Thursday, 19th September 2024

DK Shivakumar: ಸದ್ಯಕ್ಕೆ ಸಿಎಂ ಕುರ್ಚಿ ಖಾಲಿಯಿಲ್ಲ: ಡಿಸಿಎಂ ಡಿಕೆಶಿ

DK Shivakumar

ಬೆಂಗಳೂರು: “ ಸದ್ಯಕ್ಕೆ ಸಿಎಂ ಕುರ್ಚಿ ಖಾಲಿಯಿಲ್ಲ. ಈ ಕುರ್ಚಿ ಖಾಲಿ ಇದ್ದಿದ್ದರೆ ಮಾತನಾಡಬಹುದಿತ್ತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ನಡೆಯುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.

ನಾನು ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿ ಎಂಬ ಆರ್.ವಿ.ದೇಶಪಾಂಡೆ ಅವರ ಹೇಳಿಕೆ ಬಗ್ಗೆ ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹಿರಿಯರಾದ ದೇಶಪಾಂಡೆ ಅವರು ಆಸೆ ಪಡುವುದು ತಪ್ಪಲ್ಲ. ಆದರೆ ಮಾಧ್ಯಮಗಳ ಮುಂದೆ ಮಾತನಾಡಬಾರದಿತ್ತು. ಹಿರಿಯರಾದ ಅವರಿಗೆ ಏನು ಗೌರವ ನೀಡಲಾಗುವುದೋ ಅದನ್ನು ನೀಡೋಣ” ಎಂದರು.

ನ್ಯಾಯಾಲಯದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧವಾಗಿ ತೀರ್ಪು ಬಂದರೆ ಮುಂದಿನ ನಡೆ ಏನು ಎಂದು ಕೇಳಿದಾಗ, “ಯಾವುದೇ ವ್ಯತಿರಿಕ್ತವಾಗುವುದಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿ ಮುಂದುವರಿಯುತ್ತಾರೆ. ಕೆಲಸ ಮಾಡುತ್ತಾರೆ” ಎಂದರು.

ಕಾಂಗ್ರೆಸ್ ಬಗ್ಗೆ ಸಂಸದ ಸುಧಾಕರ್ ಪ್ರಮಾಣ ಪತ್ರ ನೀಡಲಿ

ಕೋವಿಡ್ ವರದಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂಸದ ಡಾ.ಕೆ.ಸುಧಾಕರ್ ಅವರು, ಕಾಂಗ್ರೆಸ್ ಅವರು ಸತ್ಯಹರಿಶ್ಚಂದ್ರರೇ ಎನ್ನುವ ಹೇಳಿಕೆ ಬಗ್ಗೆ ಕೇಳಿದಾಗ, “ಕಾಂಗ್ರೆಸ್‌ನಲ್ಲಿ ಇದ್ದು ಈಗ ಬಿಜೆಪಿಗೆ ಹೋಗಿರುವ ಸಂಸದ ಸುಧಾಕರ್ ಅವರು ತಮ್ಮ ಹೇಳಿಕೆಯ ಬಗ್ಗೆ ಮೊದಲು ಪ್ರಮಾಣ ಪತ್ರ ನೀಡಲಿ. ಅವರ ರಕ್ತ, ಆಚಾರ, ವಿಚಾರ ಎಲ್ಲವೂ ಕಾಂಗ್ರೆಸ್ ಇತ್ತು. ಈಗ ನಾಲ್ಕೈದು ವರ್ಷದಿಂದ ಬದಲಾಗಿದೆ” ಎಂದರು.

“ನಾನು ಕೋವಿಡ್ ಹಗರಣದ ವರದಿಯನ್ನು ಓದಿಲ್ಲ. ಕೇವಲ ಮಾಧ್ಯಮಗಳ ವರದಿಯನ್ನು ಮಾತ್ರ ಓದಿದ್ದೇನೆ. ವರದಿ ಪರಿಶೀಲನೆ ನಂತರ ಪ್ರತಿಕ್ರಿಯಿಸುತ್ತೇನೆ” ಎಂದು ಹೇಳಿದರು.

ಯಡಿಯೂರಪ್ಪ ಅವರ ವಿರುದ್ದ ದಾಖಲಾಗಿರುವ ಪೋಕ್ಸೋ ಪ್ರಕರಣದ ಶೀಘ್ರ ತನಿಖೆಗೆ ರಾಜ್ಯ ಮಹಿಳಾ ಆಯೋಗ ಸೂಚಿಸಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನನಗೆ ಮಾಹಿತಿಯಿಲ್ಲ” ಎಂದರು.

ಎತ್ತಿನಹೊಳೆ ಯೋಜನೆ 2027ಕ್ಕೆ ಪೂರ್ಣ, ಸೆ.6ಕ್ಕೆ ಮೊದಲ ಹಂತದ ಕಾಮಗಾರಿಗಳ ಲೋಕಾರ್ಪಣೆ: ಡಿ.ಕೆ.ಶಿವಕುಮಾರ್

ಬೆಂಗಳೂರು: “ಎತ್ತಿನಹೊಳೆ ಯೋಜನೆ 2027ಕ್ಕೆ ಪೂರ್ಣಗೊಳ್ಳಲಿದೆ. ಪ್ರಸ್ತುತ ಪಂಪ್ ಮಾಡಿದ ನೀರನ್ನು 132 ಕಿ.ಮೀ ದೂರದ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತ್ತದೆ. ಅರಣ್ಯ ಭೂಮಿ ತಕರಾರು ಬಗೆಹರಿಸಿ ಮುಂದಿನ 140 ಕಿ.ಮೀ ಕಾಮಗಾರಿ ಪೂರ್ಣಗೊಳಿಸಿ, ತುಮಕೂರಿಗೆ ನೀರು ಹರಿಸಲಾಗುವುದು. ಮೊದಲ ಹಂತದ ಕಾಮಗಾರಿಗಳನ್ನು ( Yettinahole Project) ಸೆ.6ರಂದು ಲೋಕಾರ್ಪಣೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4 ರಿಂದ 32 ಕಿ. ಮೀ. ದೂರದಲ್ಲಿ ಎಸ್ಕೇಪ್ ಚಾನೆಲ್ ಮಾಡಿದ್ದು, ಅಲ್ಲಿಂದ ನಾಲೆ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು. ನವೆಂಬರ್ 1 ರ ವೇಳೆಗೆ ಸುಮಾರು 5 ಟಿಎಂಸಿ ನೀರನ್ನು ಮೇಲಕ್ಕೆ ಎತ್ತಲಾಗುವುದು. ಅರಣ್ಯ ಇಲಾಖೆಯಿಂದ 502 ಎಕರೆ ಜಮೀನು ಪಡೆಯಬೇಕಾಗಿದ್ದು, ಇದಕ್ಕೆ ಬದಲಿಯಾಗಿ ನಾವು 452 ಎಕರೆ ಜಮೀನು ನೀಡಿದ್ದೇವೆ. ಮುಂದಿನ 4 ತಿಂಗಳಲ್ಲಿ ಈ ಕೆಲಸ ಮುಗಿಯಲಿದ್ದು, ಆನಂತರ ತುಮಕೂರು ಭಾಗದ ಕೆಲಸವನ್ನು ತ್ವರಿತವಾಗಿ ಮುಗಿಸಲಾಗುವುದು” ಎಂದು ಹೇಳಿದರು.

“ಯೋಜನೆಯ ಒಟ್ಟು 24 ಟಿಎಂಸಿ ನೀರನ್ನು ಕುಡಿಯುವ ನೀರು ಹಾಗೂ ಕೆರೆಗಳನ್ನು ತುಂಬಿಸಲು ಬಳಸಿಕೊಳ್ಳಲಾಗುವುದು. ರೈತರು ತಮ್ಮ ಜಮೀನುಗಳನ್ನು ನೀಡಿ ಸಹಕಾರ ನೀಡಿದ್ದಾರೆ. ನೀರನ್ನು ಎತ್ತಲು ಸಾಧ್ಯವಿಲ್ಲ ಎಂದು ಒಂದಷ್ಟು ಜನ ಅಪಸ್ವರ ಎತ್ತಿದ್ದರು. ನಾನು ಇಲಾಖೆಯ ಜವಾಬ್ದಾರಿವಹಿಸಿಕೊಂಡ ಮೇಲೆ ಕಾರ್ಯಪ್ರವೃತ್ತವಾಗಿ ಈ ಯೋಜನೆ ಪೂರ್ಣಗೊಳಿಸಲು ಮುಂದಾದೆ. ಯೋಜನೆಯ ವಿರುದ್ಧವಾಗಿ ಒಂದಷ್ಟು ಜನ ಬ್ಲಾಕ್ ಮೇಲ್ ಮಾಡುತ್ತಿದ್ದರು ಅದನ್ನು ನಿವಾರಿಸಲಾಯಿತು. ಹಿಂದಿನ ಸರ್ಕಾರವು ಸಾಕಷ್ಟು ಪ್ರಯತ್ನ ಪಟ್ಟಿತ್ತು, ಆದರೆ ಸಹಕಾರ ಸಿಕ್ಕಿರಲಿಲ್ಲ” ಎಂದು ತಿಳಿಸಿದರು.

12.05 ನಿಮಿಷಕ್ಕೆ ಲೋಕಾರ್ಪಣೆ

“ಸೆ. 6 ಶುಕ್ರವಾರದಂದು 12.05 ನಿಮಿಷಕ್ಕೆ ಯೋಜನೆಯ ಪ್ರಮುಖ ಜಾಗದಲ್ಲಿ ನೀರನ್ನು ಮೇಲಕ್ಕೆ ಎತ್ತುವ ಪಂಪ್‌ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುತ್ತಾರೆ. ಒಂದಷ್ಟು ಪ್ರಮುಖ ಭಾಗಗಳಲ್ಲಿ 10.30 ಒಳಗೆ ಸಚಿವರು ಚಾಲನೆ ನೀಡುತ್ತಾರೆ. ಗೌರಿ ಹಬ್ಬದ ಶುಭದಿನದಂದು ಗಂಗಾ ಮಾತೆಗೆ ಪೂಜೆ ಸಲ್ಲಿಸಲಾಗುವುದು” ಎಂದರು.

“ಪ್ರಾಯೋಗಿಕ ಪರೀಕ್ಷೆ ನಡೆಸುವುದಕ್ಕೆ ಮುಂಚೆ ಒಂದಷ್ಟು ಕಡೆ ನೀರು ಸೋರಿಕೆಯಾಗಿತ್ತು. ಇದನ್ನೂ ಸರಿಪಡಿಸಲಾಗಿದೆ. ಸಣ್ಣ, ನದಿ, ತೊರೆಗಳಿಂದ ಎತ್ತುವ ನೀರನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಧ್ಯಯನ ಮಾಡಲು ಪ್ರತ್ಯೇಕ ತಂಡ ರಚಿಸಲಾಗಿದೆ. ಅವರು ಅಧ್ಯಯನ ನಡೆಸಿ ವರದಿ ನೀಡುತ್ತಾರೆ” ಎಂದರು.

“ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರದ ಸ್ವಲ್ಪ ಭಾಗ, ತುಮಕೂರು, ಹಾಸನ, ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು 7 ಜಿಲ್ಲೆಗಳ ಜನರಿಗೆ ಅನುಕೂಲವಾಗುವುದು. ಎಲ್ಲಾ ಪಕ್ಷಗಳ ಮುಖಂಡರು ಹಾಗೂ ರೈತ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಆಹ್ವಾನ ಪತ್ರಿಕೆ ಇಲ್ಲ ಎಂದು ಬೇಸರಿಸಬೇಡಿ ಮಾಧ್ಯಮಗಳ ಮೂಲಕ ಹಾಗೂ ಪತ್ರಿಕಾ ಜಾಹೀರಾತಿನ ಮೂಲಕ ವೈಯಕ್ತಿಕವಾಗಿ ಆಹ್ವಾನ ಮಾಡುತ್ತೇನೆ. ತೊರೆ ಕಾಡನಹಳ್ಳಿಯಿಂದ ಬೆಂಗಳೂರಿಗೆ ನೀರು ಸರಬರಾಜು ಆಗುತ್ತಿರುವುದಕ್ಕಿಂತ ಬೃಹತ್ ಪಂಪ್ ಗಳನ್ನು ಎತ್ತಿನಹೊಳೆ ಯೋಜನೆಯಲ್ಲಿ ಅಳವಡಿಸಲಾಗಿದೆ” ಎಂದರು.