Saturday, 28th September 2024

DK Shivakumar: ಯಾರಾದ್ರೂ ಲಂಚ ಕೇಳಿದ್ರೆ ನನಗೆ ಪತ್ರ ಬರೆಯಿರಿ ಎಂದ ಡಿಕೆಶಿ

DK Shivakumar

ಸಾತನೂರು (ಕನಕಪುರ): “ಸರ್ಕಾರಿ ಸೌಲಭ್ಯ ಕೊಡಿಸುತ್ತೇವೆ, ಕೆಲಸ ಮಾಡಿಕೊಡುತ್ತೇವೆ ಎಂದು ಅಧಿಕಾರಿಗಳು ಮತ್ತು ಮುಖಂಡರು ಜನರ ಬಳಿ ಲಂಚ ಕೇಳಬಾರದು. ಒಂದು ವೇಳೆ ಕೇಳಿದರೆ ಬೆಂಗಳೂರಿನ ನನ್ನ ವಿಳಾಸಕ್ಕೆ ಅವರ ಹೆಸರು ಸಹಿತ ಪತ್ರ ಬರೆಯಿರಿ” ಎಂದು ಸಾರ್ವಜನಿಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು.

ಸಾತನೂರಿನ ಗ್ರಾಮಾಂತರ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ತಾಲೂಕಿನಲ್ಲಿ ಪಾರದರ್ಶಕವಾಗಿ ಆಡಳಿತ ನಡೆಯಬೇಕು. ನನ್ನನ್ನು ಗೆಲ್ಲಿಸಿದ ನಿಮ್ಮ ಋಣ ತೀರಿಸಬೇಕು” ಎಂದರು.

“ಈ ಹಿಂದೆ 8 ಸಾವಿರಕ್ಕೂ ಹೆಚ್ಚು ಜನರಿಗೆ ಬಗರ್ ಹುಕುಂ ಜಮೀನು ನೀಡಿದ್ದೇವೆ. ನಿವೇಶನ, ಮನೆ ಹಂಚಿದ್ದೇವೆ. ಆದರೂ ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರಿಗೆ ಜನರು ಆಶೀರ್ವಾದ ಮಾಡಲಿಲ್ಲ. ಈ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ” ಎಂದರು.

ಕನಕಪುರ ಭಾಗದಲ್ಲಿ 2-3 ಲಕ್ಷಕ್ಕೆ ಜಮೀನು ಕೇಳುವವರು ಇರಲಿಲ್ಲ

“ಈ ಭಾಗವನ್ನು ಅಭಿವೃದ್ಧಿ ಮಾಡಿದ ಪರಿಣಾಮವಾಗಿ ಜಮೀನುಗಳ ಬೆಲೆಯೂ ಹೆಚ್ಚಾಗಿದೆ. ಎರಡು, ಮೂರು ಲಕ್ಷ ಬಾಳುತ್ತಿದ್ದ ಜಮೀನುಗಳ ಬೆಲೆ ದುಪ್ಪಟ್ಟಾಗಿದೆ. ನಾನು ಹಿಂದೆ ಜಮೀನುಗಳನ್ನು ಮಾರಬೇಡಿ ಎಂದು ಸಲಹೆ ನೀಡಿದ್ದೆ. ಆದರೂ ಒಂದಷ್ಟು ಜನ ಜಮೀನುಗಳನ್ನು ಮಾರಿಕೊಂಡಿದ್ದಾರೆ” ಎಂದರು.

ಈ ಸುದ್ದಿಯನ್ನೂ ಓದಿ | Rahul Gandhi : ಅಯೋಧ್ಯೆ ಪ್ರಾಣಪ್ರತಿಷ್ಠಾಪನೆಯಲ್ಲಿ ಹಾಡು, ನೃತ್ಯ ಎಲ್ಲವೂ ಇತ್ತು; ರೈತರಿಗೆ ಆಹ್ವಾನವೇ ಇರಲಿಲ್ಲ; ರಾಹುಲ್

“ಈ ಭಾಗದಲ್ಲಿ 10 ಕೋಟಿ ವೆಚ್ಚದಲ್ಲಿ ಎಂಟು ಎಕರೆಯಲ್ಲಿ ಸಿಎಸ್ಆರ್ ನಿಧಿಯಿಂದ ದೊಡ್ಡ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಜೊತೆಗೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿ ಜನರನ್ನು ಸಬಲರನ್ನಾಗಿ ಮಾಡಿದೆ” ಎಂದು ಹೇಳಿದರು.

ಇಲಾಖಾವಾರು ಕೌಂಟರ್ ಗಳನ್ನು ತೆರೆಯಿರಿ

“ಮುಂದಿನ ಜನಸ್ಪಂದನ ಸಭೆಯಲ್ಲಿ ಅರ್ಜಿ ಬರೆಯಲು 5 ಕೌಂಟರ್‌ಗಳು ಹಾಗೂ ಇಲಾಖೆವಾರು ಅರ್ಜಿ ಸ್ವೀಕರಿಸಲು ಕೌಂಟರ್ ಗಳನ್ನು ತೆರೆಯಬೇಕು” ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ರೇಷ್ಮೆ ಕೃಷಿಯನ್ನು ಕೈ ಬಿಡಬೇಡಿ

“ವಾಣಿಜ್ಯ ಬೆಳೆಗಳಿಗೆ ಉತ್ತಮ ಬೇಡಿಕೆಯಿದೆ. ರೇಷ್ಮೆಗೆ ಉತ್ತಮ ಬೆಲೆ ಬಂದಿದೆ. ರಾಜ್ಯದಲ್ಲಿಯೇ ಅತ್ಯಂತ ಹೆಚ್ಚು ರೇಷ್ಮೆಯನ್ನು ಉತ್ಪಾದನೆ ಮಾಡುವ ತಾಲೂಕು ನಮ್ಮದು. ಯಾವುದೇ ಕಾರಣಕ್ಕೂ ರೇಷ್ಮೆ ಬೆಳೆಯನ್ನು ಕೈಬಿಡಬೇಡಿ” ಎಂದು ಕೃಷಿಕರಿಗೆ ಕಿವಿ ಮಾತು ಹೇಳಿದರು.

ನಂತರ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿದರು. ಹಲವಾರು ಸಮಸ್ಯೆಗಳನ್ನು ಹೊತ್ತು ಸುಮಾರು 700ಕ್ಕೂ ಹೆಚ್ಚು ಅರ್ಜಿಗಳು ಬಂದವು. ಒಂದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಡಿಸಿಎಂ ಪರಿಹಾರ ಸೂಚಿಸಿದರು.

ವಿದ್ಯಾರ್ಥಿಗಳು ಓಡಾಡಲು ಬಸ್ ಸಮಸ್ಯೆ ಆಗಬಾರದು

“ಸೋಮವಾರದ ಹೊತ್ತಿಗೆ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆಯಾಗಬೇಕು. ಯಾವುದೇ ಕಾರಣಕ್ಕೂ ಗ್ರಾಮೀಣ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಬಸ್‌ಗಳು ಸರಿಯಾದ ಸಮಯಕ್ಕೆ ಬರದ ಕಾರಣಕ್ಕೆ ನಾವು ವಾರಕ್ಕೆ ಮೂರು ದಿನ ಕ್ಲಾಸಿಗೆ ಸರಿಯಾಗಿ ಬರಲು ಆಗುತ್ತಿಲ್ಲ. ನಮಗೆ ಹರಿಹರದಿಂದ ಸಾತನೂರುವರೆಗೆ ಶಾಲಾ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಬೇಕು ಎಂದು ಸಾತನೂರು ಗ್ರಾಮಾಂತರ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ಹರ್ಷಿತ, ಗಾನವಿ, ಕುಸುಮ, ಕೀರ್ತನ, ದಿವ್ಯ ಅವರ ಮನವಿಗೆ ಡಿಸಿಎಂ ಸ್ಪಂದಿಸಿದ್ದರು.

