Thursday, 31st October 2024

Waqf Board: ಮಾಜಿ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮಗನ ಆಸ್ತಿಯೂ ವಕ್ಫ್ ಪಾಲು!

shashikala jolle

ಚಿಕ್ಕೋಡಿ: ರಾಜ್ಯದ ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ (Waqf board)​ ಆಸ್ತಿ ಎಂದು ನಮೂದಿಸಲಾಗಿದ್ದು, ಸಾವಿರಾರು ಎಕರೆ ಭೂಮಿ ವಕ್ಫ್‌ ಪಾಲಾಗುತ್ತಿದೆ ಎಂದು ರೈತರು ಗಾಬರಿ ಬಿದ್ದಿದ್ದಾರೆ. ಇದರ ನಡುವೆಯೇ, ಮಾಜಿ ವಕ್ಫ್​​ ಸಚಿವೆ, ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ (Shashikala Jolle) ಅವರ ಪುತ್ರನ ಜಮೀನಿಗೂ ಕಂಟಕ ಎದುರಾಗಿದೆ. ಅವರ ಜಮೀನಿನ ಪಹಣಿಯಲ್ಲೂ ವಕ್ಫ್ ಆಸ್ತಿ (Waqf property) ಎಂದು ದಾಖಲಾಗಿದೆ.

ಮಾಜಿ ಹಜ್ ಮತ್ತು ವಕ್ಫ್ ಬೋರ್ಡ್ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬಕ್ಕೆ ವಕ್ಫ್ ಬೋರ್ಡ್ ಶಾಕ್ ನೀಡಿದೆ. ಜೊಲ್ಲೆ ದಂಪತಿಯ ಕಿರಿಯ ಪುತ್ರನಿಗೆ ಸೇರಿದ ಜಮೀನಿನ ಪಹಣಿ ಪತ್ರದಲ್ಲಿ “ವಕ್ಫ್ ಆಸ್ತಿ” ಎಂದು ನಮೂದಿಸಲಾಗಿದೆ. ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ದಂಪತಿಯ ಕಿರಿಯ ಪುತ್ರ ಬಸವಪ್ರಭು ಜೊಲ್ಲೆ ಅವರಿಗೆ ಸೇರಿದ‌ 2 ಎಕರೆ‌ 13 ಗುಂಟೆ ಜಮೀನಿನ‌ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ಹೆಸರು ಸೇರಿದೆ.

ಚಿಕ್ಕೋಡಿ ‌ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ಸರ್ವೆ ನಂಬರ್ 337ರಲ್ಲಿ ಬಸವಪ್ರಭು ಜೊಲ್ಲೆ ಅವರಿಗೆ ಸೇರಿದ 2 ಎಕರೆ 13 ಗುಂಟೆ ಜಮೀನು ಇದೆ. ಈ ಜಮೀನಿನಲ್ಲಿ ಜೊಲ್ಲೆ ಕುಟುಂಬ ತಲ-ತಲಾಂತರಗಳಿಂದ ಉಳುಮೆ‌ ಮಾಡುತ್ತಾ ಬಂದಿದೆ. ಆದರೆ, 2021ರಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ವಕ್ಫ್​ ಬೋರ್ಡ್​ ಸಚಿವರಾಗಿದ್ದ ಸಮಯದಲ್ಲೇ ಅವರ ಕಿರಿಯ ಪುತ್ರ ಬಸವಪ್ರಭು ಅವರಿಗೆ ಸೇರಿದ ಜಮೀನು ಪಹಣಿಯಲ್ಲಿ ವಕ್ಫ್​ ಆಸ್ತಿ ಅಂತ ನಮೂದಾಗಿದೆ. ವಕ್ಫ್ ಆಸ್ತಿ ಎಂದು ಉಲ್ಲೇಖಿತ ಪಹಣಿ ಪತ್ರ ನೋಡಿ ಬಸವಪ್ರಭು ಜೊಲ್ಲೆ ದಂಗಾಗಿದ್ದಾರೆ. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಈವರೆಗೆ ವಕ್ಫ್ ಬೋರ್ಡ್‌‌ನಿಂದ ಬಸವಪ್ರಭು ಅವರಿಗೆ ಯಾವುದೇ ನೋಟಿಸ್​ ಜಾರಿಯಾಗಿಲ್ಲ.

