Wednesday, 9th October 2024

Drug Trafficking: ರಾಜ್ಯದಲ್ಲಿ ಡ್ರಗ್ಸ್‌ ಜಾಲದ ಬೇರು ಕತ್ತರಿಸಲು ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್

Drug Trafficking

ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್‌ ಜಾಲದ ಬೇರುಗಳನ್ನೇ ಕತ್ತರಿಸಲು ತೀರ್ಮಾನ ಮಾಡಲಾಗಿದ್ದು, ಇದಕ್ಕಾಗಿ ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತದೆ. ಡ್ರಗ್ಸ್‌ ದಂಧೆ ನಿಯಂತ್ರಣಕ್ಕೆ (Drug Trafficking) ಮೇಲಿಂದ ಮೇಲೆ ಸಭೆಗಳನ್ನು ನಡೆಸಿ, ಅಗತ್ಯ ಕಾರ್ಯತಂತ್ರ ರೂಪಿಸಲು ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಅವರು, ಟಾಸ್ಕ್‌ಫೋರ್ಸ್‌ನಲ್ಲಿ ಆರೋಗ್ಯ ಸಚಿವರು, ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಇರುತ್ತಾರೆ. ಠಾಣಾಧಿಕಾರಿಗಳಿಗೆ ಗೊತ್ತಿಲ್ಲದೆ ಡ್ರಗ್ಸ್‌ ದಂಧೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಠಾಣಾಧಿಕಾರಿ ಡಿವೈಎಸ್‌ಪಿ, ಎಸಿಪಿ ಮತ್ತು ಎಸ್‌ಪಿಗಳನ್ನು ಹೊಣೆ ಮಾಡಲು ತೀರ್ಮಾನಿಸಿದ್ದೇವೆ. ಅವರ ವಿರುದ್ಧವೇ ಕ್ರಮ ಖಚಿತ ಎಂದು ಎಚ್ಚರಿಕೆ ನೀಡಿದರು.

ಅಗತ್ಯಬಿದ್ದರೆ ಹೊಸ ಕಾನೂನು ಮಾಡಲಿದ್ದು, ಇರುವ ಕಾನೂನನ್ನು ಇನ್ನಷ್ಟು ಗಟ್ಟಿ ಮಾಡುತ್ತೇವೆ. ಪೆಡ್ಲರ್‌ಗಳಿಗೆ ಜೀವಾವಧಿ ಶಿಕ್ಷೆಯವರೆಗೂ ಕಠಿಣ ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಎನ್‌ಸಿಸಿ, ಎನ್‌ಜಿಒಗಳನ್ನು ಬಲಗೊಳಿಸುವುದನ್ನು ಗುರಿಯಾಗಿಸಿಕೊಂಡಿದ್ದೇವೆ. ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸಲು, ಸಮರ್ಪಕಗೊಳಿಸಲು ಹಾಗೂ ಡ್ರಗ್ ಹಾವಳಿ ತೊಡೆದು ಹಾಕಲು ಕ್ಷಿಪ್ರ ಮತ್ತು ತೀಕ್ಷ್ಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿಯನ್ನು ನಿಯಂತ್ರಿಸುವ ಕಾರ್ಯದ ಸಂಪೂರ್ಣ ಮೇಲುಸ್ತುವಾರಿಯನ್ನು ಟಾಸ್ಕ್‌ಫೋರ್ಸ್‌ ನಿರ್ವಹಿಸಲಿದೆ. ಶಾಲೆ, ಕಾಲೇಜುಗಳಲ್ಲಿ, ವಸತಿ ಶಾಲೆಗಳಲ್ಲಿ ಈ ಕುರಿತು ಹೆಚ್ಚಿನ ನಿಗಾ ವಹಿಸಲು ಸ್ಟೂಡೆಂಟ್ ಪೊಲೀಸಿಂಗ್ ವ್ಯವಸ್ಥೆ ಜಾರಿಗೆ ತರಲಾಗುವುದು. ಎನ್‌ಸಿಸಿ, ಎನ್‌ಎಸ್‌ಎಸ್‌ ಘಟಕಗಳನ್ನು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.

ಔಷಧಿ ಮಳಿಗೆಗಳಲ್ಲಿ ಅನಧಿಕೃತವಾಗಿ ಸಿಂಥೆಟಿಕ್ ಡ್ರಗ್ಸ್, ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದವರ ಪರವಾನಗಿಯನ್ನು ರದ್ದುಪಡಿಸಬೇಕು. ಔಷಧಿ ಮಳಿಗೆಗಳ ಮೇಲೆ ನಿರಂತರ ನಿಗಾ ಇರಿಸಿ, ಆಗಿಂದಾಗ್ಗೆ ಪರಿಶೀಲನೆ ನಡೆಸುವಂತೆ ಡ್ರಗ್ಸ್‌ ಕಂಟ್ರೋಲ್‌ ಇಲಾಖೆಗೆ ಸಿಎಂ ಸೂಚನೆ ನೀಡಿದರು.

ಇನ್ನು ಮಾದಕ ದ್ರವ್ಯ ಹಾವಳಿ ತಡೆಗೆ ಇರುವ ಜಿಲ್ಲಾ ಸಮಿತಿಗಳು ಹೆಚ್ಚು ಸಕ್ರಿಯವಾಗಿ, ಜಿಲ್ಲೆಗಳಲ್ಲಿ ಮಾದಕ ದ್ರವ್ಯ‌ ಚಟುವಟಿಕೆಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ವಿದ್ಯಾರ್ಥಿಗಳು, ಯುವ ಜನರು, ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರುವುದನ್ನು ತಡೆಯಲು ಕ್ರಮ ತೆಗೆದುಕೊಳ್ಳುತ್ತೇವೆ. ಡ್ರಗ್ ಸೇವಿಸಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳಿಗೆ ಬ್ರೇಕ್ ಹಾಕಲಾಗುತ್ತದೆ. ಪೊಲೀಸರಿಗೆ free hand ಕೊಡುವ ಜೊತೆಗೆ ಅವರನ್ನೇ ಹೊಣೆ ಮಾಡಿ ಕ್ರಮ ಕೂಡ ಜರುಗಿಸುತ್ತೇವೆ ಎಂದು ಹೇಳಿದರು.

ಗೃಹ ಇಲಾಖೆ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಗ್ರಾಮೀಣಾಭಿವೃದ್ಧಿ, ಸಮಾಜ‌ ಕಲ್ಯಾಣ ಇಲಾಖೆ ಸೇರಿ ಹಲವು ಇಲಾಖೆಗಳ ಸಚಿವರು, ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿ ಹಲವು ಕ್ಷಿಪ್ರ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ವಿದ್ಯಾರ್ಥಿ-ಯುವ ಜನರ, ಪೋಷಕರ ಸಹಭಾಗಿತ್ವದಲ್ಲಿ ಮಾಹಿತಿ ಸಂಗ್ರಹಿಸಿ ಡ್ರಗ್ ಹಾವಳಿಗೆ ಬ್ರೇಕ್ ಹಾಕುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದೇವೆ. ಈಗಾಗಲೇ ಇರುವ ರಾಜ್ಯ ಮಟ್ಟದ ಸಮಿತಿಯಿಂದ ಮಾಹಿತಿ, ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Rahul Gandhi: ಮೀಸಲಾತಿ ವಿರುದ್ಧದ ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ಪ್ರತಿಭಟನೆ

ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮತ್ತು ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರವಾಗಿ ನಡೆಸಲು ಸ್ಪಷ್ಟ ಸೂಚನೆ ನೀಡಲಾಗಿದೆ. ಬೆಂಗಳೂರು ಪೂರ್ವ ವಿಭಾಗದಲ್ಲಿ ಡ್ರಗ್ ಹಾವಳಿ ತೀವ್ರವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದಕ್ಕೆ ಬಲಿ‌ ಹಾಕಲು ನಿರ್ಣಯ ಮಾಡಿದ್ದೇವೆ. ಒಡಿಶಾ, ಆಂಧ್ರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಂದ ಮಾದಕ ವಸ್ತು ರಾಜ್ಯಕ್ಕೆ ಸರಬರಾಜು ಆಗುತ್ತಿದೆ. ಇದನ್ನು ತಡೆಯಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದು ಹೇಳಿದರು.