Saturday, 14th December 2024

ಫ.ಗು ಹಳಕಟ್ಟಿ ಕನ್ನಡ ಸಾಹಿತ್ಯದ ಅಮೂಲ್ಯ ರತ್ನ

ಆಳಂದ: ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಫ ಗು ಹಳಕಟ್ಟಿಯವರು ಕೇವಲ ಸಂಶೋಧಕ ಆಗಿರದೆ ಅವರೊಬ್ಬ ಕನ್ನಡ ಸಾಹಿತ್ಯದ ಅಮೂಲ್ಯ ರತ್ನರಾಗಿದ್ದರು ಎಂದು ಉಪನ್ಯಾಸಕ ಸಂಜಯ ಪಾಟೀಲ ಅಭಿಪ್ರಾಯಪಟ್ಟರು.

ಬುಧವಾರ ಆಳಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಫ.ಗು ಹಳಕಟ್ಟಿ ಯವರ ಬದುಕು ಬರಹದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂದು ವಚನಸಾಹಿತ್ಯದ ಹಸ್ತಪ್ರತಿಗಳಿಗಾಗಿ, ಓಲೆಗರಿ ಗ್ರಂಥಗಳಿಗಾಗಿ ಹುಡುಕಾಡದ ಊರುಗಳಿಲ್ಲ, ತಡಕಾಡದ ಕೇರಿಗಳಿಲ್ಲ, ಅನ್ವೇಷಣೆಗೈಯದ ಆಲಯಗಳಿಲ್ಲ, ಸಂಶೋಧನೆ ನಡೆಸದ ಸ್ಥಳಗಳಿಲ್ಲವೆನ್ನಬಹುದು. ಒಂದು ರೀತಿಯಲ್ಲಿ ಇದಕ್ಕಾಗಿ ದೇಶ ಸುತ್ತಿದವರಿವರು. ಜಗತ್ತನ್ನೇ ಅಲೆದವರಿವರು. ಹೀಗೆ ತಿರುತಿರುಗಿ ತಾವು ತಂದು ಸಂಗ್ರಹಿಸಿದ ಹಸ್ತ ಪ್ರತಿರೂಪದ ವಚನ ರಾಶಿ ಯನ್ನು 1920 ರಲ್ಲಿ ಬಿಜಾಪುರದಲ್ಲಿ ಪರೀಕ್ಷಿಸಿ ಇದರ ಮೌಲ್ಯವನ್ನು ಇಂಚಿAಚೂ ಬಿಡದಂತೆ ಎಲ್ಲರಿಗೂ ಇವರು ತಿಳಿಸಿದರು ಎಂದು ಹೇಳಿದರು.

ಆ ಕಾಲದಲ್ಲಿದು ಶರಣರ ನಾಡಿನಲ್ಲಿ ಭಾರಿ ಸಂಚಲನ ಉಂಟುಮಾಡಿತ್ತು. ಆ ನಂತರ ಹಸ್ತಪ್ರತಿ ರೂಪದಲ್ಲಿದ್ದ ಈ ವಚನ ಸಂಪತ್ತನ್ನು ಸಂಪಾದಿಸಿ ಮುದ್ರಿಸಿ ಪುಸ್ತಕ ರೂಪದಲ್ಲಿ ಹೊರತರಲು ಮುಂದಾದ ಇವರು ಇದಕ್ಕಾಗಿ 1925 ರಲ್ಲಿ ತಮ್ಮ ಸ್ವಂತಮನೆ ಮಾರಿ “ಹಿತಚಿಂತಕ ಮುದ್ರಣಾಲಯ”ವನ್ನು ಪ್ರಾರಂಭಿಸಿದರು. ಅಲ್ಲಿಂದ ವಚನ ಸಾಹಿತ್ಯ ಕೃತಿಗಳ ಸುರಿ ಮಳೆಯೇ ಶುರುವಾಯಿತು. ನಿಜಕ್ಕೂ ಆಗ ಹಳಕಟ್ಟಿಯವರಿಂದ ವಚನಕ್ರಾಂತಿಯೇ ನಡೆದಿತ್ತು ಎಂದು ನುಡಿದರು.

ಹಳಕಟ್ಟಿಯವರು ಸಂಪಾದಿಸಿ ಪ್ರಕಟಿಸಿದ ಒಂದೊಂದು ವಚನಸಂಕಲನದ ಕೃತಿಯೂ ಇಂದಿಗೂ ಸಾರಸ್ವತ ಲೋಕದ ಮಾಣಿಕ್ಯಗಳೇ ಆಗಿವೆ. ಹಳಕಟ್ಟಿಯವರು ತಾಳೆಯೋಲೆಗಳನ್ನು ಸಂಗ್ರಹಿಸುವುದಕ್ಕೆ ಮೊದಲು ಕವಿ ಚರಿತೆಕಾರರು ಗುರುತಿಸಿದ್ದು ಕೇವಲ 50 ವಚನಕಾರರನ್ನು ಮಾತ್ರ. ಫ. ಗು. ಹಳಕಟ್ಟಿಯವರು ತಮ್ಮ ಸಂಶೋಧನೆಯ ಮೂಲಕ 250ಕ್ಕೂ ಹೆಚ್ಚು ವಚನಕಾರರನ್ನು ಬೆಳಕಿಗೆ ತಂದರು. ಜೊತೆಗೆ ಹರಿಹರನ 42 ರಗಳೆಗಳನ್ನು ಸಂಶೋಧಿಸಿ ಪ್ರಕಟಿಸಿದ ಸಾಧನೆ ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಲೂಕು ಕಸಾಪ ಅಧ್ಯಕ್ಷ ಹಣಮಂತ ಶೇರಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯ ಮೇಲೆ ಡಾ. ರವಿ ಕಂಟೆಕುರೆ, ಪ್ರಭಾಕರ ಸಲಗರೆ, ಶಾಂತಪ್ಪ ಕೋರೆ ಉಪಸ್ಥಿತರಿದ್ದರು. ಉಪನ್ಯಾಸಕ ಡಾ.ರಾಜಕುಮಾರ ಹಿರೇಮಠ ನಿರೂಪಿಸಿ ವಂದಿಸಿದರು.