Saturday, 14th December 2024

ಪೋಲಿಸ್ ಇಲಾಖೆಯಂತೆ ವೈದ್ಯಕೀಯ ಕ್ಷೇತ್ರವೂ ಸವಾಲಿನ ಕೆಲಸವಾಗಿದೆ: ಡಾ.ವೈ.ಎಸ್.ರವಿಕುಮಾರ್

ಇಎಸ್ಐಸಿ ವೈದ್ಯಕೀಯ ಮಹಾವಿದ್ಯಾಲಯದ ನಾಲ್ಕನೇ ವರ್ಷದ ಅಧ್ಯಂತ ಘಟಿಕೋತ್ಸವ

ಕಲಬುರಗಿ: ವೈದ್ಯರ ಸೇವೆಯು ಅತ್ಯಂತ ತುರ್ತು ಕಾರ್ಯವಾಗಿದ್ದು, ಅಗತ್ಯ ಸಂದರ್ಭದಲ್ಲಿ ಮುಂದೆ ಬಂದು ಸಾರ್ವಜನಿಕ ಸೇವೆ ಮಾಡಬೇಕು. ವೈದ್ಯಕೀಯ ಕ್ಷೇತ್ರವು ಪೊಲೀಸ್ ಇಲಾಖೆಯಂತೆ ಹಗಲು-ರಾತ್ರಿ ಎನ್ನದೇ ಸೇವೆ ಸಲ್ಲಿಸುವ ಕಠಿಣ ಕಾರ್ಯವಾಗಿದೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್. ರವಿಕುಮಾರ್ ಅಭಿಪ್ರಾಯಪಟ್ಟರು.

ನಗರದ ಸೇಡಂ ರಸ್ತೆಯ ಇಎಸ್ಐಸಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಾಲ್ಕನೇ ವರ್ಷದ ಅಧ್ಯಂತ ಘಟಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ನಾನು ಜೀವನದಲ್ಲಿ ಐಪಿಎಸ್ ಅಧಿಕಾರಿಯಾಗಿ ಏನಾದರು ಸಾಧಿಸಿದರೆ ಅದಕ್ಕೆ ಮುಖ್ಯ ಕಾರಣ ವೈದ್ಯಕೀಯ ಶಿಕ್ಷಣ ಕಾರಣವಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ವೈದ್ಯಕೀಯ ತರಬೇತಿ ಜತೆ, ವಿವಿಧ ಕ್ಷೇತ್ರದಲ್ಲಿನ ವಿಷಯ ಗಳ ಕುರಿತು ಕಲಿಯುವುದು ಮುಖ್ಯವಾಗಿದೆ. ವೈದ್ಯಕೀಯ ಕ್ಷೇತ್ರದ ನೈತಿಕ ಅಂಶಗಳಗಳಾದ ಕ್ಯಾಲರ್, ಹೂಬರ್, ಕ್ಯೂಬರ್, ಡಾಲರ್ ಮತ್ತು ಲಾಸ್ ಆಫ್ ಫಂಕ್ಷನಲ್ ವ್ಯಾಲ್ಯೂಸ್ ಗಳನ್ನು ತಮ್ಮ ವೈದ್ಯಕೀಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ವೈದ್ಯರು ಚಿಕಿತ್ಸೆ ನೀಡುವ ಸಮಯದಲ್ಲಿ ರೋಗಿಯ ಸಂಬಂಧಿಕರ ಜತೆ ಸಂಪರ್ಕಿಸುವುದು ಅಗತ್ಯ ವಾಗಿದೆ. ಆದರೆ, ಇಂದಿನ ದಿನಗಳಲ್ಲಿ ರೋಗಿಯ ಹಾಗೂ ಅವರ ಸಂಬಧಿಕರ ಜತೆಯಲ್ಲಿ ಸಂವಹನ ನಡೆಸುವುದೇ ಸವಾಲಾಗಿದೆ. ಸೂಕ್ತ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡುವುದು ಮುಖ್ಯ ವಾಗಿದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಖ್ಯಾತ ವೈದ್ಯ ಡಾ. ಪಿ.ಎಸ್. ಶಂಕರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಯಶಸ್ವಿ ವೈದ್ಯರಾಗಲು ರೋಗಿಯ ಸಮಸ್ಯೆ ಅರಿತು, ವೃತ್ತಿಪರತೆ, ಬದ್ಧತೆಯಿಂದ ರೋಗಿಗೆ ಚಿಕಿತ್ಸೆ ನೀಡಬೇಕು. ರೋಗಿಗೆ ಸೂಕ್ಷ್ಮ ಮಾಹಿತಿ ನೀಡಿವ ಮೂಲಕ ಭರವಸೆ ಮೂಡಿಸಿ ಚಿಕಿತ್ಸೆ ನೀಡಿಬೇಕು ಎಂದು ಹೇಳಿದರು.

ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರೆದಿದ್ದು, ವೈದ್ಯರು ನಿತ್ಯ ಹೊಸತನ್ನು ಕಲಿಯಬೇಕು. ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಸಾರ್ವಜನಿಕರ ಸೇವೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ಇಎಸ್ಐಸಿ ವೈದ್ಯಕೀಯ ಕಾಲೇಜಿನ ಡೀನ್ ಇವಾನೊ ಲೋಬೊ ಅವರು, ವಿಧ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿ ಪ್ರಾಸ್ತವಿಕ ಮಾತನಾಡಿದರು. ವಿದ್ಯಾರ್ಥಿಗಳ ಇಂದಿನ ಸಾಧನೆ ಹಿಂದೆ ಅವರ ತಂದೆ ತಾಯಿಯ ಅಪಾರ ಪ್ರೋತ್ಸಾಹ, ಬೆಂಬಲ ಹಾಗೂ ಪರಿಶ್ರಮ ಅಪಾರವಾಗಿದೆ. ಐದು ವರ್ಷಗಳ ಹಿಂದೆ ತಮ್ಮ ಮಕ್ಕಳನ್ನು ಓದಲು ಬಿಟ್ಟು ಹೋದವರು ಇಂದು ಅವರನ್ನು ವೈದ್ಯರನ್ನಾಗಿ ಕರೆದುಕೊಂಡು ಹೋಗುತ್ತಿದ್ದಾರೆ ಎಂದರು.

ಘಟಿಕೋತ್ಸವದಲ್ಲಿ ವಿಧ್ಯಾರ್ಥಿಗಳಾದ ವೈದ್ಯ ವಿದ್ಯಾರ್ಥಿಗಳಾದ ಸೊಹೆತ್, ಪವನ ಬೀದರ್ ಅವರು ತಮ್ಮ ಕಾಲೇಜು ದಿನಗಳ ನೆನಪುಗಳನ್ನು ಬಿಚ್ಚಿಟ್ಟರು.

***

ವೈದ್ಯಕೀಯ ವಿದ್ಯಾರ್ಥಿಗಳು ಇಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರ ಜತೆ ಅಧಿಕ ಸಮಯ ಕಾಲ ಕಳೆದು ಅವರ ಜೀವನ ಶೈಲಿ ರೂಡಿಸಿಕೊಳ್ಳಬೇಕು. ವೈದ್ಯರಿಗೆ ಬಡವ ಶ್ರೀಮಂತ ಅನ್ನೋ ಭೇದಭಾವ ಇರಬಾರದು. ಅಲ್ಲದೇ, ಮಕ್ಕಳ ಶೈಕ್ಷಣಿಕ ಜೀವನದಲ್ಲಿ ಪಾಲಕರ ಜವಾಬ್ದಾರಿಯೂ ಇದೆ. ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಕಳಿಸುವಾಗ ಎಚ್ಚರಿಕೆ ವಹಿಸಬೇಕು.

ಡಾ. ವೀರಭದ್ರಪ್ಪ ಹರ್ಸಣಗಿ, ಪೀಡಿಯಾಟ್ರಿಕ್ಸ್ ನ ಎಂ.ಡಿ ಹಾಗೂ ಮಾಜಿ ಕೆಎಂಸಿ ನಿರ್ದೇಶಕ

***
ಈ ಸಂದರ್ಭದಲ್ಲಿ ಇಎಸ್ಐಸಿ ಡೆಂಟಲ್ ವಿಭಾಗದ ಡೀನ್ ಡಾ. ಎಂ ನಾಗರಾಜ್, ಡೀನ್ ಕೆಪಿ ಪದ್ಮಜಾ, ಅಕಾಡೆಮಿಕ್ ರಿಜಿಸ್ಟರ್ ಡಾ. ಐ. ಅಮೃತಾ ಸ್ವಾತಿ, ಡಾ. ಅನಿಲ್ ದೊಡ್ಡಮನಿ ಸೇರಿದಂತೆ ಕಾಲೇಜಿನ ವಿವಿಧ ನಿಕಯಗಳ ಉಪನ್ಯಾಸಕರು, ವಿದ್ಯಾರ್ಥಿಗಳು, ಪಾಲಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.