Sunday, 10th November 2024

ಖೋಟಾನೋಟು ಮುದ್ರಣ; ಬಂಧನ

ವೈ.ಎನ್.ಹೊಸಕೋಟೆ : ಖೋಟಾ ನೋಟು ದಂಧೆಯನ್ನು ನಡೆಸುತ್ತಿದ್ದ ಆರೋಪಿಗಳ ಖಚಿತ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಿದ ಘಟನೆ ಬುಧವಾರ ಗ್ರಾಮದಲ್ಲಿ ನಡೆದಿದೆ.

ಹೋಬಳಿ ಕೇಂದ್ರವು ಹಲವು ವಾಣಿಜ್ಯ ಉದ್ಯಮಗಳಿಂದ ಸದಾ ಚಟುವಟಿಕೆಯುಕ್ತವಾದ ಪ್ರದೇಶ. ಇದನ್ನೇ ಆಧಾರ  ಮಾಡಿ ಕೊಂಡ ಹಲವರು ಖೋಟಾನೋಟು ಮುದ್ರಣ ಮತ್ತು ಚಲಾವಣೆ ದಂಧೆಯನ್ನು ಹಲವಾರು ವರ್ಷಗಳಿಂದ ಸತತವಾಗಿ ರಾಜಾ ರೋಷವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಸಂಬಂಧ ಹಲವಾರು ಬಾರಿ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಆದಾಗ್ಯೂ ದಂದೆ ನಿಂತಿರಲಿಲ್ಲ. ವಿಶೇಷವಾಗಿ ನೋಟ್‌ಬ್ಯಾನ್ ಮುಂಚಿನ ಸಂದರ್ಭದಲ್ಲಿ ಇಲ್ಲಿ ಖೋಟಾನೋಟು ಚಲಾವಣೆ ಮಿತಿಮೀರಿ ನಡೆಯುತ್ತಿತ್ತು. ಒಂದೆರಡು ಬಾರಿ ಪೋಲೀಸ್ ಇಲಾಖೆ ಅನುಮಾನಾಸ್ಪದರ ತಪಾಸಣೆಯನ್ನು ನಡೆಸಿತ್ತು.

ಆದರೆ ಯಾವುದೇ ಸುಳಿವು ಬಿಟ್ಟುಕೊಟ್ಟಿರದ ದಂದೆಕೋರರು ದಿನನಿತ್ಯದ ಅಂಗಡಿ ವ್ಯವಹಾರ, ಸಂತೆ ಇತ್ಯಾದಿಗಳಲ್ಲಿ ಪ್ರತಿನಿತ್ಯ ಖೋಟಾ ನೋಟುಗಳನ್ನು ಹರಿದುಬಿಡುತ್ತಿದ್ದರು. ಒಂದೆರಡು ಬಾರಿ ಬ್ಯಾಂಕಿಗೆ ಬರುತ್ತಿದ್ದ ಖೋಟಾನೋಟುಗಳನ್ನು ಪ್ರಬಂಧ ಕರೇ ಹಿಡಿದು ಹರಿದು ಹಾಕಿರುವ ಉದಾರಣೆಗಳೂ ಉಂಟು. ಇದರಿಂದಾಗಿ ಅವಿದ್ಯಾವಂತರು ಮತ್ತು ಗ್ರಾಮೀಣ ಜನತೆ ಈ ದಂದೆಗೆ ಬಹುಬೇಗ ಬಲಿಯಾಗಿ ಹೆಚ್ಚಿನ ಹಣ ಕಳೆದುಕೊಂಡಿದ್ದಾರೆ.

ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಗ್ರಾಮದ ಕೆಲವರು ಕೇವಲ 5-10 ವರ್ಷಗಳಲ್ಲಿ ಲಕ್ಷಾಧಿಪತಿಗಳಾಗಿರುವ ಮತ್ತು ಕೆಲವರು ಗ್ರಾಮವನ್ನೇ ತೊರೆದು ನಗರ ಪ್ರದೇಶದಲ್ಲಿ ತಳವೂರಿರುವ ಉದಾಹರಣೆUಳು ಇವೆ. ಈ ದಂದೆಯಲ್ಲಿ ಗ್ರಾಮದ ಕೆಲವು ರಿಯಲ್ ಎಸ್ಟೇಟ್‌ದಾರರು, ಬೆಳ್ಳಿಬಂಗಾರ ವ್ಯಾಪಾರಸ್ಥರು, ರೇಷ್ಮೇಸೀರೆ ವ್ಯವಹಾರಸ್ಥರು, ಬಟ್ಟೆ ಹೂವಿನ ಸರಗಳ ವ್ಯಾಪಾರಸ್ಥರು ಮತ್ತು ಸಣ್ಣ ಕೈಗಾರೋದ್ಯಮಿಗಳು ಬಾಗಿಯಾಗಿರುವ ಅನುಮಾನ ದಟ್ಟವಾಗಿ ಕಾಣುತ್ತಿದೆ.

