Friday, 20th September 2024

Fake Marks Card: ಎಸ್‌ಡಿಎ ನೇಮಕಾತಿ ಅಕ್ರಮ; ನಕಲಿ ಅಂಕಪಟ್ಟಿ ಸಲ್ಲಿಸಿದ್ದ ಅಭ್ಯರ್ಥಿಗಳಿಗೆ ಸಿಸಿಬಿ ನೋಟಿಸ್‌

Fake Marks Card

ಬೆಂಗಳೂರು: ಜಲ ಸಂಪನ್ಮೂಲ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ ಲಾಗ್ ಹುದ್ದೆಗಳ ನೇಮಕಾತಿಯಲ್ಲಿ (SDA recruitment Scam) ಭಾರಿ ಗೋಲ್ಮಾಲ್ ನಡೆದಿರುವ ಆರೋಪ ಕೇಳಿಬಂದಿದೆ. 62 ಅಭ್ಯರ್ಥಿಗಳು ನಕಲಿ ಅಂಕಪಟ್ಟಿ (Fake Marks Card) ನೀಡಿ ಆಯ್ಕೆಯಾಗಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಸಿಸಿಬಿಯಿಂದ ಅಭ್ಯರ್ಥಿಗಳಿಗೆ ನೋಟಿಸ್‌ ನೀಡಲಾಗಿದೆ.

2022ರ ಅಕ್ಟೋಬರ್‌ನಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಸಿ ವೃಂದದ 182 ದ್ವಿತೀಯ ದರ್ಜೆ ಸಹಾಯಕ ಬ್ಯಾಕ್ ಲಾಗ್ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ, ಪಿಯುಸಿಯಲ್ಲಿ ಫೇಲ್ ಆದ ಅಭ್ಯರ್ಥಿಗಳು ನಕಲಿ ಅಂಕಪಟ್ಟಿ ಸಲ್ಲಿಸಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಜೂನ್ 27ರಂದು ಹೊಸದಾಗಿ 182 ಅಭ್ಯರ್ಥಿಗಳ ತಾತ್ಕಾಲಿಕ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿತ್ತು. ಆಯ್ಕೆಯಾದ 182 ಅಭ್ಯರ್ಥಿಗಳ ಪೈಕಿ 62 ಅಭ್ಯರ್ಥಿಗಳು ನಕಲಿ ಅಂಕಪಟ್ಟಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಅವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಶೇಷಾದ್ರಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಅಂಕಪಟ್ಟಿ ನೀಡಿದ ಕಾರಣಕ್ಕೆ ಶಹಾಪುರ ತಾಲೂಕಿನ ಹಾರಣಗೇರಾ ಗ್ರಾಮದ ರವಿಕುಮಾರ್ ಎಂಬುವವರಿಗೆ ಸಿಸಿಬಿ ನೋಟಿಸ್ ನೀಡಿದೆ.

