Sunday, 15th December 2024

ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ: ಅಭಿನಂದನೆ

ಇಂಡಿ : ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದ್ದು ಇಂಡಿ ಹಾಗೂ ಚಡಚಣ ಭಾಗದ ರೈತರ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನ ಕುರಿತು ಹಲವು ವರ್ಷಗಳಿಂದ ಈ ಭಾಗದ ಬೇಡಿಕೆ ಯಾಗಿರುವ ಜಿಲ್ಲೆಯ ಇಂಡಿ,ವಿಜಯಪುರ,ಚಡಚಣ ತಾಲೂಕುಗಳ ರೈತರಿಗೆ ಅನುಕೂಲ ವಾಗುವ ನೀರಾವರಿ ವಂಚಿತ ಪ್ರದೇಶಕ್ಕೆ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ನೀರನ್ನು ಎತ್ತಿ ನೀರಾವರಿಗೆ ಒಳಪಡುವ ಈ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು ಈ ಭಾಗದ ರೈತರಿಗೆ ಅನುಕೂಲವಾಗಲಿದೆ.

ಬೆಸಿಗೆಯಲ್ಲಿ ಕುಡಿಯುವ ನೀರಿನ ತೀವೃ ಸಮಸ್ಯೆ ಎದುರಿಸುತ್ತಿರು ಇಂಡಿ,ಚಡಚಣ ತಾಲೂಕುಗಳ ಜನ,ಜಾನುವಾರುಗಳಿಗೆ ತಾಲೂಕು ಆಡಳಿತದ ಮೂಲಕ ಟ್ಯಾಂಕರ ನೀರು ಒದಗಿಸಲಾಗಿದೆ. ಈ ಸಮಸ್ಯೆ ಹೊಗಲಾಡಿಸಲು ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಅನುಷ್ಠಾನಗೊಳಿಸಬೇಕು. ಬರಪೀಡಿತ ಪ್ರದೇಶ ಇಂಡಿ,ಚಡಚಣ ಭಾಗದ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಹಲವು ಬಾರಿ ಅಽವೇಶನದಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡುವುದರ ಮೂಲಕ ಗಮನ ಸೆಳೆದಿದ್ದೇನೆ.

ಅಲ್ಲದೆ ಖುದ್ದಾಗಿಯೂ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ಈ ಭಾಗದ ರೈತರು ನೀರಾವರಿ ಯಿಂದ ತೊಂದರೆ ಅನುಭವಿಸುತ್ತಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ.ಅಽವೇಶನದಲ್ಲಿ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಈ ಯೋಜನೆ ಅನುಷ್ಠಾನ ಶೀಘ್ರದಲ್ಲಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು.ಹೀಗಾಗಿ ಈ ಭಾಗದ ಜನತೆಯ ಬಹುದಿನಗಳ ಬೇಡಿಕೆಯನ್ನು ಇಡೆರಿಸಿದಕ್ಕಾಗಿ ರಾಜ್ಯ ಸರ್ಕಾರಕ್ಕೆ ಅಭಿನಂದಿಸುವುದಾಗಿ ಅವರು ತಿಳಿಸಿದರು.