ಪೋಲೀಸ್ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿ ಗ್ರಾಮ ಸೇರಿದಂತೆ ಹಿಂದೂಪುರ, ಬೆಂಗಳೂರು, ಧರ್ಮವರಂ, ಸೋಮಂದೇಪಲ್ಲಿ, ಮುದ್ದರೆಡ್ಡಿಹಳ್ಳಿ, ತುಮಕೂರು, ಶಿವಮೊಗ್ಗ, ತಿಪಟೂರು, ಶಿರಾ ಇತ್ಯಾದಿ ಕಡೆಗೆ ದಂದೆಕೋರರು ವ್ಯವಹಾರ ನಡೆಸುತ್ತಿದ್ದಾರೆ ಎಂಬ ಗುಸುಗುಸು ಸದಾ ಕೇಳುಬರುತ್ತಿತ್ತು.

ಗ್ರಾಮದಲ್ಲಿ ನಕಲಿ ನೋಟಿನ ಹಾವಳಿ ಹೆಚ್ಚಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದಾಗ ಎಚ್ಚೆತ್ತುಕೊಳ್ಳುತ್ತಿದ್ದ ದಂದೆಕೋರರು ಮತ್ತೆ ಒಂದೆರಡು ತಿಂಗಳಿನಲ್ಲಿ ದಂದಗೆ ಚಾಲನೆ ನೀಡುತ್ತಿದ್ದರು. ಈ ರೀತಿ ಬೇರೂರಿದ್ದ ನಕಲಿ ನೋಟಿನ ಹಾವಳಿಯ ಮೂಲ ವನ್ನು ಹುಡುಕುವಲ್ಲಿ ಮಾಧ್ಯಮದವರು ನೀಡಿದ ಮಾಹಿತಿಯ ಮೇರೆಗೆ ಗ್ರಾಮದಲ್ಲಿ ಪೋಲೀಸ್ ಇಲಾಖೆ ದಾಳಿ ನಡೆಸಿ ದಂದೆಕೋರರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಮಂಗಳವಾರ ಸಂಜೆ ನೋಟುಗಳ ಬದಲಾಣೆಗಾಗಿ ಗ್ರಾಮದ ಹೊರವಲಯದಲ್ಲಿ ದಂದೆಕೋರ ಶಿವಕುಮಾರ್ (32) ಕಾಯುತ್ತಿದ್ದ ವೇಳೆ ಪೋಲೀಸರು ಬಂದಿಸಿದ್ದಾರೆ. ಕೈಮಗ್ಗ ನೇಕಾರಿಕೆಯ ಮನೆಯಲ್ಲಿ ನೋಟುಗಳ ಮುದ್ರಣ ಮಾಡಲಾಗುತ್ತಿದ್ದ ವಿಚಾರ ತಿಳಿದು ಶೋಧನೆ ನಡೆಸಿದಾಗ ಮುದ್ರಣ ಯಂತ್ರ, ಕಾಗದ ಮತ್ತು ಒಂದು ಲಕ್ಷ ಮೌಲ್ಯಕ್ಕೂ ಹೆಚ್ಚಿನ ಬೆಲೆಯ ನಕಲಿ ನೋಟು ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ದಂಧೆಯಲ್ಲಿ ಭಾಗಿಯಾಗಿರುವ ಶ್ರೀನಿವಾಸ (52) ನನ್ನು ಬಂಧಿಸಲಾಗಿದೆ. ಈತನು ಆಂದ್ರಪ್ರದೇಶ ಇನ್ನಿತರೆ ಭಾಗಗಳಲ್ಲಿ ಇದೇ ದಂಧೆಗೆ ಸಂಬಂಧಿಸಿದಂತೆ ಆರೋಪಿಯಾಗಿದ್ದು, ಕೆಲ ದಿನಗಳ ಹಿಂದೆಯಷ್ಟೇ ಗ್ರಾಮಕ್ಕೆ ಬಂದು ನೆಲೆಸಿದ್ದನು. ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು, ಡಿಎಸ್‌ಪಿ, ಸಿಪಿಐ ಮತ್ತು ಸ್ಥಳೀಯ ಪಿಎಸ್‌ಐ ಬೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣವು ಗಂಭೀರವಾಗಿದ್ದು, ಈ ದಂಧೆಯ ಹಿಂದಿರುವ ಕುಳಗಳಿಗಾಗಿ ಶೋಧನೆ ನಡೆಸುತ್ತಿದ್ದು ಶ್ರೀಘ್ರದಲ್ಲಿ ಪತ್ತೆಹಚ್ಚಲಾಗುವುದು ಎಂದು ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೇಳಿಕೆ

ಗ್ರಾಮದಲ್ಲಿ ಖೋಟಾನೋಟು ಮುದ್ರಣ ವಿಷಯ ತಿಳಿದು ಆಶ್ಚರ್ಯವಾಯಿತು. ಗ್ರಾಮದಲ್ಲಿ ಅಲ್ಲಲ್ಲಿ ಹಾಗಾಗ ಖೋಟಾನೋಟು ಚಲಾವಣೆ ಕೇಳಿಬರುತ್ತಿತ್ತು. ಅದು ನಿಜವೆಂದಾಗಿದೆ. ಪೋಲೀಸರು ಈ ಬಗ್ಗೆ ಹೆಚ್ಚಿನ ಶ್ರಮವಹಿಸಿ ಇದನ್ನು ಬುಡಸಮೇತ ಕಿತ್ತು ಹಾಕಬೇಕಾಗಿದೆ.
– ಹೆಸರು ಹೇಳಲು ಇಚ್ಚಿಸದ ಯುವಕ, ವೈ.ಎನ್.ಹೊಸಕೋಟೆ