Saturday, 14th December 2024

ಸರಕಾರಿ ಗೌರವಗಳೊಂದಿಗೆ ಕಲಾಗ್ರಾಮದಲ್ಲಿ ಕವಿ ಡಾ.ಸಿದ್ದಲಿಂಗಯ್ಯರಿಗೆ ಅಂತಿಮ ವಿದಾಯ

ಬೆಂಗಳೂರು: ಕೋವಿಡ್‌ನಿಂದ ಕಳೆದ ಶುಕ್ರವಾರ ನಿಧನರಾದ ಕವಿ ಡಾ.ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ ಶನಿವಾರ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಯಿತು.

ಸರಕಾರಿ ಗೌರವಗಳೊಂದಿಗೆ ಸಿದ್ದಲಿಂಗಯ್ಯ ಅವರಿಗೆ ಅಂತಿಮ ವಿದಾಯ ಹೇಳಲಾಯಿತಲ್ಲದೆ, ಸರಕಾರದ ಪರವಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಅಂತಿಮ ನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದರು. ಜತೆಯಲ್ಲಿ ಶಾಸಕ ಮುನಿರತ್ನ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅಗಲಿದ ಚೇತನಕ್ಕೆ ನಮನ ಅರ್ಪಿಸಿದರು.

“ರಾಜ್ಯ ಕಂಡ ಶ್ರೇಷ್ಠ ಸಾಹಿತಿ. ದಮನಿತರ ದನಿಯಾಗಿದ್ದವರು ಡಾ.ಸಿದ್ದಲಿಂಗಯ್ಯ. ಅವರ ನಿಧನ ಬಹಳ ನೋವಿನ ಸಂಗತಿ. ತಮ್ಮ ಬದುಕು, ನೋವುಗಳನ್ನೇ ಸಾಹಿತ್ಯವಾಗಿ ಬರೆದವರು ಅವರು. ಎರಡು ಅವಧಿಗಳಿಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದರು. ಸದನದಲ್ಲಿ ವಿಚಾರ ಮಂಡನೆ, ಚರ್ಚೆ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದರು. ನಮಗೆಲ್ಲ ಮಾರ್ಗದರ್ಶಕರಾಗಿದ್ದರು ಎಂದು ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಎಂದರು.

ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಕಲಾಗ್ರಾಮದಲ್ಲಿ ನೆರವೇರಿಸಲಾಗಿದೆ.