Sunday, 15th December 2024

CM Siddaramaiah: ವೈದ್ಯರಿಂದಾಗಿ ಮನುಕುಲದ ಆಯಸ್ಸು ಹೆಚ್ಚಳ; ಸಿಎಂ ಸಿದ್ದರಾಮಯ್ಯ

CM Siddaramaiah

ಮೈಸೂರು: ವೈದ್ಯರು (Doctors) ಮತ್ತು ವೈದ್ಯಕೀಯ ಕ್ಷೇತ್ರ ಮನುಕುಲದ ಆಯಸ್ಸನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರಶಂಸೆ ವ್ಯಕ್ತಪಡಿಸಿದರು. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಶತಮಾನ ಕಂಡ ಮೈಸೂರು ವೈದ್ಯಕೀಯ ಕಾಲೇಜು 9 ಸಾವಿರ‌ ಮಂದಿ ವೈದ್ಯ ಸಂಪತ್ತನ್ನು ಸೃಷ್ಟಿಸಿದ ಹೆಗ್ಗಳಿಕೆ ಹೊಂದಿದೆ. ಪ್ರಪಂಚದಾದ್ಯಂತ ಈ ಕಾಲೇಜಿನಲ್ಲಿ ಕಲಿತ ವೈದ್ಯರು ವಿಸ್ತರಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೆ ಹೆಚ್ಚು ಪರಿಣಿತಿ ಮತ್ತು ಅನುಭವ ಇರುತ್ತದೆ ಎನ್ನುವುದು ನನ್ನ ಭಾವನೆ. ಸರ್ಕಾರಿ ಆಸ್ಪತ್ರೆಗೆ ಬರುವವರು ಹೆಚ್ಚಿನವರು ಬಡವರು. ಇವರು ವೈದ್ಯರನ್ನು ದೇವರಂತೆ ಕಾಣುತ್ತಾರೆ ಎಂದರು.

ಈ ಸುದ್ದಿಯನ್ನೂ ಓದಿ | DK Shivakumar: ಬೆಳ್ಳಂದೂರು ರಸ್ತೆ ನಿರ್ಮಾಣಕ್ಕಾಗಿ ಭೂಮಿ ನೀಡಲು ರಕ್ಷಣಾ ಇಲಾಖೆ ಒಪ್ಪಿಗೆ: ಡಿ.ಕೆ. ಶಿವಕುಮಾರ್

ವೈದ್ಯಕೀಯ ಕ್ಷೇತ್ರದ್ದು ಎರಡು ರೀತಿಯ ಜವಾಬ್ದಾರಿ ಇದೆ. ರೋಗ ಬಂದ ನಂತರ ಚಿಕಿತ್ಸೆ ಕೊಡುವುದು ಮತ್ತು ರೋಗ ಬರದಂತೆ ತಡೆಯುವುದೂ ಕೂಡ ವೈದ್ಯಕೀಯ ಕ್ಷೇತ್ರದ ಜವಾಬ್ದಾರಿ ಆಗಿದೆ ಎಂದು ಸಿಎಂ ತಿಳಿಸಿದರು.

ವೈದ್ಯರು ಸಮಾಜದ ಆಸ್ತಿ. ಇನ್ನೂ ಹೆಚ್ಚಿನ ವೈದ್ಯರು ಈ ಕಾಲೇಜಿನಿಂದ ಹೊರಗೆ ಬಂದು ಜನರ ಆಸ್ತಿ ಆಗಲಿ.‌ ಸೇವೆ, ಶುಚಿತ್ವ ಮತ್ತು ಗುಣಮಟ್ಟದಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಮೈಸೂರು ವೈದ್ಯಕೀಯ ಕಾಲೇಜು ಪ್ರಗತಿ ಕಾಣಲಿ ಎಂದರು.

ಈ ಸುದ್ದಿಯನ್ನೂ ಓದಿ | Dasara Shopping 2024: ವೀಕೆಂಡ್‌‌‌ನಲ್ಲೇ ನಡೆಯುತ್ತಿದೆ ದಸರಾ- ನವರಾತ್ರಿ ಭರ್ಜರಿ ಶಾಪಿಂಗ್‌!

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಶಾಸಕರುಗಳಾದ ತನ್ವೀರ್ ಸೇಠ್, ಹರೀಶ್ ಗೌಡ, ಡಾ. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ, ಹಿರಿಯ ಐಪಿಎಸ್ ಅಧಿಕಾರಿ ಬೋರಲಿಂಗಯ್ಯ ಸೇರಿದಂತೆ‌ ಹಲವು ಪ್ರಮುಖರು ಉಪಸ್ಥಿತರಿದ್ದರು.