ಹುಳಿಯಾರು: ಅನ್ನದಾತನ ಶಾಪಕ್ಕೆ ಗುರಿಯಾಗದೆ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಕಿವಿ ಮಾತು ಹೇಳಿದರು.
ಕೃಷಿ ಕಾನೂನುಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ಹೊಸಹಳ್ಳಿ ಚಂದ್ರಣ್ಣ ಬಣದ ರಾಜ್ಯ ರೈತ ಸಂಘ ಬೆಂಬಲ ಸೂಚಿಸಿ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ ಹಾರಲಿ ಗದ್ದುಗೆ ಮಕುಟಗಳು. ಮುತ್ತಿಗೆ ಹಾಕಲಿ ಸೈನಿಕರೆಲ್ಲ, ಬಿತ್ತುಳುವುದನವ ಬಿಡುವು ದಿಲ್ಲ ಎನ್ನುವ ರೈತ ಗೀತೆಯ ಸಾಲಿನಂತೆ ರಾಜಕಾರಣಿಗಳ ತಂಟೆಗೆ ಬರದೆ ಲಭ ಬರಲಿ ಬಿಡಲಿ ತಮ್ಮ ಪಾಡಿಗೆ ತಾನು ಕೃಷಿ ಕಾಯಕದಲ್ಲಿ ನಿರತರಾಗಿರುತ್ತಾನೆ. ತನ್ನಪಾಡಿಗೆ ತಾನಿರುವ ರೈತರಿಗೆ ಇಂದು ಎಪಿಎಂಸಿ, ಭೂಮಿ, ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ತಂದು ಬೀದಿಗಿಳಿಯುವಂತೆ ಕೇಂದ್ರ ಸರ್ಕಾರ ಮಾಡಿದೆ ಎಂದು ಆರೋಪಿಸಿದರು.
ಇಂದು ದಿನಬಳಕೆ ವಸ್ತುಗಳು ಗಗನಕ್ಕೇರಿದೆ, ಪೆಟ್ರೋಲ್, ಡಿಸೆಲ್ ನೂರು ರೂ. ಸಮೀಪಿಸಿದೆ, ಕೊರೊನಾದಿಂದ ವ್ಯಾಪಾರ ವಹಿ ವಾಟು ಇಲ್ಲದಾಗಿದೆ, ರೈತರು, ಕೂಲಿಕಾರ್ಮಿಕರಿಗೆ ಉದ್ಯೋಗ ಇಲ್ಲದಾಗಿದೆ ಇಂತಹ ಸಂದರ್ಬದಲ್ಲಿ ದೇಶದ ಜನರ ನೆರವಿಗೆ ಬಾರದೆ ಶೇ.70 ರಷ್ಟು ಉದ್ಯೋಗ ನೀಡುವ ಕೃಷಿ ವಲಯಕ್ಕೆ ಆಘಾತಕಾರಿ ತಿದ್ದುಪಡಿ ತಂದಿದೆ. ಈ ತಿದ್ದುಪಡಿಗಳ ವಿರುದ್ಧ ದೇಶಾಧ್ಯಂತ ಹೋರಾಟ ನಡೆಯುತ್ತಿದ್ದರೂ ಮೋದಿ ಸ್ಪಂಧಿಸದೆ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಕರಿಯಪ್ಪ, ಹುಳಿಯಾರು ಹೋಬಳಿ ಅಧ್ಯಕ್ಷ ಎಸ್.ಸಿ.ಬೀರಲಿಂಗಯ್ಯ, ಹುಳಿಯಾರು ಹೋಬಳಿ ಕಾರ್ಯಾಧ್ಯಕ್ಷ ತಿಮ್ಮಪ್ಪ, ಡಿಎಸ್‌ಎಸ್ ನಾಗರಾಜು, ಪೆದ್ದಾಭೋವಿ, ರಮೇಶ್, ಹನುಮಂತಯ್ಯ, ನೀರಾ ಈರಣ್ಣ, ಆಟೋದಾದಪೀರ್, ಸೈ.ನಜೀರ್, ದಸ್ತುಗಿರಿ ಸೇರಿದಂತೆ ಅನೇಕರಿದ್ದರು.