Thursday, 12th December 2024

ವಿವಿಧ ಬೇಡಿಕೆ, ಕೋವಿಡ್ ಭತ್ಯೆಗೆ ಆಗ್ರಹಿಸಿ ನಾಳೆ ವೈದ್ಯರ ಮುಷ್ಕರ

ಬೆಂಗಳೂರು: ಕೋವಿಡ್ ಅಪಾಯ ಭತ್ಯೆ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಸ್ಥಾನಿಕ ವೈದ್ಯರು ಅ.7ರಂದು 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆಗೆ ಮುಂದಾಗಿರುವುದರಿಂದ ಒಪಿಡಿ ಸೇವೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ.

ತುರ್ತು ಸೇವೆ, ಕೋವಿಡ್ -19 ಸೇವೆ, ತುರ್ತು ನಿಗಾ ಘಟಕ ಸೇವೆ ಎಂದಿನಂತೆ ಇರಲಿದೆ ಎಂದು ವೈದ್ಯಕೀಯ ಸಂಘಟನೆ ತಿಳಿಸಿದೆ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ವೈದ್ಯರು ಕಠಿಣ ಪರಿಸ್ಥಿತಿಗಳನ್ನು ಎದುರಿಸಿದರು. ಆಸ್ಪತ್ರೆಗಳು ಭರ್ತಿಯಾಗಿದ್ದರಿಂದ ಸೋಂಕಿತರನ್ನು ಉಳಿಸಿ ಕೊಳ್ಳಲು ನಮ್ಮ ವೈದ್ಯರು ಹಗಲಿರುಳು ಸೇವೆ ಸಲ್ಲಿಸಿದರು.

ನಮ್ಮ ಸೇವೆಗೆ ಕೋವಿಡ್ ಅಪಾಯ ಭತ್ಯೆ ನೀಡುವುದಾಗಿ ಸರ್ಕಾರವು ಈ ಹಿಂದೆ ಘೋಷಿಸಿತ್ತು. ಅದಕ್ಕಾಗಿ ನಾಳೆ ಸೇವೆ ಸ್ಥಗಿತ ಗೊಳಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಸಂಘದ ಮುಖಂಡರು ಹೇಳಿದ್ದಾರೆ. ಸರ್ಕಾರ ಕೂಡಲೇ ಕೋವಿಡ್ -19 ಅಪಾಯ ಭತ್ಯೆ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೆರಿಟ್ ಸೀಟ್ ಪಡೆದವರಿಗೆ ಶುಲ್ಕ ಪರಿಷ್ಕರಣೆಯಿಂದ ತಾರತಮ್ಯವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಶ್ರಮಿಸಿದ ಸ್ಥಾನಿಕ ವೈದ್ಯರ ಸೇವೆ ಪರಿಗಣಿಸಿ ಶೈಕ್ಷಣಿಕ ಶುಲ್ಕವನ್ನು ಪುನರ್ ಪರಿಶೀಲಿಸಬೇಕೆಂದು ಮನವಿ ಮಾಡಿ ದ್ದಾರೆ. ಕಡ್ಡಾಯ ಗ್ರಾಮೀಣ ಸೇವೆಯಲ್ಲಿ ತೊಡಗಿರುವ ವೈದ್ಯರ ಬಾಕಿ ವೇತನವನ್ನೂ ಬಿಡುಗಡೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.