ್ತಕಗಳನ್ನು ಖರೀದಿಸಿ 65,755 ರೂಪಾಯಿಗಳನ್ನು ನೀಡದೇ ಸತಾಯಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಸುದ್ದಿಯನ್ನೂ ಓದಿ | Viral Video: ಛೇ..ಇದೆಂಥಾ ಕ್ರೌರ್ಯ! ವಾಚ್ ಕದ್ದರೆಂದು ಹುಡುಗರನ್ನು ತಲೆಕೆಳಗಾಗಿ ನೇತು ಹಾಕಿ ಮೆಣಸಿನ ಹೊಗೆ ಹಾಕಿದ ದುರುಳರು
ಮಾದನಾಯಕಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ನಿರ್ದೇಶಕ ಗುರುಪ್ರಸಾದ್ ಅವರು 3 ದಿನಗಳ ಹಿಂದೆ ನೇಣಿಗೆ ಶರಣಾಗಿದ್ದು, ಅವರ ಮೃತದೇಹ ಅಪಾರ್ಟ್‌ಮೆಂಟ್ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನು ನಿನ್ನೆ ಗುರುಪ್ರಸಾದ್ ಹುಟ್ಟುಹಬ್ಬ. ಈ ಬೆನ್ನಲ್ಲೇ ಅವರ ಸಾವಿನ ಸುದ್ದಿ ಚಿತ್ರರಂಗದ ಮಂದಿಗೆ ಶಾಕ್ ಕೊಟ್ಟಿದೆ.