ಜಲಸಂಪನ್ಮೂಲ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಟಿ.ಶಿವಕುಮಾರ್‌ ಅವರು ದೂರನ್ನು ಸಲ್ಲಿಸಿದ್ದು, ದೂರಿನಲ್ಲಿ 2022ನೇ ಸಾಲಿನಲ್ಲಿ ಇಲಾಖೆಯಲ್ಲಿ ಕರೆಯಲಾದಂತಹ ಸಿ ಗ್ರೂಪ್ ಹುದ್ದೆಗಳಿಗೆ ಕರ್ನಾಟಕ ವಿವಿಧ ಜಿಲ್ಲೆಗಳ ಒಟ್ಟು 62 ಜನ ಅಭ್ಯರ್ಥಿಗಳು ನಕಲಿ ಅಂಕಪಟ್ಟಿಗಳನ್ನು ಸಲ್ಲಿಸಿದ್ದು, ಈ ಬಗ್ಗೆ ಸಂಬಂಧಪಟ್ಟಂತಹ ಬೋರ್ಡ್‌ಗಳಿಂದ ಅಂಕಪಟ್ಟಿಗಳನ್ನು ಪರಿಶೀಲನೆಗೊಳಪಡಿಸಲಾಗಿದೆ. ಈ ಅಂಕಪಟ್ಟಿಗಳು ನೈಜತೆಯಿಂದ ಕೂಡಿರುವುದಿಲ್ಲವೆಂದು ವರದಿಯನ್ನು ನೀಡಿವೆ. ಆದ್ದರಿಂದ ಒಟ್ಟು 62 ನಕಲಿ ಅಭ್ಯರ್ಥಿಗಳ ವಿರುದ್ಧ ಕ್ರಮ ಜರುಗಿಸುವಂತೆ ದೂರನ್ನು ನೀಡಲಾಗಿದೆ. ಹೀಗಾಗಿ ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆಯ ಸಲುವಾಗಿ ಬೆಂಗಳೂರು ನಗರ ಸಿಸಿಬಿ ಕಚೇರಿಗೆ ಪ್ರಕರಣದ ಕಡತವು ವರ್ಗಾವಣೆಯಾಗಿದೆ.

ಒಟ್ಟು 62 ಜನ ನಕಲಿ ಅಭ್ಯರ್ಥಿಗಳ ಪೈಕಿ ಒಟ್ಟು 6 ಅಭ್ಯರ್ಥಿಗಳು ನೈಜವಾಗಿ ವ್ಯಾಸಂಗ ಮಾಡಿರುವಂತಹ ಅಭ್ಯರ್ಥಿಗಳ ದ್ವಿತೀಯ ಪಿಯುಸಿ. ಅಂಕಪಟ್ಟಿಗಳನ್ನು ತಿದ್ದುಪಡಿ ಮಾಡಿ ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿದ್ದಾರೆ. ಹೀಗಾಗಿ ನೀವು ನಿಮ್ಮ ದ್ವಿತೀಯ ಪಿಯುಸಿ ಅಂಕಪಟ್ಟಿಯೊಂದಿಗೆ ವಿಚಾರಣೆಗೆ ಹಾಜರಾಗಬೇಕು ಎಂದು ಅಭ್ಯರ್ಥಿಗಳಿಗೆ ನೋಟಿಸ್‌ ನೀಡಲಾಗುತ್ತಿದೆ.

ಈ ಸುದ್ದಿಯನ್ನೂ ಓದಿ | Job News: Railway Recruitment 2024: ರೈಲ್ವೆಯಲ್ಲಿ 11558 ಹುದ್ದೆಗಳಿಗೆ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ

ಪ್ರಕರಣದಲ್ಲಿ ಈಗಾಗಲೇ ಮೂವರು ಸರ್ಕಾರಿ ನೌಕರರು, 37 ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳು ಸೇರಿ 48 ಮಂದಿಯನ್ನು ಸಿಸಿಬಿ ಬಂಧಿಸಿದೆ. ಬಂಧಿತರಿಂದ 40 ಲಕ್ಷ ರೂ. ಮೌಲ್ಯದ 2 ಕಾರು, 17 ಮೊಬೈ.ಲ್ ಮತ್ತು ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿದೆ. ಅಕ್ರಮದಲ್ಲಿ ಶಾಮೀಲಾಗಿದ್ದ 11 ಮಂದಿ ಮಧ್ಯವರ್ತಿಗಳು ಹಾಗೂ 37 ಅಭ್ಯರ್ಥಿಗಳನ್ನು ಬಂಧಿಸಿದೆ. ಅವ್ಯವಹಾರದಲ್ಲಿ ಶಾಮೀಲಾಗಿರುವ 14 ಮಂದಿ ಅಭ್ಯರ್ಥಿಗಳು ಹಾಗೂ ದಂಧೆಯ ಕಿಂಗ್‌ಪಿನ್‌ಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ.