Monday, 18th November 2024

Smoking in Bus: ಸಾರಿಗೆ ಬಸ್ ಚಲಾಯಿಸುತ್ತಲೇ ಬೀಡಿ ಸೇದಿದ ಚಾಲಕ; ಪ್ರಯಾಣಿಕರ ಆಕ್ರೋಶ

Smoking in Bus

ಕೊಪ್ಪಳ: ಕೆಎಸ್‌ಆರ್‌ಟಿಸಿ ಬಸ್ ಚಲಾಯಿಸುತ್ತಲೇ ಚಾಲಕನೊಬ್ಬ ಬೀಡಿ ಸೇದಿರುವುದು (Smoking in Bus) ಕಂಡುಬಂದಿದೆ. ಧೂಮಪಾನ ಮಾಡಿದ ಚಾಲಕನ ವಿರುದ್ಧ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ಬಸ್ ಚಾಲಕನಿಂದಲೇ ನಿಯಮ ಉಲ್ಲಂಘನೆ ಆಗಿರುವುದನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ನಿಪ್ಪಾಣಿ ಘಟಕಕ್ಕೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ (ಕೆಎ 23, ಎಫ್ 1045) ಗಂಗಾವತಿಯಿಂದ ಕೋಲ್ಹಾಪುರಕ್ಕೆ ತೆರಳುತ್ತಿದ್ದ ವೇಳೆ ಚಾಲಕ ಬೀಡಿ ಸೇದುತ್ತಾ ಬಸ್‌ ಚಾಲನೆ ಮಾಡಿದ್ದಾನೆ. ಬಸ್‌ನಲ್ಲಿ ಧೂಮಪಾನ ನಿಷೇಧವಿದ್ದರೂ ಬೀಡಿ ಸೇದಿದ ಚಾಲಕನ ವಿರುದ್ಧ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದು, ಚಾಲಕನ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಸುದ್ದಿಯನ್ನೂ ಓದಿ | Anekal News: ಆನೇಕಲ್ ಸಮೀಪ 5 ಕಾಡಾನೆಗಳು ಪ್ರತ್ಯಕ್ಷ; ಜನರಲ್ಲಿ ಆತಂಕ ಸೃಷ್ಟಿ

ದಂಡ ಕಟ್ಟಲು ಹೇಳಿದ ಪೊಲೀಸರಿಗೆ ಕೊಲೆ ಬೆದರಿಕೆ ಹಾಕಿದ ಬೈಕ್‌ ಸವಾರ; ವಿಡಿಯೊ ನೋಡಿ

ಲಕ್ನೋ: ಸಂಚಾರ ನಿಯಮ ಉಲ್ಲಂಘನೆ ಮಾಡಿದಾಗ ಟ್ರಾಫಿಕ್ ಪೊಲೀಸರು ದಂಡ ಕೊಟ್ಟುವಂತೆ ಹೇಳಿ ಚಲನ್ ನೀಡುತ್ತಾರೆ. ಆದರೆ ಈ ರೀತಿ ಚಲನ್ ನೀಡಿದ್ದಕ್ಕೆ ವ್ಯಕ್ತಿಯೊರ್ವ ಪೊಲೀಸರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ಸಂಭಾಲ್ ಜಿಲ್ಲೆಯ ಚಂದೌಸಿ ಕೊಟ್ವಾಲಿ ಪ್ರದೇಶದಲ್ಲಿ ನಡೆದಿದೆ. ವ್ಯಕ್ತಿ ಹಾಗೂ ಪೊಲೀಸರ ನಡುವೆ  ವಾಗ್ವಾದ ನಡೆದು ವ್ಯಕ್ತಿ ಪೊಲೀಸರಿಗೆ ಕೊಲೆ ಬೆದರಿಕೆ ಹಾಕುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ವರದಿಗಳ ಪ್ರಕಾರ, ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಟ್ರಾಫಿಕ್ ಪೊಲೀಸರು ವ್ಯಕ್ತಿಯ ಬೈಕ್ ಅನ್ನು ನಿಲ್ಲಿಸಿ ದಂಡ ಕಟ್ಟುವಂತೆ ಚಲನ್ ನೀಡಿದ್ದಾರೆ. ಇದು ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ವೈರಲ್ ಆಗಿರುವ ವಿಡಿಯೊದಲ್ಲಿ, ವ್ಯಕ್ತಿ ಟ್ರಾಫಿಕ್ ಪೊಲೀಸರಿಗೆ ಬೆದರಿಕೆ ಹಾಕುವುದು ಸ್ಪಷ್ಟವಾಗಿ ಕಂಡುಬಂದಿದೆ.

ವಿಡಿಯೊದಲ್ಲಿ ಆತ “ನೀವು ಎಂದಾದರೂ ನನ್ನ ವಾಹನವನ್ನು ಮತ್ತೆ ನಿಲ್ಲಿಸಿದರೆ, ನಾನು ಚಾಕು ತೆಗೆದುಕೊಂಡು ಬಂದು ನಿಮ್ಮನ್ನು ಇರಿದು ಕೊಲೆ ಮಾಡುತ್ತೇನೆ” ಎಂದು ಹೇಳಿದ್ದಾನೆ. ಇದನ್ನು ಟ್ರಾಫಿಕ್ ಪೊಲೀಸರೊಬ್ಬರು ತಮ್ಮ  ಮೊಬೈಲ್ ಪೋನ್‍ನಲ್ಲಿ ವಿಡಿಯೊ ರೆಕಾರ್ಡ್ ಮಾಡಿದ್ದಾರೆ. ಘಟನೆಯ ನಂತರ, ಟ್ರಾಫಿಕ್ ಪೊಲೀಸ್ ಅಧಿಕಾರಿ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಆತನನ್ನು ಬಂಧಿಸಿ ನಂತರ ಚಂದೌಸಿ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವರದಿಯ ಪ್ರಕಾರ, ಟ್ರಾಫಿಕ್ ಪೊಲೀಸ್  ಅಧಿಕಾರಿ ದೇವೇಂದ್ರ ಅವರು ತಮ್ಮ ಸಹೋದ್ಯೋಗಿ ಕುನಾಲ್ ಅವರೊಂದಿಗೆ ಲಾಲ್ ಪೆಟ್ರೋಲ್ ಪಂಪ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಹೆಲ್ಮೆಟ್ ಧರಿಸಿರಲಿಲ್ಲ. ಹೆಲ್ಮೆಟ್ ಇಲ್ಲದೆ ಮತ್ತು ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಸವಾರಿ ಮಾಡಿದ್ದಕ್ಕಾಗಿ ದೇವೇಂದ್ರ ಅವರು ಬೈಕ್ ಸವಾರ ಮೊಹಲ್ಲಾ ಕಾಗ್ಜಿ ನಿವಾಸಿ ರಹೀಶ್ ಅಹ್ಮದ್‍ನಿಗೆ ಮೋಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ:ಅತ್ಯಾಚಾರ ಕೇಸ್‌ ವಾಪಸ್‌ ಪಡೆಯದ್ದಕ್ಕೆ ಸಂತ್ರಸ್ತೆಯ ಅಜ್ಜನನ್ನೇ ಗುಂಡು ಹಾರಿಸಿ ಕೊಂದ ಆರೋಪಿ

ಇದರಿಂದ ಕೋಪಗೊಂಡ ರಹೀಶ್ ಅಹ್ಮದ್ ಮತ್ತು ಆತನ ಸ್ನೇಹಿತ ಇಬ್ಬರೂ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೇ ಚಾಕುವಿನಿಂದ ಇರಿದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ನಂತರ ದೇವೇಂದ್ರ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರಹೀಶ್ ಅಹ್ಮದ್ ಮತ್ತು ಆತನ ಸ್ನೇಹಿತನ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ರಹೀಶ್ ಅಹ್ಮದ್‍ನನ್ನು ಬಂಧಿಸಿದ್ದಾರೆ.