ಸಾತನೂರಿನ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿಯರಾದ ತೇಜಸ್ವಿನಿ, ಶ್ವೇತಾ, ಅನು, ಮಂಗಳ ಗೌರಿ ಅವರು “ನಮ್ಮ ಊರುಗಳಲ್ಲಿ ಬಸ್ ನಿಲ್ಲಿಸುತ್ತಿಲ್ಲ ಎಂದಾಗ, “ಈ ವಿದ್ಯಾರ್ಥಿಗಳು ಪ್ರಯಾಣ ಮಾಡುವ ಹಲಗೂರಿನಿಂದ ಕನಕಪುರಕ್ಕೆ ಬರುವ ಬಸ್‌ಗಳು ಪ್ರತಿ ಹಳ್ಳಿಗಳಲ್ಲಿ ನಿಲ್ಲಿಸಬೇಕು ಹಾಗೂ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ತೊಂದರೆ ಕೊಡಬೇಡಿ ಎಂದು ಕೆಎಸ್‌ಆರ್‌ಟಿಸಿ ಡಿಟಿಒ ರಾಘವೇಂದ್ರ ಅವರನ್ನು ಕರೆದು ಸೂಚನೆ ನೀಡಿದರು.

ನಮ್ಮ ಹೊಲಕ್ಕೆ ಹೋಗಲು ಪಕ್ಕದ ಹೊಲದವರು ಬಿಡುತ್ತಿಲ್ಲ. ದಯವಿಟ್ಟು ನನಗೆ ದಾರಿ ಮಾಡಿಕೊಡಿ. ಕೆ.ಪಾಳ್ಯ ಸೌಮ್ಯ ಅವರು ಕಣ್ಣೀರಿಟ್ಟರು. “ಡಿಸಿ ಅವರನ್ನು ಕಳುಹಿಸಿ ಸಮಸ್ಯೆ ಬಗೆಹರಿಸುವೆ, ಅಳಬೇಡಮ್ಮ” ಎಂದರು.

ನಾವು ಜಿಎಸ್‌ಟಿ ಕಟ್ಟುತ್ತಿದ್ದೇವೆ ಎಂದು ಬಿಪಿಎಲ್ ಕಾರ್ಡ್ ರದ್ದು ಮಾಡಿ ಎಪಿಎಲ್ ಕಾರ್ಡ್ ಮಾಡಿದ್ದಾರೆ. ಎರಡು ಹಸು ಕಟ್ಟಿಕೊಂಡು ಸಂಸಾರ ಮಾಡುವ ನಾನು ಎಲ್ಲಿಂದ ತೆರಿಗೆ ಕಟ್ಟಲಿ ಎಂದು ಕಚುವನಹಳ್ಳಿ ನಾಗಮ್ಮ ಅವರು ಬಿಪಿಎಲ್ ಕಾರ್ಡ್ ರದ್ದಾಗಿರುವ ಬಗ್ಗೆ ಹೇಳಿದಾಗ, “ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸಲಾಗುವುದು” ಎಂದು ಹೇಳಿದರು.

ಸಾತನೂರಿನ 1 ನೇ ಬ್ಲಾಕ್ ಅಲ್ಲಿ ರಸ್ತೆ ಕಾಮಗಾರಿಯನ್ನು ಮುಕ್ಕಾಲು ಭಾಗ ಮಾಡಿ ನಿಲ್ಲಿಸಿದ್ದಾರೆ. ಒಂದಷ್ಟು ಜನ ಇದಕ್ಕೆ ಅಡ್ಡಗಾಲು ಹಾಕುತ್ತಿದ್ದು ಇದನ್ನು ಬಗೆಹರಿಸಿ ಎಂದು ಶಿವಶಂಕರ ಅವರು ಮನವಿ ಸಲ್ಲಿಸಿದಾಗ, ಪಕ್ಕದಲ್ಲೇ ಕುಳಿತಿದ್ದ ಜಿಲ್ಲಾಧಿಕಾರಿ ಯಶವಂತ್ ಅವರಿಗೆ “ಮೂರು ದಿನದೊಳಗೆ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿ” ಎಂದು ಸೂಚನೆ ನೀಡಿದರು.

ನಾನು ಪಕ್ಕಾ ಡಿ.ಕೆ. ಸುರೇಶ್ ಅಭಿಮಾನಿ

ನಾನು ಪಕ್ಕಾ ಕಾಂಗ್ರೆಸ್ ಅಭಿಮಾನಿ, ಡಿ.ಕೆ. ಸುರೇಶ್ ಪರವಾಗಿ ಕೆಲಸ ಮಾಡುತ್ತಾ ಇದ್ದೇನೆ. ನನಗೆ ಬಗರ್ ಹುಕುಂ ಜಮೀನು ನೀಡಿ ಎಂದು ಸೋರೆಕಾಯಿದೊಡ್ಡಿಯ ಸುಶೀಲಮ್ಮ ಅವರು ಮನವಿ ಮಾಡಿದಾಗ, “ಸುರೇಶ್ ಅವರಿಗೆ ಹೇಳುತ್ತೇನೆ ಈ ಬಾರಿ ನಿನಗೆ ಜಮೀನು ಕೈ ತಪ್ಪುವುದಿಲ್ಲ” ಎಂದು ಭರವಸೆ ನೀಡಿದರು.

ಈ ಸಮಸ್ಯೆ ಮಾತ್ರ ಮರೆಯಬೇಡಿ

ಸಾತನೂರು ಪಟ್ಟಣದ ಸುಮಾರು 90 ವರ್ಷದ ಕೆಂಚೇಗೌಡ ಅವರು, “ನನಗೆ ಪಿಂಚಣಿ ಬರುವುದು ನಿಂತು ಹೋಗಿ ಒಂದೂವರೆ ವರ್ಷಗಳಾಗಿವೆ. ನೀವೇ ಪರಿಹಾರ ನೀಡಿ” ಎಂದು ಕೇಳಿದಾಗ, “ಇವರ ಸಮಸ್ಯೆಯನ್ನೂ ಯಾವುದೇ ಕಾರಣಕ್ಕೂ ಮರೆಯಬೇಡಿ, ಕೂಡಲೇ ಬಗೆಹರಿಸಿ” ಎಂದು ಡಿಸಿಎಂ ಖಡಕ್ ಸೂಚನೆ ನೀಡಿದರು.

ಸಾತನೂರಿನ ಜಯಮ್ಮ ಅವರು ಸ್ವಾಮಿ ನಿಮ್ಮ ಊರಿನವಳಾದ ನನಗೇ ಸರಿಯಾಗಿ ಪಿಂಚಣಿ ಬರುತ್ತಿಲ್ಲ ಎಂದಾಗ “ಮುಂದಿನ ದಿನಗಳಿಂದ ಸರಿಯಾಗಿ ಬರುತ್ತದೆ” ಎಂದು ನಗುತ್ತಲೇ ಉತ್ತರಿಸಿದರು.

ಜ್ಞಾನಭಾರತಿಯಲ್ಲಿ ಸೀಟು ಕೊಡಿಸಿ

ನಾಗರಸನಕೋಟೆಯ ಚೈತ್ರ ಅವರು ಬೆಂಗಳೂರಿನ ಜ್ಞಾನಭಾರತಿಯಲ್ಲಿ ಎಂಸಿಎ ಸೀಟು ಕೊಡಿಸಿ ಎಂದು ಮನವಿ ಮಾಡಿದಾಗ ಪಕ್ಕದಲ್ಲಿಯೇ ಇದ್ದ ಕರಿಯಪ್ಪ ರೂರಲ್ ಕಾಲೇಜಿನ ಅಧ್ಯಕ್ಷ ಶ್ರೀಕಂಠು ಅವರನ್ನು ಕರೆದು, “ನಿಮ್ಮ ಕಾಲೇಜಿನಲ್ಲಿ ಸೀಟು ಕೊಡಿ” ಎಂದರು. ವಿದ್ಯಾರ್ಥಿನಿಯನ್ನು ಕುರಿತು “ಅಷ್ಟು ದೂರ ಏಕೆ? ಈ ಕಾಲೇಜು ಚೆನ್ನಾಗಿದೆ, ಇಲ್ಲಿಯೇ ಓದು ” ಎಂದು ಹೇಳಿದರು.

ಸಾಸಲುಪುರದ ಲಕ್ಷ್ಮಮ್ಮ ಮನೆ ನೀಡಿ ಎಂದು ಮನವಿ ಸಲ್ಲಿಸಿದರು. ನಾಗರಸನಕೋಟೆಯ ವಿನೋದಮ್ಮ ದಾಸಪ್ಪ ಅವರು ಹಸು ಸಾಕಾಣಿಕೆ ಶೆಡ್ ಕಟ್ಟಲು ಸಹಾಯಧನ ಕೊಡಿಸಿ ಎಂದು ಮನವಿ ಸಲ್ಲಿಸಿದರು. ಹೊನಗಳ್ಳಿಯ ವೆಂಕಟಮ್ಮ ಅವರು ಸಂಸಾರ ದೊಡ್ಡದಾಗಿದ್ದು ಮನೆ ಕೊಡಿ ಎಂದು ಮನವಿ ಮಾಡಿದರು. ಸಾಸಲಪುರದ ಪುಟ್ಟತಾಯಮ್ಮ ಕಬ್ಬಾಳು, ಕುರುಬಳ್ಳಿ ದೊಡ್ಡಿ, ಸಾಸಲಪುರ ಮಾರ್ಗವಾಗಿ ಬಸ್ ವ್ಯವಸ್ಥೆಗೆ ಮನವಿ ಸಲ್ಲಿಸಿದರು.

