ತುಮಕೂರು: ಬಿಗ್ ಬಾಸ್ (Bigg Boss) ಖ್ಯಾತಿಯ ಡ್ರೋನ್ ಪ್ರತಾಪ್ (Drone Prathap) ಅವರನ್ನು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಗುರುವಾರ (ಡಿ. 12) ಬಂಧಿಸಿದ್ದಾರೆ. ನೀರಿನೊಳಗೆ ರಾಸಾಯನಿಕ ಹಾಕಿ ಕೃಷಿ ಹೊಂಡದಲ್ಲಿ ಸ್ಫೋಟ (Chemical Blast) ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್ ಪ್ರತಾಪ್ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಡಿಯಂ ನೀರಿಗೆ ಎಸೆದು ಬ್ಲಾಸ್ಟ್ ಮಾಡಿದ್ದ ಪ್ರತಾಪ್ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳಿಂದ ಟೀಕೆಗೆ ಒಳಗಾಗಿದ್ದರು.
ಡ್ರೋನ್ ಪ್ರತಾಪ್ ಕೃಷಿ ಹೊಂಡವನ್ನು ಸ್ಫೋಟಿಸಿದ್ದಲ್ಲದೆ ಆ ದೃಶ್ಯವನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಸಂಬಂಧ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Drone Prathap has claimed on YouTube of using sodium metal to create a blast or extreme reaction in a water body at #Netkal in #Mandya district of #Karnataka.
— Hate Detector 🔍 (@HateDetectors) December 12, 2024
26-year-old #DronePrathap who has been involved in many controversies since the last few years had claimed to have… pic.twitter.com/YI5FUxgnGm
ಏನಿದು ಪ್ರಕರಣ?
ಇತ್ತೀಚೆಗೆ ಡ್ರೋನ್ ಪ್ರತಾಪ್ ನಿರ್ಜನ ಪ್ರದರ್ಶನದಲ್ಲಿದ್ದ ನೀರು ತುಂಬಿದ ಆಳವಾದ ಗುಂಡಿಗೆ ಸೋಡಿಯಂ ಸೇರಿದಂತೆ ವಿವಿಧ ರಾಸಾಯನಿಕಗಳನ್ನು ಎಸೆದು ಸ್ಫೋಟಗೊಳ್ಳುವಂತೆ ಮಾಡಿದ್ದರು. ವಿಜ್ಞಾನ ಪ್ರಯೋಗದ ಹೆಸರಿನಲ್ಲಿ ಅವರು ನಡೆಸಿದ ಈ ಕೃತ್ಯ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ರಾಸಾಯನಿಕ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದ್ದಲ್ಲದೆ ಬೆಂಕಿ ಸಹ ಚಿಮ್ಮಿದೆ. ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡುಬಂದಿದೆ. ಇದನ್ನು ವಿಡಿಯೊ ಮೂಲಕ ರೆಕಾರ್ಡ್ ಮಾಡಲಾಗಿತ್ತು. ಜತೆಗೆ ಪ್ರತಾಪ್ ನೋಡಿ… ನೋಡಿ…ಬಾಂಬ್ ಥರ ಬ್ಲಾಸ್ಟ್ ಆಗುತ್ತಿದೆ ಎಂದು ವಿವರಣೆ ಬೇರೆ ನೀಡಿದ್ದರು.
ಈ ವಿಡಿಯೊ ನೋಡಿದ ಅನೇಕರು ಈ ಪ್ರಯೋಗ ದುರುಪಯೋಗವಾಗಬಹುದಾದ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರು. ಪ್ರತಾಪ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 288 ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ವಿಡಿಯೊದಲ್ಲಿ ಏನಿದೆ?
ಸ್ಫೋಟಕ್ಕೆ ಪ್ರತಾಪ್ 5 ಬಾಕ್ಸ್ ಸೋಡಿಯಂ ಮೆಟಲ್ ಬಳಸಿದ್ದಾರೆ. ಈ ಸೋಡಿಯಂ ನೀರಿನ ಜತೆಗೆ ಸೇರಿದಾಗ ದೊಡ್ಡ ಮಟ್ಟದಲ್ಲಿ ರಿಯಾಕ್ಟ್ ಆಗಿದೆ. ಸೋಡಿಯಂ ಅನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದಾರೆ. ಆ ಚೀಲಕ್ಕೆ ತೂತು ಮಾಡಿ ಕೆರೆಗೆ ಎಸೆದಿದ್ದಾರೆ. ಕೆಲ ಸೆಕೆಂಡ್‌ಗಳಲ್ಲಿ ಅದು ಬ್ಲಾಸ್ಟ್ ಆಗಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಸ್ಫೋಟ ನಡೆದ ಬಳಿಕ ಮಾತನಾಡಿದ ಅವರು, ”ನಾವು ಇದನ್ನು ಸಂಪೂರ್ಣವಾಗಿ ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ್ದೇವೆ. ನಾನು ಮೊದಲ ಸಲ ಇಷ್ಟೊಂದು ಸೋಡಿಯಂ ಬಳಸಿ ಪ್ರಯೋಗ ಮಾಡಿದ್ದೇನೆ. ಇದು ಯಶಸ್ವಿಯಾಗಿದೆ. ಇಲ್ಲಿ ನಾವು ಯಾವುದೇ ಜಲಚರಗಳಿಗೆ, ಪ್ರಾಣಿಸಂಕುಲಕ್ಕೆ ಹಾನಿ ಮಾಡಿಲ್ಲ” ಎಂದೂ ಹೇಳಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಭಾಗವಹಿಸಿದ ಬಳಿಕ ಪ್ರತಾಪ್ ಅವರ ಜನಪ್ರಿಯತೆ ಹೆಚ್ಚಾಗಿದೆ. ಇದೇ ಜನಪ್ರಿಯತೆ ಅವರಿಗೆ ಸಿನಿರಂಗದ ಬಾಗಿಲನ್ನೂ ತೆರೆದುಕೊಟ್ಟಿದೆ. ಇತ್ತೀಚೆಗೆ ಅವರು ಚಿತ್ರವೊಂದಕ್ಕೆ ಆಯ್ಕೆಯಾಗಿದ್ದರು. ಈ ಮಧ್ಯೆ ಅವರು ಯಡವಟ್ಟು ಮಾಡಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: BBK 11: ಅತಿಥಿಗಳಿಗೆ ಗೌರವವೂ ಕೊಡದೆ ಅವರೆದುರೇ ಕಿತ್ತಾಡಿಕೊಂಡ ಮಂಜು-ಶಿಶಿರ್