Saturday, 26th October 2024

DK Shivakumar: ನಿಶಾ ಯೋಗೇಶ್ವರ್ ಆರೋಪ ಸತ್ಯಕ್ಕೆ ದೂರವಾದುದು: ಡಿಕೆಶಿ ಸ್ಪಷ್ಟನೆ

DK Shivakumar

ಬೆಂಗಳೂರು: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ಅವರು ನಾಮಪತ್ರ ಸಲ್ಲಿಸಿದ ನಂತರ ಅವರ ಪುತ್ರಿ ನಿಶಾ ಯೋಗೇಶ್ವರ್ ಅವರು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಮಾಡುತ್ತಿರುವ ಆಪಾದನೆಗಳು ಸತ್ಯಕ್ಕೆ ದೂರವಾಗಿವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಲೋಕಸಭೆ ಚುನಾವಣೆಗೆ ಮೊದಲು ನಿಶಾ ಯೋಗೇಶ್ವರ್ ಅವರು ಕುಮಾರಕೃಪಾದಲ್ಲಿ ತಮ್ಮನ್ನು ಒಮ್ಮೆ ಭೇಟಿ ಮಾಡಿದ್ದರು. ಆಗ ತಂದೆ-ಮಗಳ ವಿಚಾರದಲ್ಲಿ ನಾನು ತಲೆ ಹಾಕುವುದಿಲ್ಲ. ಅಪ್ಪ-ಮಗಳನ್ನು ದೂರ ಮಾಡಿದ ಅಪಕೀರ್ತಿಗೆ ನಾನು ಒಳಗಾಗಲು ಬಯಸುವುದಿಲ್ಲ. ನಿಮ್ಮ ಕುಟುಂಬ ವಿಚಾರದಲ್ಲಿ ನಾನು ತಲೆ ಹಾಕಿಲ್ಲ, ಈಗಲೂ ಹಾಕುವುದಿಲ್ಲ. ಮುಂದೆಯೂ ಹಾಕುವುದಿಲ್ಲ. ನಿಮ್ಮ ತಂದೆಯ ಜತೆ ಮಾತನಾಡಿ ನೀವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ಬುದ್ದಿವಾದ ಹೇಳಿ ಕಳುಹಿಸಿದ್ದೆ.

ಹೀಗಾಗಿ ನಿಶಾ ಯೋಗೇಶ್ವರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೊ ತುಣುಕುಗಳಲ್ಲಿ ತಮ್ಮ ವಿರುದ್ಧ ಮಾಡಿರುವ ಆರೋಪಗಳು ಸತ್ಯಕ್ಕೆ ಸಂಪೂರ್ಣ ದೂರವಾಗಿವೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | HD Kumaraswamy: ಎಚ್‌ಎಂ‌ಟಿ ಭೂಮಿ ವಶಕ್ಕೆ ಪಡೆದ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಹೋರಾಟ; ಕುಮಾರಸ್ವಾಮಿ ಘೋಷಣೆ

ನಿಶಾ ಯೋಗೇಶ್ವರ್‌ ಏನು ಹೇಳಿದ್ದರು?

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಉಪ ಚುನಾವಣೆಯ ಕಾವು ಜೋರಾಗಿದೆ. ಸಿ.ಪಿ. ಯೋಗೇಶ್ವರ್‌ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಸಿಡಿ ರಹಸ್ಯ ಇದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಯೋಗೇಶ್ವರ್‌ ಅವರ ಪುತ್ರಿ ನಿಶಾ ಯೋಗೇಶ್ವರ್‌ (Nisha Yogeshwar) ಪ್ರತಿಕ್ರಿಯಿಸಿ, ಈ ಆರೋಪಗಳಿಗೆ ನೀವು ಸ್ಪಷ್ಟನೆ ನೀಡಬೇಕಿದೆ. ನನ್ನ ಸಿಡಿ ನಿಮ್ಮ ಬಳಿ ಇದ್ದರೆ ಯಾವುದೇ ರೀತಿ ಯೋಚನೆ ಮಾಡದೇ ರಿಲೀಸ್‌ ಮಾಡಿ ಡಿಕೆಶಿಯವರಿಗೆ ಹೇಳಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ನಿಶಾ ಯೋಗೇಶ್ವರ್‌ ಅವರು, ಖಾಸಗಿ ಸುದ್ದಿ ವಾಹಿನಿಯಲ್ಲಿ ಸಿಡಿ ವಿಚಾರವಾಗಿ ಪ್ರಸ್ತಾಪವಾಗಿದ್ದು, ಪುತ್ರಿಯ ಮಾನ ರಕ್ಷಣೆಗಾಗಿ ಸಿ.ಪಿ. ಯೋಗೇಶ್ವರ್‌ ಅವರು ಕಾಂಗ್ರೆಸ್‌ ಸೇರುವ ನಿರ್ಧಾರ ತೆಗೆದುಕೊಂಡರೇ ಎಂಬ ಮಾತುಗಳು ಕೇಳಿಬರುತ್ತಿವೆ. ಮಗಳ ಸಿಡಿ ಬಳಸಿಕೊಂಡು ಡಿ.ಕೆ. ಶಿವಕುಮಾರ್‌ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸಿ.ಪಿ.ಯೋಗೇಶ್ವರ್‌ ಅವರನ್ನು ಕರೆ ತಂದಿದ್ದಾರೆ ಎಂದು ನಿಮ್ಮ ಮೇಲೆ ಆರೋಪಗಳು ಕೇಳಿಬಂದಿವೆ. ಇದು ತಮಾಷೆಯ ವಿಷಯವಲ್ಲ, ಇದಕ್ಕೆ ನೀವು ದಯವಿಟ್ಟು ಸ್ಪಷ್ಟನೆ ನೀಡಬೇಕು ಎಂದು ಡಿ.ಕೆ. ಶಿವಕುಮಾರ್‌ ಅವರನ್ನು ಒತ್ತಾಯಿಸಿದ್ದರು.

ಡಿ.ಕೆ. ಶಿವಕುಮಾರ್‌ ಸರ್‌ ನಿಮ್ಮ ಮೇಲೆ ಈ ರೀತಿಯಾದ ಆರೋಪ ಇದೆ. ನೀವು ನನ್ನ ಸಿಡಿ ಇಟ್ಟುಕೊಂಡು ನನ್ನ ತಂದೆಯನ್ನು ನಿಮ್ಮ ಪಕ್ಷಕ್ಕೆ ಕರೆದುಕೊಂಡಿದ್ದೀರಿ ಎನ್ನುವ ಆರೋಪ ಇದೆ. ನೀವು ಯಾವುದಕ್ಕೂ ಹೆದರುವುದು ಬೇಡ, ನಿಮ್ಮ ಬಳಿ ಸಿಡಿ ಇದ್ದರೆ ಹಿಂಜರಿಯದೇ ಸಿಡಿ ಬಿಡುಗಡೆ ಮಾಡಿ ಸರ್‌ ಎಂದು ನಿಶಾ ಯೋಗೇಶ್ವರ್‌ ಮನವಿ ಮಾಡಿದ್ದಾರೆ.