ಶಶಿಕಲಾ ಜೊಲ್ಲೆ ಅವರು ಸಚಿವೆಯಾಗಿದ್ದ ಸಮಯದಲ್ಲೇ ಪುತ್ರನ ಜಮೀನಿನ ಪಹಣಿಯಲ್ಲಿ ವಕ್ಫ್​ ಆಸ್ತಿ ಅಂತ ನಮೂದು ಆಗಿದೆ. ಇವರ ಅವಧಿಯಲ್ಲಿ ಅನೇಕ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್​ ಆಸ್ತಿ ಅಂತ ನಮೂದು ಮಾಡಲಾಗಿದೆ. ಶಾಸಕಿ ಶಶಿಕಲಾ ಜೊಲ್ಲೆ ಅವರು 2021 ರಿಂದ 2023ವರೆಗೂ ಬಿಜೆಪಿ ಸರ್ಕಾರದಲ್ಲಿ ಹಜ್​ ಮತ್ತು ವಕ್ಫ್​​ ಬೋರ್ಡ್​ ಸಚಿವರಾಗಿದ್ದರು. ಇವರ ಅವಧಿಯಲ್ಲಿ, ಅಂದರೆ 2021ರಲ್ಲಿ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಕವಲೂರು, ಹೂವಿನಾಳ ಕುಕನೂರು, ಯಲಬುರ್ಗಾ ತಾಲೂಕಿನ ಹಲವು ರೈತರ ಜಮೀನು ಪಹಣಿಯ ಕಾಲಂ 11ರಲ್ಲಿ ಯಾವುದೇ ನೋಟೀಸ್‌ ಸಹ ನೀಡದೆ ವಕ್ಫ್ ಬೋರ್ಡ್​ ಅಂತ ಹೆಸರು ನಮೂದಾಗಿದೆ. ಬಳಿಕ ವಕ್ಫ್​ ಬೋರ್ಡ್ 2023ರಲ್ಲಿ ಅನೇಕ ರೈತರಿಗೆ ನೋಟಿಸ್ ನೀಡಿದ್ದು, ತಮ್ಮ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ಹೇಳಿದೆ.

ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್​ ಬಿಡುಗಡೆ ಮಾಡಿದ್ದ ದಾಖಲೆಗಳ ಪ್ರಕಾರ, 2023ರಲ್ಲಿ ವಿಜಯಪುರ ಜಿಲ್ಲೆಯ ರೈತರಿಗೆ ವಕ್ಫ್​​ ಬೋರ್ಡ್​ ನೋಟಿಸ್​ ನೀಡಲಾಗಿತ್ತು. ವಿಜಯಪುರ ಜಿಲ್ಲೆಯ, ವಿಜಯಪುರ ತಾಲೂಕಿನ ಮೇಲ್ಭಾಗಾಯತ್ ಹಳ್ಳಿಯ ಅಶೋಕ್​, ಗೋವಿಂದ, ಬಿಡನಾಳ ಜಹಮನ್​ ಲಹೋರಿ, ಬಸವರಾಜ, ಉಮಾ, ದಯಾನಂದ್​ ರೋವತ್ತಪ್ಪ ಎಂಬವರಿಗೆ ಪ್ರತ್ಯೇಕವಾಗಿ ನೋಟಿಸ್​ ಜಾರಿ ಮಾಡಲಾಗಿತ್ತು.

ಕರ್ನಾಟಕ ಸರ್ಕಾರ ನೀಡಿರುವ ನಿರ್ದೇಶನ ಮೇರೆಗೆ ಕರ್ನಾಟಕ ವಕ್ಫ್​ ಬೋರ್ಡ್ 2022ರ ಅಕ್ಟೋಬರ್​ 17 ರಂದು ವಿಜಯಪುರದ ಜಿಲ್ಲೆಯ ರೈತರಿಗೆ ನೋಟಿಸ್​ ನೀಡಿದೆ. “ರೈತರು ತಮ್ಮ ಜಮೀನಿನ ದಾಖಲೆಗಳ ಸಮೇತ​ 2022ರ ಅಕ್ಟೋಬರ್​ 30 ರಂದು ಕರ್ನಾಟಕ ರಾಜ್ಯ ವಕ್ಫ್​ ಮಂಡಳಿ ಮುಂದೆ ಹಾಜರಾಗಬೇಕು. ಗೈರು ಹಾಜರಾದರೂ ವಿಚಾರಣೆ ಮುಂದುವರೆಯಲಿದೆ ಮತ್ತು ಆದೇಶ ಹೊರಡಿಸಲಾಗುತ್ತದೆ” ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ.