ಬೆಂಗಳೂರು: ಸೋಡಿಯಂ ಬಳಸಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ (Drone Prathap) ಬಂಧನದ ಬೆನ್ನಲ್ಲೇ ಅವರ ಇಬ್ಬರು ಸ್ನೇಹಿತರನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಡ್ರೋನ್ ಪ್ರತಾಪ್ ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ ಮಾಡಿ ಬಂಧನಕ್ಕಿಡಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅವರ ಇಬ್ಬರು ಸ್ನೇಹಿತರನ್ನು ತುಮಕೂರಿನ ಮಿಡಿಗೇಶಿ ಪೊಲೀಸರು ಬಂಧಿಸಿದ್ದಾರೆ.
ವಿನಯ್ ಹಾಗೂ ಪ್ರಜ್ವಲ್ ಬಂಧಿತರು. ವಿನಯ್ ಕ್ಯಾಮರಾ ಮೆನ್ ಆಗಿದ್ದು, ಪ್ರಜ್ವಲ್, ಡ್ರೋನ್ ಪ್ರತಾಪ್‌ಗೆ ಸೋಡಿಯಂ ಕೊಡಿಸಿದ್ದ. ಇಬ್ಬರನ್ನು ಬೆಂಗಳೂರಿನಲ್ಲಿ ತಡ ರಾತ್ರಿ ಬಂಧಿಸಲಾಗಿದೆ. ಡ್ರೋನ್ ಪ್ರತಾಪ್ ಬೆಂಗಳೂರಿನ ಅವೆನ್ಯೂ ರಸ್ತೆಯ ಅಂಗಡಿಯೊಂದರಲ್ಲಿ ಸೋಡಿಯಂ ಖರೀದಿಸಿದ್ದಾಗಿ ತಿಳಿದುಬಂದಿದೆ. ಇನ್ನು FIR ದಾಖಲಾಗುತ್ತಿದ್ದಂತೆ ಫಾರ್ಮ್ ಹೌಸ್ ಮಾಲೀಕ ಜಿತೇಂದ್ರ ಜೈನ್ ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆದಿದೆ.
ಸೋಡಿಯಂ ಬಳಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್‌ಬಾಸ್ ಖ್ಯಾತಿಯ ಡ್ರೋನ್ ಪ್ರತಾ ಪ್‌ನನ್ನು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಗುರುವಾರ ಬಂಧಿಸಿದ್ದರು. ನೀರಿಗೆ ಸೋಡಿಯಂ ಎಸೆದು ಬ್ಲಾಸ್ಟ್ ಮಾಡಿದ್ದ ಪ್ರತಾಪ್, ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳಿಂದ ಟೀಕೆಗೆ ಒಳಗಾಗಿದ್ದರು. ಆದರೆ, ಇದೀಗ ಸ್ಫೋಟ ನಡೆಸಿದ್ದು ಯಾಕೆ ಎಂಬ ಬಗ್ಗೆ ವಿಚಾರಣೆ ವೇಳೆ ಡ್ರೋನ್ ಪ್ರತಾಪ್ ಹಲವು ಸಂಗತಿಗಳನ್ನು ಬಾಯಿಬಿಟ್ಟಿದ್ದಾರೆ.
ಏನಿದು ಪ್ರಕರಣ?
ಡ್ರೋನ್ ಪ್ರತಾಪ್ ನೀರಿನೊಳಗೆ ರಾಸಾಯನಿಕ ಹಾಕಿ ಕೃಷಿ ಹೊಂಡದಲ್ಲಿ ಸ್ಫೋಟ ನಡೆಸಿ, ಆ ದೃಶ್ಯವನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಸಂಬಂಧ ಮಧುಗಿರಿಯ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರತಾಪ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 288 ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿ, ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.
ವಿಚಾರಣೆ ವೇಳೆ ಡ್ರೋನ್ ಪ್ರತಾಪ್ ಹಲವು ಸಂಗತಿಗಳನ್ನು ಬಾಯಿಬಿಟ್ಟಿದ್ದಾರೆ. ಇದಕ್ಕೂ ಮುನ್ನ ಎರಡು ಬಾರಿ ಇದೇ ರೀತಿಯ ಸ್ಫೋಟಿಸಿದ್ದೆ. ಸ್ಫೋಟದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದೆ. ಯೂಟ್ಯೂಬ್ನಿಂದ 100 ಡಾಲರ್ ಬಂದಿತ್ತು. ಹೀಗಾಗಿ, ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಸೋಡಿಯಂ ಬಳಸಿ ಸ್ಫೋಟಿಸಿದೆ. ಸ್ಫೋಟದ ವಿಡಿಯೊವನ್ನು ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದೆ. ಇದರಿಂದ ಬರುವ ಹಣವನ್ನು ಸಮಾಜ ಕಾರ್ಯಕ್ಕೆ ಉಪಯೋಗಿಸಲು ನಿರ್ಧರಿಸಿದ್ದೇನೆ ಎಂದು ಪ್ರತಾಪ್ ಬಾಯಿ ಬಿಟ್ಟಿದ್ದಾರೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಫೋಟವಾಗುತ್ತದೆ ಎಂದು ನನಗೆ ಅರಿವಿರಲಿಲ್ಲ. ಸ್ಫೋಟವಾದ ಬಳಿಕ ನನಗೆ ಅರಿವು ಆಗಿದೆ ಎಂದು ಪೊಲೀಸರ ಮುಂದೆ ಹೇಳಿದ್ದಾರೆ.
ಜಮೀನು ಮಾಲೀಕರ ಅನುಮತಿ ಪಡೆದಿಲ್ಲ
ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಜಿಲ್ಲೆಯ ಮಧುಗಿರಿ ತಾಲೂಕು ಜನಕಲೋಟಿ ಗ್ರಾಮದ ಬಳಿ 40 ಎಕರೆ ಜಮೀನು ಹೊಂದಿದ್ದಾರೆ. ಇವರು, ತಮ್ಮ ಜಮೀನಿನ 10 ಗುಂಟೆ ಜಾಗದಲ್ಲಿ 10X10 ಕಾಟೇಜ್ ನಿರ್ಮಾಣ ಮಾಡಿ ಮಾರಾಟ ಮಾಡಲು ನಿರ್ಧರಿಸಿದ್ದರು. ಇದರ ಜಾಹೀರಾತುಗಾಗಿ ಡ್ರೋನ್ ಪ್ರತಾಪ್ ಅವರನ್ನು ಮಾಲೀಕ ಜಮೀನಿಗೆ ಕರೆಸಿದ್ದರು.
ಮೊದಲನೇ ಬಾರಿಗೆ ಶ್ರೀರಾಯರ ಬೃಂದಾವನ ಫಾರ್ಮ್ ಹೌಸ್ ಜಮೀನಿಗೆ ಬಂದ ಡ್ರೋನ್ ಪ್ರತಾಪ್ ಅಲ್ಲಿರುವ ಕೃಷಿ ಹೊಂಡವನ್ನು ವೀಕ್ಷಿಸಿ ತೆರಳಿದ್ದಾರೆ. ಬಳಿಕ ಡ್ರೋನ್ ಪ್ರತಾಪ್ ಸೋಡಿಯಂ, ವಿಡಿಯೋ ಚಿತ್ರಕರಣಕ್ಕೆ ಬೇಕಾದ ಸಾಮಾಗ್ರಿಗಳ ಸಹಿತ ಕಾರಿನಲ್ಲಿ ಜಮೀನಿಗೆ ಮತ್ತೊಮ್ಮೆ ಬಂದಿದ್ದಾರೆ. ಈ ವೇಳೆ ಜಮೀನು ಮಾಲೀಕ ಸ್ಥಳದಲ್ಲಿ ಇರಲಿಲ್ಲ.
ಜಮೀನು ಮಾಲೀಕನಿಗೆ ತಾನು ಸೋಡಿಯಂನಿಂದ ಸ್ಫೋಟಿಸುತ್ತಿರುವ ವಿಚಾರ ತಿಳಿಸದೆ, ಪ್ಲಾಸ್ಟಿಕ್ ಕವರ್ನಲ್ಲಿ ಸೋಡಿಯಂ ಉಂಡೆಯನ್ನು ಹಾಕಿ ಕೃಷಿ ಹೊಂಡದಲ್ಲಿ ಡ್ರೋನ್ ಪ್ರತಾಪ್ ಎಸೆದಿದ್ದಾರೆ. ಆಗ, ದೊಡ್ಡ ಪ್ರಮಾಣದ ಸದ್ದಿನೊಂದಿಗೆ ಸೋಡಿಯಂ ಸ್ಫೋಟಗೊಂಡಿದೆ. ಇದರಿಂದ ಅಕ್ಕ-ಪಕ್ಕದ ತೋಟದಲ್ಲಿದ್ದ ಜನರು ಮತ್ತು ಮನೆಯವರು ಗಾಬರಿಗೊಂಡಿದ್ದರು. ಸೋಡಿಯಂ ಸ್ಫೋಟದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು, ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೊವನ್ನು ನೋಡಿದ ಪೊಲೀಸರು ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಪೊಲೀಸರು ತನಿಖೆ ನಡೆಸಿದಾಗ, 15 ದಿನಗಳ ಹಿಂದೆ ಸ್ಫೋಟಗೊಳಿಸಿರುವ ಬಗ್ಗೆ ತಿಳಿದುಬಂದಿದೆ.
ಯೂಟ್ಯೂಬ್‌ನಲ್ಲಿ ಹಣ ಸಂಪಾದಿಸಲು ಸ್ಫೋಟ
ಡ್ರೋನ್ ಪ್ರತಾಪ್ ಯೂಟ್ಯೂಬ್‌ನಲ್ಲಿ ಹಣ ಸಂಪಾದಿಸಲು ಎರಡು ಬಾರಿ ಸ್ಫೋಟ ನಡೆಸಿದ್ದಾರೆ. ಸ್ಫೋಟಕ್ಕೆ ಜಮೀನು ಮಾಲೀಕರ ಅನುಮತಿ ಇರಲಿಲ್ಲ ಮತ್ತು ಯಾವುದೇ ಅಧಿಕೃತ ಅನುಮತಿಯನ್ನು ಪಡೆಯದೆ ಸ್ಫೋಟ ನಡೆಸಲಾಗಿದೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ: ಪಾಕಿಸ್ತಾನದ ಡ್ರೋನ್‌ಅನ್ನು ಹೊಡೆದುರುಳಿಸಿದ ಗಡಿ ಭದ್ರತಾ ಪಡೆ