ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಯಾರು ಏನು ಬೇಕಾದರು ಆಗಬಹುದು. ನಮ್ಮ ತಂದೆ ರೈತರಾಗಿದ್ದರು, ನಿಮ್ಮ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕಾದರೆ ಗುಣಮಟ್ಟದ ಶಿಕ್ಷಣ, ಆರ್ಥಿಕ ಸ್ಥಿತಿ ಹಾಗೂ ನಾಯಕತ್ವದ ಗುಣ ಬೆಳಸಿಕೊಳ್ಳಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಇಂದು ವಿಧಾನಸೌಧದಲ್ಲಿ ಶಾಲಾ ಮಕ್ಕಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಂಚಶೀಲನಗರದ ಪಾಲಿಕೆ ಹಿರಿಯ ಪ್ರಾಥಮಿಕ ಶಾಲೆ 7ನೇ ತರಗತಿ ವಿದ್ಯಾರ್ಥಿ ವಿದ್ಯಾಸಾಗರ್, ನಾನು ಈ ರಾಜ್ಯದ ಸಿಎಂ ಆಗಬೇಕು, ಇದಕ್ಕಾಗಿ ಏನು ಓದಬೇಕು ಎಂದು ಕೇಳಿದ ಪ್ರಶ್ನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಲಹೆಯುಕ್ತ ಉತ್ತರ ನೀಡಿದ್ದಾರೆ.
ಮಕ್ಕಳಲ್ಲಿ ಜ್ಞಾನ ಹೆಚ್ಚಾಗಬೇಕೆಂಬ ಉದ್ದೇಶದಿಂದಲೇ ಕಾರ್ಯಕ್ರಮಗಳಲ್ಲಿ ನಿರೂಪಣೆ ಹಾಗೂ ಮಾತನಾಡಲು ಅವಕಾಶ ನೀಡಲಾಗುತ್ತಿದೆ. ನೀವೆಲ್ಲರೂ ಸಿಎಂ, ಡಿಸಿಎಂ, ಐಎಎಸ್ ಅಧಿಕಾರಿಗಳ ಜತೆ ನೇರವಾಗಿ ಹಾಗೂ ಧೈರ್ಯವಾಗಿ ಮಾತನಾಡುತ್ತಿದ್ದೀರಾ, ವಿಧಾನಸೌಧದ ಸಮ್ಮೇಳನಾ ಸಭಾಂಗಣವು ದೇಶಕ್ಕೆ ಸಂವಿಧಾನ ತರುವಂತಹ ಜಾಗ, ಶಾಸಕಾಂಗ ಸಭೆ ನಡೆಸುವಂತಹ ಜಾಗ, ನೀವೇ ಇಲ್ಲಿ ಕೂತು, ಸಿಎಂ, ಡಿಸಿಎಂ, ಐಎಎಸ್ ಅಧಿಕಾರಿಗಳು ಆಗಬೇಕು ಎಂದು ಸಲಹೆ ನೀಡಿದರು.
ಈ ಸುದ್ದಿಯನ್ನೂ ಓದಿ | Jawaharlal Nehru Birth Anniversary: ಮಕ್ಕಳಿಗಾಗಿ ಕಾಂಗ್ರೆಸ್ ಪಕ್ಷದಲ್ಲಿ ನೂತನ ಘಟಕ!
ವಯೋಮಿತಿ ನಿಗದಿ ಮಾಡಿ ಗಂಡು ಮಕ್ಕಳಿಗೂ ಶಕ್ತಿ ಯೋಜನೆ ನೀಡುವ ಬಗ್ಗೆ ಚರ್ಚೆ
ನೀಲಸಂದ್ರದ ಪಾಲಿಕೆ ಪ್ರಾಥಮಿಕ ಶಾಲೆ 7ನೇ ತರಗತಿ ವಿದ್ಯಾರ್ಥಿ ಚರಣ್, ನೀವು 5 ಗ್ಯಾರಂಟಿ ನೀಡಿದ್ದೀರಿ, ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದು, ನಮ್ಮ ಅಮ್ಮ, ಅಕ್ಕ-ತಂಗಿಯರನ್ನು ಮಾತ್ರ ಊರಿಗೆ ಕರೆದುಕೊಂಡು ಹೋಗುತ್ತಾರೆ. ಗಂಡು ಮಕ್ಕಳಿಗಾಗಿ ಯಾವುದೇ ಯೋಜನೆ ಇಲ್ಲವೇ ಎಂದು ಕೇಳಿದಾಗ, ನಿಮ್ಮ ತಾಯಿಗೆ 2000, ಬಸ್ ಉಚಿತ, 10 ಕೆಜಿ ಅಕ್ಕಿ, ಉಚಿತ ವಿದ್ಯುತ್ ನೀಡಲಾಗುತ್ತಿದೆ. ನೀನು ಕೇಳಿರುವ ಪ್ರಶ್ನೆಗೆ ಸರ್ಕಾರದಲ್ಲಿ ಚರ್ಚಿಸಿ ಒಂದು ವಯೋಮಿತಿಯವರೆಗೆ ಯೋಚಿಸಿ ಮುಂದೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
2 ಸಾವಿರ ಸಿಎಸ್ಆರ್ ಶಾಲೆಗಳ ಸ್ಥಾಪನೆ
ಹೇರೋಹಳ್ಳಿ ಪಾಲಿಕೆ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ ಶಾಲಿನಿ ಬಿ.ಆರ್, ಗ್ರಾಮೀಣ ಭಾಗದಲ್ಲಿ ಪ್ರೌಢಶಾಲೆಗಳ ಕೊರತೆ ಇದೆ ಎಂದು ಕೇಳಿದಾಗ, ʼಸರ್ಕಾರದಿಂದ ಹೊಸ ಯೋಜನೆ ಜಾರಿ ಮಾಡಲಾಗುತ್ತಿದ್ದು, 3 ಎಕರೆ ಪ್ರದೇಶದಲ್ಲಿ 2000 ಕಡೆ ಶಾಲೆ ನಿರ್ಮಾಣ ಮಾಡಲು ಮುಂದಾಗುತ್ತಿದೆ. ಅದನ್ನು ಖಾಸಗಿ ಶಾಲೆಗಳು ದತ್ತು ಪಡೆದುಕೊಳ್ಳಬೇಕು. ನಗರದಲ್ಲಿ ಬಂದು ವಿದ್ಯಾಭಾಸ ಪಡೆಯುವುದನ್ನು ತಪ್ಪಿಸಿ ಗ್ರಾಮೀಣ ಪ್ರದೇಶದಲ್ಲಿಯೇ ಶಾಲೆ ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆʼ ಎಂದು ಮಾಹಿತಿ ನೀಡಿದರು.
ಸರ್ಕಾರಿ ಶಾಲೆ ಶಿಕ್ಷಕರ ಗುಣಮಟ್ಟ ಹೆಚ್ಚಿಸಲು ಕ್ರಮ
ಮಾರುತಿ ಮಂದಿರದ ಪ್ರಾಥಮಿಕ ಪಾಠಶಾಲೆ 5ನೇ ತರಗತಿ ವಿದ್ಯಾರ್ಥಿ ಹರ್ಷ, ದೊಡ್ಡ ದೊಡ್ಡ ಪ್ರೈವೇಟ್ ಸ್ಕೂಲ್ಗಳಂತೆ ನಮ್ಮ ಬಿಬಿಎಂಪಿ ಶಾಲೆಗಳಲ್ಲಿ ಕ್ವಾಲಿಟಿ ಎಜುಕೇಷನ್ ನೀಡಲು ಯೋಜನೆ ಇದಿಯಾ ಎಂದು ಕೇಳಿದಾಗ, ʼರಾಜ್ಯದಲ್ಲಿ ಸರ್ಕಾರಿ, ಪಾಲಿಕೆ ಸೇರಿ ಸುಮಾರು 46,000 ಶಾಲೆಗಳಿದ್ದು, ಎಲ್ಲರಿಗೂ ಗುಣಮಟ್ಟ ಶಿಕ್ಷಣ ನೀಡುವುದು ಸರ್ಕಾರದ ಚಿಂತನೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಕ್ವಾಲಿಟಿ ಎಜುಕೇಷನ್ ನೀಡುತ್ತಿದ್ದಾರೆ. ಯಾರ ಪ್ರಭಾವಕ್ಕೂ ಒಳಗಾಗದೆ ಮೆರಿಟ್ ಮೇಲೆ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತಿದೆ. ಶಿಕ್ಷಕರಿಗೆ ಹೊಸ ಸ್ಕೀಮ್ ತರಲಾಗುತ್ತಿದ್ದು, ಸಿಬಿಎಸ್ಸಿ, ಐಸಿಎಸ್ಸಿ ಶಿಕ್ಷಣ ನೀಡುವ ಹಾಗೆ ಸರ್ಕಾರಿ ಶಾಲೆಗಳನ್ನು ಹೊಸ ವ್ಯವಸ್ಥೆ ಜಾರಿ ಮಾಡಲು ಕ್ರಮ ವಹಿಸಲಾಗುತ್ತಿದೆ. ಈ ಬಾರಿ ಎಸ್.ಎಸ್.ಎಲ್.ಸಿ.ಯಲ್ಲಿ ಬಾಗಲಕೋಟೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿ ಮೊದಲ ರ್ಯಾಂಕ್ ಬಂದಿದ್ದು, ಅದರಿಂದಲೇ ನಾವು ಯಾವ ರೀತಿಯ ಶಿಕ್ಷಣ ಸಿಗಲಿದೆ ಎಂಬುದನ್ನು ಗಮನಿಸಬಹುದಾಗಿದೆ. ಶ್ರಮ ಎಲ್ಲಿದಿಯೋ ಅಲ್ಲಿ ಫಲವಿರುತ್ತದೆʼ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Job Guide: ಗ್ಯಾಸ್ ಅಥಾರಟಿ ಆಫ್ ಇಂಡಿಯಾ ಲಿಮಿಟೆಡ್ನಲ್ಲಿದೆ 275 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ
ಮಾಲಿನ್ಯ ತಡೆಯಲು ಅಗತ್ಯ ಕ್ರಮ
ವಿಜಯನಗರದ ಪಾಲಿಕೆ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿ ಅಜಿತ್ ಎಂ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ ವರ್ಷ ತುಂಬಾ ಮಾಲಿನ್ಯ ಉಂಟಾಗುತ್ತಿದೆ, ಬೆಂಗಳೂರು ನಗರ ಕೂಡ ಅನಿಯಮಿತ ಮಳೆ, ಬರ, ನೀರಿನ ಕೊರತೆಯನ್ನು ಎದುರಿಸುತ್ತಿದೆ. ನಮ್ಮ ನಗರವನ್ನು ಉಳಿಸಲು ಏನು ಕ್ರಮ ಕೈಗೊಳ್ಳುತ್ತಿರಾ? ಎಂದು ಕೇಳಿದಾಗ, ʼದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ ಕಡೆ ಹೆಚ್ಚು ಗೋಧಿ ಬೆಳೆಯುತ್ತಾರೆ, ಆ ಹುಲ್ಲನ್ನು ಉಪಯೋಗಿಸಲು ಸಾಧ್ಯವಾಗದ ಕಾರಣ ಸುಡುತ್ತಿದ್ದಾರೆ. ಆದ್ದರಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ನಮ್ಮಲ್ಲಿ ಆ ರೀತಿಯ ಸಮಸ್ಯೆ ಇಲ್ಲ, ವಾಹನಗಳ ಮಾಲಿನ್ಯ ಅಷ್ಟೇ ಇದ್ದು, ಕಾರ್ಖಾನೆಗಳನ್ನು ಕೂಡಾ ಹೊರ ಭಾಗದಲ್ಲಿ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುತ್ತಿದೆ. ನಗರದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಲು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ, ನಮ್ಮ ನಾಗರೀಕರೀಕರು ಸಹ ಪರಿಸರ ಸ್ನೇಹಿ ವಾಹನಗಳಿಗೆ ಬದಲಾಗಬೇಕು. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದುʼ ಎಂದರು.
ರಾಜ್ಯದಾದ್ಯಂತ ಒಂದೇ ಗುಣಮಟ್ಟದ ಶಿಕ್ಷಣ
ಮತ್ತಿಕೆರೆಯ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಮಹೇಶ್ವರಿ, ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೋಷಕರು ಬೇರೆ ಊರುಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸಲು ಮುಂದೆ ಬರುವುದಿಲ್ಲ ಎಂದು ಕೇಳಿದಾಗ, ʼಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕಲ್ಯಾಣ ಕರ್ನಾಟಕ ಆಗಲಿ, ಇಡೀ ರಾಜ್ಯ ಒಂದೇ, ಎಲ್ಲಾ ಕಡೆ ಒಂದೇ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ನೀವು ಆತ್ಮವಿಶ್ವಾಸ ಕಳೆದುಕೊಳ್ಳಬೇಡಿʼ ಎಂದು ಧೈರ್ಯ ತುಂಬಿದರು.
ಲಗ್ಗೆರೆಯ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಲಿಖಿತ, ನಿಮ್ಮ ಮಕ್ಕಳು ಚಿಕ್ಕವರಾಗಿದ್ದಾಗ ನೀವು ಅವರೊಂದಿಗೆ ಸಲುಗೆಯಿಂದ ಇದ್ದಿರಾ, ಕಟ್ಟುನಿಟ್ಟಾಗಿ ಇದ್ದಿರಾ, ಯಾವ ಸಲಹೆ ನೀಡುತ್ತಿದ್ದಿರಿ ಎಂದು ಕೇಳಿದಾಗ, ʼನಾನು ಸಣ್ಣ ವಯಸ್ಸಿನಿಂದಲೇ ರಾಜಕೀಯದಲ್ಲಿ ತೊಡಗಿಕೊಂಡು ಬಂದಿದ್ದೇನೆ. ಆದ್ದರಿಂದ ನನ್ನ ಮಕ್ಕಳಿಗೆ ಸಮಯ ಕೊಡಲು ಆಗಿಲ್ಲ, ಆದರೂ ಅವರನ್ನು ತುಂಬಾ ಪ್ರೀತಿ ಹಾಗು ಕಾಳಜಿ ಮಾಡುತ್ತೇನೆ. ನನ್ನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದೇನೆ. ಆದರೆ, ರಾಜಕೀಯದಲ್ಲಿರುವ ಕಾರಣ ಹೆಚ್ಚು ಸಮಯ ನೀಡಲು ಸಾಧ್ಯವಾಗಿಲ್ಲ. ಮದುವೆಯಾಗುವ ಮುಂಚೆಯೇ ಮಂತ್ರಿಯಾಗಿದ್ದೆ. ಶಿಕ್ಷಣದ ಬಗ್ಗೆ ನನಗೆ ಹೆಚ್ಚು ಕಾಳಜಿಯಿದ್ದು, ನಗರದ ಖಾಸಗಿ ಶಾಲೆಗಳಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಿಗಬೇಕೆಂಬ ನಿಟ್ಟಿನಲ್ಲಿ ಸಿಎಸ್ಆರ್ ಅಡಿ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆʼ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | SSLC Exam 2025: ವಿದ್ಯಾರ್ಥಿಗಳೇ, ಎಸ್ಎಸ್ಎಲ್ಸಿ ಪರೀಕ್ಷೆ ನೋಂದಣಿಗೆ ಕೊನೇ ದಿನಾಂಕ ಇಲ್ಲಿದೆ
ಸಂವಾದ ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ರಮ್ಯಾ, ರಮೇಶ್, ಕರೀಗೌಡ, ಪಾಲಿಕೆ ಹಿರಿಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.