Thursday, 21st November 2024

DK Shivakumar: ವಕ್ಫ್ ಹೆಸರಲ್ಲಿ ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ; ಡಿ.ಕೆ. ಶಿವಕುಮಾರ್‌

DK Shivakumar

ಹುಬ್ಬಳ್ಳಿ: ವಕ್ಫ್ ವಿವಾದ ಬಿಜೆಪಿ (BJP) ಸೃಷ್ಟಿ. ನಮ್ಮ ಸರ್ಕಾರವು ರೈತರನ್ನು ರಕ್ಷಿಸಲು ಬದ್ಧವಾಗಿದ್ದು, ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ಹುಬ್ಬಳ್ಳಿಯಲ್ಲಿ ಗುರುವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

ಈ ಸುದ್ದಿಯನ್ನೂ ಓದಿ | No Smoking: ಸರ್ಕಾರಿ ಕಚೇರಿ, ಆವರಣಗಳಲ್ಲಿ ಧೂಮಪಾನ, ತಂಬಾಕು ಸೇವನೆ ನಿಷೇಧ

ವಕ್ಫ್‌ ತಿದ್ದುಪಡಿ ಮಸೂದೆ ಸಂಬಂಧ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷರ ಭೇಟಿ ಬಗ್ಗೆ ಕೇಳಿದಾಗ, ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಈ ವಿವಾದ ಸೃಷ್ಟಿಸಿದೆ. ರಾಜ್ಯದ ಆಸ್ತಿ ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ವಕ್ಫ್‌ ಆಸ್ತಿ ವಿಚಾರವಾಗಿ ಧಾರವಾಡ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ 2019 ರಿಂದ ಮೊದಲು ನೋಟಿಸ್ ಕೊಟ್ಟಿದ್ದು ಬಿಜೆಪಿ. ಬೊಮ್ಮಾಯಿ ಅವರ ಸರ್ಕಾರವೇ ನೋಟಿಸ್ ನೀಡಿದೆ. ಈಗ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ಜನ ಶಾಂತಿಯುತವಾಗಿರುವುದು ಬೇಕಾಗಿಲ್ಲ ಎಂದರು.

ಮಹಾರಾಷ್ಟ್ರ ಹಾಗೂ ರಾಜ್ಯದ ಉಪಚುನಾವಣೆ ಸಮಯದಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಜನ ಬಹಳ ಬುದ್ಧಿವಂತರು ಅವರಿಗೆ ಜನ ತಕ್ಕ ರೀತಿ ಪಾಠ ಕಲಿಸಲಿದ್ದಾರೆ. ನಾವು ದಾಖಲೆಗಳಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಿ ರೈತರನ್ನು ರಕ್ಷಣೆ ಮಾಡುತ್ತೇವೆ. ಈ ವಿಚಾರವಾಗಿ ನಮ್ಮ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.

ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ರಾಜ್ಯದ ವಿಚಾರಕ್ಕೆ ಭೇಟಿ ನೀಡುವ ಅಧಿಕಾರವಿಲ್ಲ

ಜೆಪಿಸಿ ರಾಜ್ಯದ ವಿಚಾರಕ್ಕೆ ಭೇಟಿ ನೀಡುವ ಅಧಿಕಾರವಿಲ್ಲ. ಜೆಸಿಪಿ ರಾಜ್ಯಕ್ಕೆ ಭೇಟಿ ನೀಡುವುದಾದರೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇಡೀ ಸಮಿತಿ ತಂಡ ಭೇಟಿ ನೀಡಬೇಕು. ಕೇವಲ ಸಮಿತಿ ಅಧ್ಯಕ್ಷರು ಬಂದಿದ್ದಾರೆ ಎಂದರೆ ಅವರು ಪಕ್ಷದ ಕೆಲಸಕ್ಕಾಗಿ ಬಂದಿದ್ದಾರೆ. ಅವರು ಸಂಸದರಾದ ಬೊಮ್ಮಾಯಿ ಹಾಗೂ ಸಚಿವ ಸೋಮಣ್ಣ ಅವರ ಜತೆ ಬಂದಿದ್ದಾರೆ. ಇವರಿಬ್ಬರು ಜೆಪಿಸಿ ಸದಸ್ಯರೇ? ಭೇಟಿ ನೀಡಿರುವವರು ಕೇವಲ ಬಿಜೆಪಿ ಸದಸ್ಯರು ಮಾತ್ರ, ರಾಜಕೀಯ ಉದ್ದೇಶದಿಂದ ಭೇಟಿ ನೀಡುತ್ತಿದ್ದಾರೆ. ಈ ಸಮಿತಿಗೆ ಅಧಿಕೃತ ಮಾನ್ಯತೆ ಇಲ್ಲ. ಅವರು ಏನಾದರೂ ರಾಜಕೀಯ ಮಾಡಲಿ. ಸತ್ಯಾಂಶವೇ ಬೇರೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | Good News: SC, ST ವಿದ್ಯಾರ್ಥಿಗಳ ಪ್ರೋತ್ಸಾಹಧನ 1 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಳ

ಎಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ?

ಶಿವಕುಮಾರ್ ಮುಂದೆ ಯಾಕೆ ತಗ್ಗಿಬಗ್ಗಿ ನಡೆಯಬೇಕು ಎಂಬ ಆರ್. ಅಶೋಕ್ ಅವರ ಟ್ವೀಟ್ ಬಗ್ಗೆ ಕೇಳಿದಾಗ, “ನಾನು ಅವರ ವಿಚಾರ ಮಾತನಾಡಿಲ್ಲ. ನಾನು ಜಯನಗರ ಕ್ಷೇತ್ರದ ಅನುದಾನ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಅವರ ಜತೆ ಚರ್ಚೆ ಮಾಡಿದ್ದೇನೆ. ಅಲ್ಲಿನ ಶಾಸಕರು ನಾನು ಸಚಿವನಾದ ನಂತರ ಬೆಂಗಳೂರು ಅಧೋಗತಿಯಾಗಿದೆ ಎಂದು ಹೇಳಿದ್ದಾರೆ. ಬೆಂಗಳೂರು ಎಲ್ಲಿ ಅಧೋಗತಿಯಾಗಿದೆ? ಇದೇ ಅಶೋಕ್ ಅವರು ಸಂವಿಧಾನಿಕ ಸಂಸ್ಥೆ ಲೋಕಾಯುಕ್ತ ಬಗ್ಗೆ ಮ್ಯಾಚ್ ಫಿಕ್ಸಿಂಗ್ ಎಂದು ಹೇಳಿ ಅಪಮಾನ ಮಾಡಿದ್ದಾರೆ. ಎಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ? ವಿರೋಧ ಪಕ್ಷದ ನಾಯಕರಾಗಿ ಅವರು ನೀಡಿರುವ ಹೇಳಿಕೆ ಮ್ಯಾಚ್ ಫಿಕ್ಸಿಂಗಾ?” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಕಿಡಿಕಾರಿದರು.