Friday, 20th September 2024

ಅನ್ನ ನೀಡುವ ರೈತರನ್ನು ದೇಶದ್ರೋಹಿ ಅನ್ನದಿರಿ

ನಾಡಿನ ಜನರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ

ಕೇಂದ್ರ ಸರಕಾರದ ರೈತ ವಿರೋಧಿ ನೀತಿಯ ವಿರುದ್ಧ ಕಿಡಿ

ಗೌರವಾನ್ವಿತ ರಾಷ್ಟ್ರಪತಿಗಳ ಬಾಯಲ್ಲಿ ಈ ಮೂರೂ ಕಾಯಿದೆಗಳು ರೈತ ಪರ ಎಂದು ಭಾಷಣ ಮಾಡಿಸುತ್ತದೆ. ಹೇಗೆ ಸಹಾಯವಾಗುತ್ತದೆ ಹೇಳಿ ಎಂದರೆ ಮತ್ತದೇ ಮಾತು ತಿರುಚುವ ಕೆಲಸ. ಪ್ರತಿಭಟನೆ ಮಾಡಿದರೆ ದೇಶದ್ರೋಹಿ ಎಂಬ ಕೇಸು. ಹಾಗಿದ್ದರೆ ರೈತರನ್ನು ಹೇಗೆ ರಕ್ಷಿಸಬೇಕು? ಗದುಗಿನ ಭಾರತ ಕೃತಿ ಬರೆದ ಕನ್ನಡದ ಹೆಮ್ಮೆಯ ಕವಿ ಕುಮಾರ ವ್ಯಾಸ ಹೇಳುತ್ತಾನೆ; ‘ಕೃಷಿಯೇ ಮೊದಲು ಸರ್ವಕ್ಕೆ. ಕೃಷಿ ವಿಹೀನನ ದೇಶವದು ದುರ್ದೇಶ’ ಎನ್ನುತ್ತಾನೆ. ಇದು ಇವರಿಗೆ ಯಾಕೆ ಅರ್ಥವಾಗುವುದಿಲ್ಲ.

ನಾಡಿನ ಪ್ರೀತಿಯ ಬಂಧುಗಳೇ,
ದೇಶದ ರೈತರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ದೆಹಲಿಯ ಮೈನಸ್ ಡಿಗ್ರಿ ಚಳಿಯಲ್ಲಿ ವಯಸ್ಸಾದವರು, ಅಸಹಾಯಕರು, ಯುವಕರು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ? 140ಕ್ಕೂ ಹೆಚ್ಚು ಜನರು ಏಕೆ ಹುತಾತ್ಮರಾದರು? ರೈತರ ಸಾವಿಗೆ ಎಂತಹ ಸ್ಥಿತಿ ಬಂದಿದೆ ಎಂಬುದನ್ನು ನಗರಗಳಲ್ಲಿ ವಾಸಿಸುವ ನಾವು ಅರ್ಥ ಮಾಡಿಕೊಂಡಿದ್ದೇವೆಯೇ?

ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಲಿ: ಕೆಲ ಕಿಡಿಗೇಡಿಗಳು ಜ.26 ರಂದು ಕೆಂಪು ಕೋಟೆ ಬಳಿ ಬಾವುಟ ಹಾರಿಸಿದರು, ಅವರಿಗೆ ಶಿಕ್ಷೆಯಾಗ ಬೇಕು ನಿಜ. ದೆಹಲಿಯ ಬೀದಿ ಬೀದಿಗಳಲ್ಲಿ ಸಿಸಿ ಕ್ಯಾಮೆರಾಗಳಿವೆ. ಆ ಮೂಲಕ ತಪ್ಪಿ ತಸ್ಥರನ್ನು ಹಿಡಿದು ಶಿಕ್ಷಿಸಲಿ.
ಪೊಲೀಸರ ನಿಯಮದಂತೆ ರ್ಯಾಲಿ ನಡೆಸಿದ 10 ಲಕ್ಷ ರೈತರನ್ನು ದೇಶದ್ರೋಹಿಗಳು ಎನ್ನುವುದು ಹೇಗೆ? ಆತ್ಮ, ಹೃದಯ ಮಾರಿ ಕೊಂಡ, ಒತ್ತೆ ಇಟ್ಟುಕೊಂಡ ಜನದ್ರೋಹಿಗಳು ಮಾತ್ರವೇ ಈ ಮಾತುಗಳನ್ನಾಡಲು ಸಾಧ್ಯ? ದೇಶ ಎಂದರೆ ಜನರೇ ಅಲ್ಲವೆ? ಜನದ್ರೋಹಿಗಳು, ದೇಶ ಪ್ರೇಮಿಗಳು ಹೇಗಾಗುತ್ತಾರೆ? ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಚೀನಾದಿಂದ ಭಾರತಕ್ಕೆ ಆಮದು ಮಾಡಿ ಕೊಳ್ಳುತ್ತಿದ್ದ ರೇಷ್ಮೆ ಮೇಲಿನ ಆಮದು ತೆರಿಗೆ ಶೇ.5ಕ್ಕೆ ಇಳಿಸಿದರು. ನಮ್ಮ ರೇಷ್ಮೆ ಬೆಲೆ ಕುಸಿಯಿತು.

ಮಲೇಶಿಯಾ ಮುಂತಾದ ದೇಶಗಳಿಂದ ದೊಡ್ಡ ಮಟ್ಟದಲ್ಲಿ ಎಣ್ಣೆ, ಸೋಯಾ ಕಾಳು ಆಮದು ಮಾಡಿಕೊಂಡರು. ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ರೈತರ ಬದುಕಿಗೆ ಗಂಡಾಂತರ ಬಂತು. ಇದರ ಜತೆಗೆ ದೇಶದ ಅನೇಕ ಕಡೆ ಭೀಕರ ಬರಗಾಲ ಬಂತು. ರೈತರ ಸಾಲಮನ್ನಾ ಮಾಡಿ ಎಂದು ಕೈ ಮುಗಿದು ರಾಜ್ಯ ಸರಕಾರಗಳು ಕೇಳಿಕೊಂಡವು. ಮೋದಿ ರೈತರ ಸಾಲಮನ್ನಾ ಮಾಡುವ ಬದಲಾಗಿ ದೊಡ್ಡ ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಿದರು. ಗ್ಯಾಸ್ ಬೆಲೆ ಗಗನಕ್ಕೇರಿದೆ.

ಯುಪಿಎ ಸರಕಾರದ ಅಂತ್ಯಕ್ಕೆ ಪೆಟ್ರೋಲ್ ಮೇಲೆ ಸರಕಾರ ವಿಧಿಸುತ್ತಿದ್ದ ತೆರಿಗೆ 9.21 ಮಾತ್ರ. ಇದನ್ನು ಈಗ 32.98 ಕ್ಕೆ ಹೆಚ್ಚಿಸ ಲಾಗಿದೆ. ಡೀಸೆಲ್ ತೆರಿಗೆ 3.45 ಇದ್ದದ್ದು, 31.83ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಿಂದ ಎರಡೂವರೆ ಲಕ್ಷ ಕೋಟಿ ಹಣ ಕೇಂದ್ರಕ್ಕೆ ಹೋಗುತ್ತಿದೆ. ಅದರಲ್ಲಿ 1 ಲಕ್ಷಕೋಟಿ ಆದಾಯ ತೆರಿಗೆ, 83 ಸಾವಿರ ಕೋಟಿ ಜಿಎಸ್‌ಟಿ, 36 ಸಾವಿರ ಕೋಟಿ ಪೆಟ್ರೋಲ್- ಡೀಸೆಲ್ ಮೇಲಿನ ಹೆಚ್ಚುವರಿ ತೆರಿಗೆ. ಕೇಂದ್ರ ನಮಗೆ ಶೇ.42ರಷ್ಟು ಕೊಡಬೇಕಲ್ಲವೆ? ಆದರೆ, ಕೊಡುತ್ತಿರುವುದು 45 ರಿಂದ 50 ಸಾವಿರ
ಕೋಟಿ ಮಾತ್ರ.

ರೈತರು ಎಪಿಎಂಸಿ ಕಾಯಿದೆಗೆ ತಿದ್ದುಪಡಿ ಏಕೆ ತಂದಿದ್ದೀರಿ. ಎಲ್ಲಿ ಬೇಕಾದರೂ ಕೊಳ್ಳಬಹುದು ಮಾರಬಹುದು ಎನ್ನುತ್ತೀರಿ. ಎಪಿಎಂಸಿಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳು ತೆರಿಗೆ ಕಟ್ಟಬೇಕು. ಹೊರಗೆ ಖರೀದಿಸುವವರು ತೆರಿಗೆ ಕಟ್ಟುವಂತಿಲ್ಲ. ಹಾಗಾದಾಗ ಯಾರು ಎಪಿಎಂಸಿಗೆ ಬಂದು ಖರೀದಿಸುತ್ತಾರೆ? ಕೊಳ್ಳುವವರು ಇಲ್ಲ ಎಂದ ಮೇಲೆ ಮಾರುವವರು ತಮ್ಮ ಉತ್ಪನ್ನ ಎಲ್ಲಿ ಮಾರುವುದು? ರೈತರು ತಮ್ಮ ಹೊಲ ಗದ್ದೆಗಳಲ್ಲೇ ಮಾರಿದರೆ ಎಷ್ಟು ಬೆಲೆಗೆ ಮಾರಿದರು ಎಂದು ನೋಡುವುದು ಹೇಗೆ? ರೈತರನ್ನು ಒಬ್ಬಂಟಿಗಳಾಗಿಸಿ ಶೋಷಣೆ ಮಾಡಿದರೆ ಅದನ್ನು ಹೇಗೆ ನಿಲ್ಲಿಸುತ್ತೀರಿ? ಉತ್ಪನ್ನಗಳ ಬೆಲೆಯನ್ನು ಹೇಗೆ ನಿರ್ಣಯಿ
ಸುತ್ತೀರಿ? ಎಂಬುದು ರೈತರ ಪ್ರಶ್ನೆ.

ಈ ಪ್ರಶ್ನೆಗಳಿಗೆ ಕೇಂದ್ರ ಸರಕಾರ ಉತ್ತರಿಸುತ್ತಿಲ್ಲ. ಬದಲಿಗೆ, ಬೆಂಬಲ ಬೆಲೆ ರದ್ದು ಮಾಡಲಾಗುತ್ತದೆ ಎಂದು ಕೆಲವು ರೈತರು ಮತ್ತು ವಿರೋಧ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಇದು ಸುಳ್ಳು ಎಂದು ಕೋಟ್ಯಂತರ ರು ಖರ್ಚು ಮಾಡಿ ಜಾಹೀರಾತು ನೀಡುತ್ತಾರೆ.

ಕನಿಷ್ಟ ಬೆಂಬಲ ಬೆಲೆ ನೀಡುವ ಕಾಯಿದೆ ಜಾರಿಗೆ ತನ್ನಿ ಎಂಬುದೇ ರೈತರ ವಾದ. ಆದರೆ, ಕೇಂದ್ರ ಸರಕಾರ ಬಾಯಿ ಬಿಡದೆ ಮೌನವಾಗುತ್ತದೆ. ಪಂಜಾಬ್ ಮತ್ತು ಕೇರಳ ಸರಕಾರಗಳು ಇಂತಹ ಕಾಯಿದೆ ಜಾರಿಗೆ ತಂದರೆ ರಾಷ್ಟ್ರಪತಿಗಳು ಸಹಿ ಮಾಡುವು ದಿಲ್ಲ, ಏನಿದರ ಅರ್ಥ? ರೈತರಿಗೆ ಒಪ್ಪಂದದಲ್ಲಿ ಮೋಸವಾದರೆ ಎಸಿ-ಡಿಸಿ ಬಳಿ ದೂರು ನೀಡಬೇಕು. ಕೋರ್ಟಿಗೆ ಹೋಗಬಾ ರದು
ಎಂಬುದು ಎಷ್ಟು ಸರಿ? ಅಧಿಕಾರಿಗಳು ಯಾರ ಪರ ತೀರ್ಮಾನ ಮಾಡುತ್ತಾರೆ ಎಂಬುದು ನಮಗೆಲ್ಲ ಗೊತ್ತಿದೆಯಲ್ಲ.

ಈಗ ಹೇಳಿ ಈ ಕಾಯಿದೆಗಳು ರೈತರ ಪರವಾಗಿವೆಯೆ? ಕಾರ್ಮಿಕರ ಶೋಷಣೆಗೆ ಭೀಕರ ಕಾಯಿದೆ ಜಾರಿಗೆ ತಂದಿದ್ದಾರೆ. ಈಗಲೂ ನನ್ನ ದೇಶದ ಹೆಮ್ಮೆಯ ರೈತರನ್ನು ದೇಶದ್ರೋಹಿಗಳು ಎನ್ನಲು ನಿಮಗೆ ಮನಸ್ಸು ಬರುತ್ತದೆಯೇ? ದಯಮಾಡಿ ರೈತರನ್ನು ದೇಶದ್ರೋಹಿಗಳು ಎನ್ನಬೇಡಿ. ಅವರ ಕಷ್ಟಕ್ಕೆ ಜತೆಯಾಗಿ. ಆಗದಿದ್ದರೆ ಅವರ ಬಗ್ಗೆ ಕೆಟ್ಟ ಮಾತು ಆಡುವುದನ್ನಾದರೂ ನಿಲ್ಲಿಸಿ. ಇಡೀ ದೇಶ ರೈತರ ಋಣದಲ್ಲಿದೆ.

ಧನ್ಯವಾದಗಳೊಂದಿಗೆ ಇಂತಿ ತಮ್ಮವ – ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