Wednesday, 20th November 2024

DK Shivakumar: ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಮತ್ತೆ ನೀಡುತ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ

DK Shivakumar

ಬೆಂಗಳೂರು: “ನಮ್ಮ ಸರ್ಕಾರ ಇರುವುದೇ ಬಡವರಿಗಾಗಿ. ಬಡವರ ಬಿಪಿಎಲ್ ಕಾರ್ಡ್ (BPL Card) ರದ್ದಾಗಿದ್ದರೆ ಅವರಿಗೆ ಮತ್ತೆ ನೀಡುತ್ತೇವೆ. ಅರ್ಹರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅಭಯ ನೀಡಿದರು.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಬುಧವಾರ (ನ. 20) ಪ್ರತಿಕ್ರಿಯೆ ನೀಡಿದರು.

ಆರ್ಹರ ಬಿಪಿಎಲ್ ಕಾರ್ಡ್‌ಗಳು ಕೂಡ ರದ್ದಾಗುತ್ತಿವೆ ಎಂದು ಮಾಧ್ಯಮಗಳು ಗಮನ ಸೆಳೆದಾಗ ಉತ್ತರಿಸಿದ ಅವರು, “ಬಿಪಿಎಲ್ ಕಾರ್ಡ್ ವಿತರಣೆಗೆ ಕೇಂದ್ರ ಸರ್ಕಾರ ಕೆಲವು ಮಾನದಂಡ ನಿಗದಿಪಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಅರ್ಹರ ಕಾರ್ಡ್ ರದ್ದಾಗಿದ್ದರೆ ಅವರಿಂದ ಮತ್ತೆ ಅರ್ಜಿ ಪಡೆದು ಮತ್ತೆ ಬಿಪಿಎಲ್ ಕಾರ್ಡ್ ನೀಡಲಾಗುವುದು. ಯಾರೂ ಗಾಬರಿಯಾಗುವ ಅಗತ್ಯವಿಲ್ಲ. ಕೆಲವು ಕಡೆ ಹೆಚ್ಚು-ಕಮ್ಮಿಯಾಗಿದ್ದು, ಎಲ್ಲವನ್ನು ಬಗೆಹರಿಸುತ್ತೇವೆ. ದಯಮಾಡಿ ಸಹಕಾರ ನೀಡಿ. ಸರ್ಕಾರಿ ನೌಕರರು, ಸಹಕಾರಿ ಸಂಘಗಳ ಅಧಿಕಾರಿಗಳು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಕಾರ್ಡ್ ಹೊಂದಿರುವ ಹಿನ್ನೆಲೆಯಲ್ಲಿ ಈ ಪರಿಷ್ಕರಣೆ ಮಾಡಲಾಗುತ್ತಿದೆ” ಎಂದು ತಿಳಿಸಿದರು.

ಶಾಸಕರಿಗೆ ಪಟ್ಟಿ ರವಾನೆ

ಕಾರ್ಡ್ ನೀಡುವಾಗ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ, ಅದೇ ರೀತಿ ಕಾರ್ಡ್ ರದ್ದು ಮಾಡುವಾಗ ಮಾಡಬಹುದಲ್ಲವೇ ಎಂದು ಕೇಳಿದಾಗ, “ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಬಂಧಪಟ್ಟ ಸಚಿವರ ಜತೆ ಚರ್ಚೆ ಮಾಡಿ ನಿರ್ದೇಶನ ನೀಡಿದ್ದಾರೆ. ಯಾರ ಬಿಪಿಎಲ್ ಕಾರ್ಡ್ ರದ್ದಾಗಿದೆ ಎಂದು ಆಯಾ ಕ್ಷೇತ್ರಗಳ ಶಾಸಕರಿಗೆ ಪಟ್ಟಿ ರವಾನಿಸುತ್ತೇವೆ. ಅವರು ಒಂದು ತಂಡ ರಚಿಸಿ ಯಾವ ಅರ್ಹರಿಗೆ ಕಾರ್ಡ್ ರದ್ದಾಗಿದೆ ಎಂದು ಪರಿಶೀಲನೆ ಮಾಡುತ್ತಾರೆ. ಇನ್ನು ಗ್ಯಾರಂಟಿ ಅನುಷ್ಠಾನ ಸಮಿತಿ ತಂಡದವರಿಗೂ ಮನೆ ಮನೆಗೆ ಹೋಗಿ, ಯಾರಿಗಾದರೂ ಅನ್ಯಾಯ ಆಗಿದ್ದರೆ ಅದನ್ನು ಸರಿಪಡಿಸುವಂತೆ ಜವಾಬ್ದಾರಿ ನೀಡಲಾಗುವುದು” ಎಂದು ತಿಳಿಸಿದರು.

ಕೆಲವು ಶಾಸಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ಕೇಳಿದಾಗ, “ಈ ವಿಚಾರವನ್ನು ಮುಖ್ಯಮಂತ್ರಿ ಮಾತನಾಡಲಿದ್ದಾರೆ” ಎಂದು ಹೇಳಿದರು.

ನಂದಿನಿ ಹಾಲಿನ ಮಾರುಕಟ್ಟೆ ವಿಸ್ತರಣೆಯಿಂದ ರೈತರಿಗೆ ನೆರವು

ಮುಖ್ಯಮಂತ್ರಿ ದಿಲ್ಲಿಗೆ ತೆರಳುತ್ತಿರುವ ಬಗ್ಗೆ ಕೇಳಿದಾಗ, “ಮುಖ್ಯಮಂತ್ರಿ ಹಾಲಿನ ವಿಚಾರವಾಗಿ ದಿಲ್ಲಿ ಪ್ರವಾಸ ಮಾಡುತ್ತಿದ್ದಾರೆ. ನಮ್ಮ ನಂದಿನಿ ಹಾಲಿನ ಮಾರುಕಟ್ಟೆ ವಿಸ್ತರಿಸಲು ತೆರಳುತ್ತಿದ್ದಾರೆ. ನಾನು ಕೂಡ ಇದಕ್ಕೆ ತೆರಳಬೇಕಾಗಿತ್ತು. ಆದರೆ ನಾಳೆ ಮೀನುಗಾರರ ದಿನ ಕಾರ್ಯಕ್ರಮ ಇರುವುದರಿಂದ ನಾನು ಮುರುಡೇಶ್ವರಕ್ಕೆ ತೆರಳುತ್ತಿದ್ದೇನೆ. ನಂದಿನಿ ಹಾಲಿಗೆ ಮಾರುಕಟ್ಟೆ ವಿಸ್ತರಣೆ ಮಾಡಿದರೆ ನಮ್ಮ ರೈತರಿಗೆ ನೆರವಾಗುತ್ತದೆ. ಹೀಗಾಗಿ ಈ ಭೇಟಿಗೂ ರಾಜಕೀಯಕ್ಕೂ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.

ನಕ್ಸಲ್ ನಾಯಕ ವಿಕ್ರಂ ಗೌಡ ಅವರ ಎನ್‌ಕೌಂಟರ್ ಖಂಡಿಸಿ ಎಡಪಂಥೀಯರು ಸರ್ಕಾರದ ವಿರುದ್ಧ ನಿಂತಿರುವ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಗೃಹಮಂತ್ರಿ ಪರಮೇಶ್ವರ್‌ ಪ್ರತಿಕ್ರಿಯೆ ನೀಡಲಿದ್ದಾರೆ” ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: DK Shivakumar: ರಾಜಕೀಯ ಮಾಡಲು ವಿರೋಧ ಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುತ್ತಿವೆ ಎಂದ ಡಿ.ಕೆ. ಶಿವಕುಮಾರ್