ಬೆಂಗಳೂರು: “ನಮ್ಮ ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ, ಅವರು ಯಾವುದೇ ಹಗರಣದಲ್ಲೂ ಭಾಗಿಯಾಗಿಲ್ಲ. ಅವರ ವಿರುದ್ಧ ಬಿಜೆಪಿ ಷಡ್ಯಂತ್ರ ರೂಪಿಸುತ್ತಿದೆ. ಯಾವುದೇ ತನಿಖೆ ನಡೆದರೂ ಅವರು ದೋಷಮುಕ್ತರಾಗುತ್ತಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು.
ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪ್ರಶ್ನಿಸಿ ಮುಖ್ಯಮಂತ್ರಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಬಿಜೆಪಿಯವರು ನನ್ನ ಮೇಲೆ ಹೇಗೆ ಷಡ್ಯಂತ್ರ ರೂಪಿಸಿ ಕೇಸ್ ದಾಖಲಿಸಿ, ಜೈಲಿಗೆ ಹಾಕಿದರೋ ಅದೇ ರೀತಿ ನಮ್ಮ ಮುಖ್ಯಮಂತ್ರಿಗಳ ವಿರುದ್ಧವೂ ಷಡ್ಯಂತ್ರ ರೂಪಿಸುತ್ತಿದ್ದಾರೆ. ಭಗವಂತನ ಕೃಪೆಯಿಂದ ನಾನು ಜೈಲಿಗೆ ಹೋದ ಪ್ರಕರಣ ಕೂಡ ವಜಾಗೊಂಡಿದೆ” ಎಂದು ತಿಳಿಸಿದರು.
“ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ನಾವೆಲ್ಲರೂ ಮುಖ್ಯಮಂತ್ರಿಗಳ ಜತೆಗೆ ನಿಲ್ಲುತ್ತೇವೆ. ಹೋರಾಟ ಮುಂದುವರಿಸುತ್ತೇವೆ. ಅವರು ಮಾಡಿರುವ ಕೆಲಸ, ರಾಜ್ಯದ ಜನರಿಗೆ ನೀಡಿರುವ ಯೋಜನೆಯನ್ನು ಬಿಜೆಪಿಯವರಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ. ನಮಗೆ ಈ ನೆಲದ ಕಾನೂನಿನ ಮೇಲೆ ಗೌರವವಿದೆ. ನ್ಯಾಯ ಸಿಗುತ್ತದೆ ಎಂಬ ನಂಬಿಕೆಯಿದೆ” ಎಂದು ತಿಳಿಸಿದರು.
ತೀರ್ಪಿನ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ
ಸಿಎಂ ಹಾಗೂ ಸರ್ಕಾರಕ್ಕೆ ಇದು ಹಿನ್ನಡೆಯೇ ಎಂದು ಕೇಳಿದಾಗ, “ಇಲ್ಲಿ ಹಿನ್ನಡೆಯಾಗುವ ವಿಚಾರ ಏನಿದೆ? ತನಿಖೆ ನಡೆಯಬೇಕು ಎಂದು ಕೋರ್ಟ್ ಆದೇಶ ನೀಡಿರುವುದಾಗಿ ಮಾಧ್ಯಮಗಳು ಹೇಳುತ್ತಿವೆ. ಈ ತೀರ್ಪಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರ ಮಾತನಾಡುತ್ತೇನೆ. ನ್ಯಾಯಾಲಯದ ತೀರ್ಪು ಏನಿದೆ ಎಂದು ನಾನು ನೋಡಿಲ್ಲ. ಮಾಧ್ಯಮಗಳಿಂದ ವಿಚಾರ ತಿಳಿಯುತ್ತಿದೆ. ಸಂಪೂರ್ಣ ಮಾಹಿತಿ ಪಡೆದ ನಂತರ ಪ್ರತಿಕ್ರಿಯೆ ನೀಡುತ್ತೇನೆ.” ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | CM Siddaramaiah: ನಾನು ಯಾವುದೇ ತನಿಖೆ ಎದುರಿಸಲು ಹಿಂಜರಿಯಲಾರೆ: ಸಿದ್ದರಾಮಯ್ಯ
ಸಿಎಂ ಮುಂದೇನ್ ಮಾಡ್ತಾರೆ? ಸುಳಿವು ನೀಡಿದ ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರು: ಹೈಕೋರ್ಟ್ (High court) ತೀರ್ಪಿನ ಬಗ್ಗೆ ನಮಗೆ ಗೌರವವಿದೆ. ಆದರೆ ಈ ತೀರ್ಪನ್ನು (HC Order on CM Siddaramaiah) ಪ್ರಶ್ನಿಸಿ ದ್ವಿಸದಸ್ಯ ಪೀಠದ ಮೊರೆ ಹೋಗಲಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಕೋರ್ಟ್ನ ಬಗ್ಗೆ ನಮಗೆ ಗೌರವವಿದೆ. ಆದರೆ, ಸಿಎಂ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಮುಡಾ ಕೇಸ್ನಲ್ಲಿ ತಮ್ಮ ವಿರುದ್ಧ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಅನುಮತಿಯನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಗೆ ಹಿನ್ನಡೆಯಾದ ಹಿನ್ನೆಲೆಯಲ್ಲಿ ಅವರು ಈ ಮಾತನಾಡಿದ್ದಾರೆ.
ಪ್ರಾಸಿಕ್ಯೂಷನ್ಗೆ ನ್ಯಾಯಾಧೀಶರು ಅನುಮತಿ ನೀಡಿದ್ದಾರೆ. ಸಿಂಗಲ್ ಬೆಂಚ್ನಲ್ಲಿ ಅನುಮತಿ ಕೊಟ್ಟಿದ್ದಾರೆ. ಇನ್ನು ಡಬಲ್ ಬೆಂಚ್ ಇದೆ. ನ್ಯಾಯಾಂಗದ ಮೇಲೆ ನಮಗೆ ನಂಬಿಕೆ ಇದೆ. 17 A ಮೂಲಕ ಅನುಮತಿ ಕೊಟ್ಟಿದ್ದಾರೆ. ಡಬಲ್ ಬೆಂಚ್ನಲ್ಲಿ ನಾವು ಚಾಲೆಂಜ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಸಿಎಂ ರಾಜೀನಾಮೆ ಕೊಡುವ ಅಗತ್ಯವಿಲ್ಲ. ನಾವೆಲ್ಲರೂ ಅವರ ಜೊತೆ ಇದ್ದೇವೆ. ರಾಜ್ಯಪಾಲರನ್ನು ಮುಂದಿಟ್ಟುಕೊಂಡು ಬಿಜೆಪಿಯವರು ದೇಶದೆಲ್ಲೆಡೆ ಇದೇ ರೀತಿ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ನಿರಾಣಿ, ಡಿನೋಟಿಫೀಕೇಷನ್ ಕೇಸ್ಗಳ ಬಗ್ಗೆ ರಾಜ್ಯಪಾಲರು ಕ್ರಮ ಕೈಗೊಳ್ಳಲಿ. ನಮ್ಮ ರಾಜ್ಯಕ್ಕೆ ಇಷ್ಟು ಅನ್ಯಾಯ ಆಗಿದ್ದರೂ ಬಿಜೆಪಿಯವರು ನಮ್ಮ ರಾಜ್ಯದ ಪರ ಮಾತನಾಡಲಿಲ್ಲ. ಕೋರ್ಟ್ ತೀರ್ಪಿಗೆ ನಾವು ಗೌರವ ಕೊಡುತ್ತೇವೆ. ಡಬಲ್ ಬೆಂಚ್ನಲ್ಲೂ ಸೋಲಾದರೆ ನಂತರ ಸುಪ್ರೀಂ ಕೋರ್ಟ್ ಇದೆ . ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: HC Verdict on CM Siddaramaiah: ಮುಂದುವರಿದ ಮುಡಾ ಸಂಕಷ್ಟ, ಸಿಎಂ ಸಿದ್ದರಾಮಯ್ಯ ಮುಂದಿನ ನಡೆ ಏನು?
ಈ ಬಗ್ಗೆ ಮಾತನಾಡಿರುವ ವಿಪಕ್ಷ ನಾಯಕ ಆರ್. ಅಶೋಕ್, ಗಣೇಶನನ್ನು ಬಂಧಿಸಿ ಇಟ್ಟ ಕಾರಣಕ್ಕಾಗಿ ಸಿಎಂಗೆ ಗಣೇಶನ ಶಾಪ ತಟ್ಟಿದೆ. ಅದಕ್ಕಾಗಿ ಇಂದು ಅವರ ವಿರುದ್ಧ ತೀರ್ಪು ಬಂದಿದೆ. ಈ ನಿರ್ಣಯ ಬಿಜೆಪಿಯ ಗೆಲುವು. ಬಿಜೆಪಿ ಈ ಹಗರಣದ ಕುರಿತು ಪಾದಯಾತ್ರೆ ಮಾಡಿತ್ತು. ವಿಧಾನಸಭೆಯ ಒಳಗೂ ಹೊರಗೂ ಪ್ರತಿಭಟನೆ ಮಾಡಿತ್ತು. ರಾಮಕೃಷ್ಣ ಹೆಗಡೆಯವರ ಶಿಷ್ಯ ಆಗಿದ್ದರೆ, ನೈತಿಕತೆ ಇದ್ದರೆ ರಾಜಿನಾಮೆ ಕೊಡಲಿ ಎಂದು ಹೇಳಿದ್ದಾರೆ.