ಮನೆ ಹಾಗೂ ನಿವೇಶನ ಸಮಸ್ಯೆಗಳ ಬಗ್ಗೆ ಹೆಚ್ಚು ಅರ್ಜಿಗಳು ಬಂದಿವೆ ಎಂಬ ವಿಚಾರಕ್ಕೆ ಡಿಸಿಎಂ ಪ್ರತಿಕ್ರಿಯಿಸಿ, “ಕೆಂಬಾಳು ಬಳಿ 45 ಎಕರೆ ವಿಸ್ತೀರ್ಣದಲ್ಲಿ ಹೊಸ ಸಾತನೂರು ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಕಾಮಗಾರಿ ಪ್ರಗತಿಯಲ್ಲಿದೆ. ಇಲ್ಲಿ ಸಿಎಸ್‌ಆರ್‌ ಅಡಿ ಶಾಲೆ ನಿರ್ಮಾಣಕ್ಕಾಗಿ 8 ಎಕರೆ ಭೂಮಿ ಹಾಗೂ ಮೀಸಟ್ಟಿದ್ದು 10 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಈ ಕಾರಣಕ್ಕೆ ಎಲ್ಲರು ಅಲ್ಲಿ ನಿವೇಶನ ನೀಡಲಿ ಎಂದು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ” ಎಂದರು.

ಈ ಸುದ್ದಿಯನ್ನೂ ಓದಿ | HD Kumaraswamy: ಭ್ರಷ್ಟ ಐಪಿಎಸ್ ಅಧಿಕಾರಿಗೆ ಕಾಂಗ್ರೆಸ್ ಸರ್ಕಾರದ ಕೃಪಾಕಟಾಕ್ಷ: ಎಚ್‌ಡಿಕೆ ಆರೋಪ

ಕನಕಪುರ ಅಭಿವೃದ್ಧಿಯ ಬಗ್ಗೆ ಛಾಯಾಚಿತ್ರ ಪ್ರದರ್ಶನ

ಕನಕಪುರದ ಬಗ್ಗೆ ಪ್ರಗತಿಯ ಬಗ್ಗೆ ಛಾಯಾಚಿತ್ರ ಪ್ರದರ್ಶನದ ಬಗ್ಗೆ ಕೇಳಿದಾಗ, “ಈಗಿನ ಯುವ ಜನಾಂಗಕ್ಕೆ ಹಳೆಯ ಕ್ಷೇತ್ರ ಹೇಗಿತ್ತು ಎಂದು ತಿಳಿದಿಲ್ಲ. ನಾನು ಶಾಸಕ ಹಾಗೂ ಮಂತ್ರಿಯಾಗುವ ಮುಂಚಿತವಾಗಿ ಕನಕಪುರ ಸೇರಿ ಸುತ್ತಲಿನ, ಕಬ್ಬಾಳಮ್ಮ ಕ್ಷೇತ್ರ, ದೊಡ್ಡಆಲಹಳ್ಳಿ ರಸ್ತೆಗಳು, ತಾಲ್ಲೂಕು ಕಚೇರಿ ಹಾಗೂ ಇತರೇ ಅಭಿವೃದ್ಧಿ ವಿಚಾರಗಳ ಬಗ್ಗೆ ಛಾಯಾಚಿತ್ರಗಳ ಡಾಕ್ಯುಮೆಂಟ್ ಅನ್ನು ತಯಾರಿಸಿ ಪ್ರದರ್ಶಿಸಲಾಗುವುದು. ಅಭಿವೃದ್ಧಿಯ ಬಗ್ಗೆ ಹೊಸ ಪೀಳಿಗೆಗೆ ತಿಳಿಸಬೇಕು” ಎಂದು ಹೇಳಿದರು.