Thursday, 14th November 2024

Dry Day: ಮದ್ಯಪ್ರಿಯರೇ, ನ.20ರಂದು ಎಣ್ಣೆ ಸಿಗೋಲ್ಲ!

dry day

ಬೆಂಗಳೂರು: ರಾಜ್ಯದಲ್ಲಿ ನವೆಂಬರ್ 20ರಂದು ಮದ್ಯಪ್ರಿಯರಿಗೆ ಆಲ್ಕೋಹಾಲ್‌ (Alcohol) ಸಿಗದು. ಇಡೀ ರಾಜ್ಯಾದ್ಯಂತ ʼಎಣ್ಣೆʼ ಮಾರಾಟವನ್ನು ಮದ್ಯ ಮಾರಾಟಗಾರರೇ ಅಂದು ಸ್ಥಗಿತ (Dry Day) ಮಾಡಲು ತೀರ್ಮಾನಿಸಿದ್ದಾರೆ.

ರಾಜ್ಯದಲ್ಲಿ ಮದ್ಯ ಮಾರಾಟಗಾರರಿಂದ ಹಣ ವಸೂಲಿ ಹಾಗೂ ಅಬಕಾರಿ ಇಲಾಖೆಯಲ್ಲಿನ ಮಿತಿ ಮೀರಿದ ಭ್ರಷ್ಟಾಚಾರವನ್ನು ಸರಿಪಡಿಸಬೇಕೆಂದು ಆಗ್ರಹಿಸಿ ರಾಜ್ಯ ಮದ್ಯ ಮಾರಾಟಗಾರರರು ನ.20ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನವೆಂಬರ್ 20ರ ಬುಧವಾರ ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ ಮಾಡಲಾಗುತ್ತಿದೆ ಎಂದು ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಹೇಳಿದ್ದಾರೆ.

ಈ ಕುರಿತು ಗುರುವಾರ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 20ರಂದು ಸಮಸ್ಯೆಗಳಿಗೆ, ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ಸಿಎಂ, ಅಬಕಾರಿ ಸಚಿವರು, ಮತ್ತು ಪೊಲೀಸರ ಜೊತೆ ನಮ್ಮ ಸಭೆ ಆಗಬೇಕು. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರುತ್ತಿದೆ, ಇದನ್ನು ಸರಿಪಡಿಸಬೇಕೆಂಬುದು ನಮ್ಮ ಬೇಡಿಕೆ. ಅಕ್ಟೋಬರ್ 25 ರಂದು ನಡೆದ ಸಭೆಯಲ್ಲಿ ಲಂಚದ ಕಿರುಕುಳದ ವಿಚಾರ ಪ್ರಸ್ತಾಪ ಆಗಿತ್ತು. ಆ ಸಭೆಯಲ್ಲಿ ಲಂಚ ಸ್ವೀಕಾರದ ವಿಚಾರವನ್ನು ಬಹಿರಂಗ ಪಡಿಸಿದ್ದೇವೆ ಎಂದರು.

ಅಬಕಾರಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಅಬಕಾರಿ ಇಲಾಖೆಯ ಉಸ್ತುವಾರಿಯನ್ನು ಆರ್ಥಿಕ ಸಚಿವರೇ ವಹಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ನಾವು 500-900 ಕೋಟಿ ಲಂಚದ ಬಗ್ಗೆ ಎಂದೂ ಮಾತಾಡಿಲ್ಲ. ಈ ರೀತಿಯ ತಪ್ಪು ಮಾಹಿತಿಯನ್ನು ಪ್ರಧಾನಿ ಅವರಿಗೆ ಯಾರು ತಿಳಿಸಿದ್ದಾರೆ ಎಂದು ನಮಗೆ ಗೊತ್ತಿಲ್ಲ. ಸತೀಶ್ ಜಾರಕಿ ಹೊಳಿ ಹೊರತುಪಡಿಸಿ ಎಲ್ಲಾ ಹಿಂದಿನ ಸಚಿವರು ಲಂಚ, ವಸೂಲಿ ಮಾಡಿದ್ದಾರೆ ಎಂದು ರಾಜ್ಯ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಹೇಳಿದರು.

ಮದ್ಯ ಮಾರಾಟಗಾರರ ಬೇಡಿಕೆಗಳು

  • ಚಿಲ್ಲರೆ ಮದ್ಯ ಮಾರಾಟದ ಮೇಲೆ ಕನಿಷ್ಠ ಶೇ.20 ರಷ್ಟು ಲಾಭಾಂಶ ನೀಡಬೇಕು.
  • ಸಿ.ಎಲ್- 2 ಗಳಲ್ಲಿ ಮದ್ಯ ಸೇವಿಸಲು ಅವಕಾಶ ಕೊಡಬೇಕು.
  • ಸಿ.ಎಲ್- 9 ಗಳಲ್ಲಿ ಮಾತ್ರ ಹೆಚ್ಚುವರಿ ಕೌಂಟರ್ಗಳನ್ನು ಶುಲ್ಕ ವಿಧಿಸಿ ನೀಡಬೇಕು ಮತ್ತು ಮದ್ಯ – ಬಿಯರ್ ಪಾರ್ಸೆಲ್ ನೀಡಲು ಕಾನೂನು ತಿದ್ದುಪಡಿ ಮಾಡಬೇಕು.
  • 2005 ನಲ್ಲಿ ತಿದ್ದುಪಡಿ ಆಗಿರುವ ಅಬಕಾರಿ ಕಾಯ್ದೆ ಕಲಂ 29 ನ್ನು ಪುನರ್ ವಿಮರ್ಶಿಸಿ ತಿದ್ದುಪಡಿ ಮಾಡಬೇಕು.
  • ಸರ್ಕಾರಿ ಆದೇಶ ಸಂಖ್ಯೆ AE/36/EWP /2018 ಆಗಸ್ಟ್ 6 2020 ನ್ನು ರದ್ದುಗೊಳಿಸಬೇಕು
  • ಆದೇಶ ಸಂಖ್ಯೆ HD 16 PES- 2017 ಜುಲೈ 5 2018 ಇದನ್ನು ಮಾರ್ಪಾಡು ಮಾಡಿ ರೂಂಗಳನ್ನು ಹೆಚ್ಚಳ ಮಾಡಬೇಕು.
  • MSIL ಲೈಸೆನ್ಸ್ ಕುರಿತು ನ್ಯಾಯ ಸಮ್ಮತವಾದ ತೀರ್ಮಾನ ಕೈಗೊಳ್ಳಬೇಕು.
  • ಮಿಲಿಟರಿ ಕ್ಯಾಂಟೀನ್ ಸ್ಟೋರ್,Duty free ಹೆಸರಿನಲ್ಲಿ ಬರುವ ನಕಲಿ ಮದ್ಯ, ಗೋವಾದಿಂದ ಬರುವ ಮದ್ಯ ಮತ್ತು ನಕಲಿ ಮದ್ಯ ತಯಾರಕರ ಕಳ್ಳಭಟ್ಟಿ ಕೇಂದ್ರಗಳ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.
  • CL8 ,CL8A, CL8B ಲೈಸೆನ್ಸ್ ಷರತ್ತುಗಳ ಪಾಲನೆಗೆ ಕ್ರಮ ಕೈಗೊಳ್ಳಬೇಕು.
  • ಪೊಲೀಸ್ ಇಲಾಖೆಯ ಹಸ್ತಕ್ಷೇಪ ಮತ್ತು ಅನಗತ್ಯವಾಗಿ ಲೈಸೆನ್ಸ್ ಗಳನ್ನು ಬಂದ್ ಮಾಡುತ್ತಿರುವ ಕುರಿತು ಸರ್ಕಾರ ಮದ್ಯ ಪ್ರವೇಶಿಸಿ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು.
  • ಸನ್ನದುದಾರರಿಗೆ ವಿಧಿಸುವ ಸಾಮಾನ್ಯ ಮೊಕದ್ದಮೆಗಳಿಗೆ ರಾಜಿ‌ ಮೂಲಕ ವಿಧಿಸುವ ದಂಡನೆ ಕಡಿಮೆ ಮಾಡಿ ಲೈಸೆನ್ಸ್ ರಹಿತವಾಗಿ ಮದ್ಯ ಮಾರಾಟ ಮಾಡುವವರ ದಂಡನೆ ಹೆಚ್ಚಳ ಮಾಡಬೇಕು.
  • ಡಾಬಾ, ಮಾಂಸಹಾರ ಹೋಟೆಲ್, ಹಳ್ಳಿಗಳಲ್ಲಿ ಮದ್ಯ ಮಾರಾಟ ಮಾಡುವುದನ್ನ ನಿಯಂತ್ರಿಸಲು ಕಠಿಣ ಕ್ರಮ ಕಾನೂನು ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ: ಸರ್ಕಾರದ ಬೊಕ್ಕಸಕ್ಕೆ ಎಣ್ಣೆ ಕಿಕ್​