Thursday, 21st November 2024

DK Shivakumar: ಕರಾವಳಿಯಲ್ಲಿ ಕೋಮು ಗಲಭೆ ನಿವಾರಿಸಲು ಪ್ರವಾಸೋದ್ಯಮಕ್ಕೆ ಉತ್ತೇಜನ; ಡಿ.ಕೆ. ಶಿವಕುಮಾರ್

DK Shivakumar

ಮಂಗಳೂರು: ಕರಾವಳಿ (Karavali) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada District) ಒಳನಾಡಿನಲ್ಲಿ ಮನಸು ಮನಸುಗಳ ನಡುವೆ ಶಾಂತಿ ಕದಡಿ ಹೋಗಿದೆ. ಇದು ಸರಿ ಹೋಗಲು ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಇದಕ್ಕಾಗಿ ಸರ್ಕಾರ ಈ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ತರುವ ಆಲೋಚನೆ ಹೊಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದ್ದಾರೆ. ಪುತ್ತೂರಿನ ಕೊಂಬೆಟ್ಟುವಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ನಡೆದ, ಶಾಸಕ ಅಶೋಕ್ ರೈ ಅವರ ಸಾರಥ್ಯದ ರೈ ಎಸ್ಟೇಟ್ಸ್ ಎಜುಕೇಷನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಏರ್ಪಡಿಸಿದ್ದ ʼಅಶೋಕ ಜನ-ಮನʼ ವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆ ಬರಡು ಭೂಮಿಯಂತಾಗುತ್ತಿದೆ. ಕೋಮು ಗಲಭೆ ಸೇರಿದಂತೆ ಇತರ ಸಮಸ್ಯೆಗಳಿಂದಾಗಿ ವಿದ್ಯಾಸಂಸ್ಥೆಗಳಿಗೆ ಹೊರ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಿಲ್ಲ. ಇಲ್ಲಿ ಹುಟ್ಟಿದ ಅನೇಕ ಬ್ಯಾಂಕ್‌ಗಳು ಮಾಯವಾಗಿವೆ. ಇಲ್ಲಿನ ಯುವಕರು ಸೌದಿ ಅರೇಬಿಯಾ, ಮುಂಬೈ, ಬೆಂಗಳೂರಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ | Waqf Board: ರೈತರಿಗೆ ನೀಡಿರುವ ವಕ್ಫ್‌ ಬೋರ್ಡ್‌ ನೋಟೀಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ

ಆದ ಕಾರಣಕ್ಕೆ ಈ ಭಾಗದ ನಾಯಕರು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿ ಎಂದು ಸಲಹೆ ಕೊಟ್ಟಿದ್ದಾರೆ. ಈ ಭಾಗದಲ್ಲಿ ಅತಿ ಹೆಚ್ಚು ದೇವಸ್ಥಾನಗಳಿವೆ, ಸಮುದ್ರ ತೀರವಿದೆ. ಆದ ಕಾರಣ ಈ ಭಾಗಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ಕ್ರಮ ವಹಿಸಲಾಗುವುದು. ಅತಿ ದೊಡ್ಡ ಬಂದರು ಇದ್ದರೂ ಸಹ ಮಂಗಳೂರಿನಲ್ಲಿ ಉತ್ತಮವಾದ ಫೈವ್ ಸ್ಟಾರ್ ಹೋಟೆಲ್‌ಗಳಿಲ್ಲ.

ನಾವು ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುತ್ತೇವೆ

ಪುತ್ತೂರಿನ ಅಭಿವೃದ್ಧಿಗೆ ಅಶೋಕ್ ಅವರು ಅನೇಕ ಯೋಜನೆಗಳನ್ನು ಇಟ್ಟುಕೊಂಡು ಮನವಿ ಮಾಡಿದ್ದಾರೆ. ಉಪಚುನಾವಣೆ ಇರುವ ಕಾರಣ ಈಗ ಅದನ್ನು ಬಹಿರಂಗಪಡಿಸಲು ಆಗುವುದಿಲ್ಲ. ಅವರ ಮನವಿಗಳನ್ನು ಹಂತ ಹಂತವಾಗಿ ಪೂರೈಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಮಗೆ ಎರಡು ಸ್ಥಾನಗಳಷ್ಟೇ ಸಿಕ್ಕಿರಬಹುದು. ಆದರೆ ನಾವು ಎಲ್ಲಾ ಕ್ಷೇತ್ರಗಳನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ತಿಳಿಸಿದರು.

ಅನೇಕ ರಾಜ್ಯಗಳಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಚುನಾವಣೆಗಳು ನಡೆಯುತ್ತಿವೆ. ನಾನು ಅಶೋಕ್ ರೈ ಅವರ ಬಾಂಧವ್ಯಕ್ಕೆ ಕಟ್ಟು ಬಿದ್ದು ಪುತ್ತೂರಿಗೆ ಬಂದಿದ್ದೇನೆ. ಪುತ್ತೂರಿನಲ್ಲಿ ಎಲ್ಲಾ ಸಮಾಜದವರನ್ನು ಪಕ್ಷಾತೀತವಾಗಿ ಭೇಟಿ ಮಾಡುವಂತಹ ಭಾಗ್ಯವನ್ನು ಅಶೋಕ್ ರೈ ಅವರು ನನಗೆ ಒದಗಿಸಿ ಕೊಟ್ಟಿದ್ದಾರೆ. ಅಶೋಕ್ ರೈ ಅವರು ಮಾಡುತ್ತಿರುವ ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ನಮ್ಮ ಬೆಂಬಲವಿದೆ ಎಂದು ಸೂಚಿಸಲು ಇಡೀ ಸರ್ಕಾರವೇ ಅವರ ಜತೆಗಿದೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ ಎಂದರು.

ಶಾಸಕ ಅಶೋಕ್ ರೈ ಅವರು ತಂದೆ, ತಾಯಿಗಳ ನೆನಪಿಗೆ ಈ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಅದೃಷ್ಟವಂತ ಎಂದರೆ ಅವಕಾಶಗಳಿಗೆ ಕಾಯುವನಲ್ಲ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವವನು. ಇಂತಹ ಜನಸೇವೆಯನ್ನು ಸೃಷ್ಟಿಸಿಕೊಂಡು ಕಳೆದ 12 ವರ್ಷಗಳಿಂದ ಸತತವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ ಎಂದ ಅವರು, ಅಶೋಕ್ ರೈ ಮತ್ತು ಅವರ ಕುಟುಂಬ ಪುತ್ತೂರಿನ ಜನತೆ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಹಿತಕ್ಕಾಗಿ ಅಶೋಕ್ ರೈ ವಿಧಾನಸೌಧಕ್ಕೆ ಕಳಿಸಿ ಕೊಟ್ಟಿರುವುದಕ್ಕೆ ಇಲ್ಲಿನ ಜನತೆಗೆ ಅಭಿನಂದನೆಗಳು ಎಂದರು.

ಈ ಸುದ್ದಿಯನ್ನೂ ಓದಿ | Cracker Sales: ಬೆಂಗಳೂರಲ್ಲಿ ಪಟಾಕಿ ಅಕ್ರಮ ಮಾರಾಟ, ದಾಸ್ತಾನು: 56 ವ್ಯಾಪಾರಿಗಳ ವಿರುದ್ಧ ಎಫ್‌ಐಆರ್‌

ಕ್ಷೇತ್ರದ ಅಭಿವೃದ್ಧಿಗೆ ನನ್ನ ಬಳಿ ಜಗಳ

ಪುತ್ತೂರು ಕ್ಷೇತ್ರದ ಅಭಿವೃದ್ಧಿಗಾಗಿ, ಅಶೋಕ್ ಅವರು ನನ್ನ ಬಳಿ ಬಂದು ಆಗಾಗ್ಗೆ ಜಗಳ ಮಾಡುತ್ತಿರುತ್ತಾರೆ. ಅದಕ್ಕೆ ನಾನು, ಸ್ವಲ್ಪ ನಿಧಾನವಾಗಿ ಹಾಗೂ ತಾಳ್ಮೆಯಿಂದ ಕೆಲಸ ಮಾಡು ಎಂದು ಸಲಹೆ ನೀಡುತ್ತಿರುತ್ತೇನೆ. ಐದು ವರ್ಷಗಳ ಕೆಲಸವನ್ನು ಒಂದೇ ವರ್ಷ ಮಾಡಬೇಡ. ಗುರಿ ಇಟ್ಟುಕೊಂಡು ವರ್ಷಕ್ಕೆ ಇಂತಿಷ್ಟು ಕೆಲಸ ಮಾಡಬೇಕು. ಆಗ ಸಮಗ್ರ ಅಭಿವೃದ್ಧಿ ಸಾಧ್ಯ ಎಂದ ಅವರು, ನಮಗೆ ಜೀವನದಲ್ಲಿ ಯಶಸ್ಸು ಸಿಗಬೇಕಾದರೆ. ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನ ಗುರಿ ಇರಬೇಕು, ವಿಧುರನ ನೀತಿ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು. ಆಗ ಮಾತ್ರ ಯಶಸ್ಸು ಸಾಧ್ಯ. ಈ ಎಲ್ಲಾ ಗುಣಗಳು ಅಶೋಕ್ ರೈ ಅವರ ಬಳಿ ಇದೆ ಎಂದು ಭಾವಿಸಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.