Saturday, 28th September 2024

Nirmala Sitharaman: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಮೇಲೆ ಬೆಂಗಳೂರಿನಲ್ಲಿ ಎಫ್‌ಐಆರ್‌

NIRMALA SITHARAMAN

ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Union Minister Nirmala Sitharaman)​​ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲಾಗುತ್ತಿದೆ. ಚುನಾವಣಾ ಬಾಂಡ್‌ಗಳ (Electoral Bonds) ಮೂಲಕ‌ ಹಣ ಸುಲಿಗೆ ಆರೋಪಿಸಿ ಕೋರ್ಟ್‌ಗೆ ಆರ್ಜಿ ಸಲ್ಲಿಸಲಾಗಿದ್ದು, FIR ದಾಖಲಿಸಲು ಜನಪ್ರತಿನಿಧಿಗಳ ಕೋರ್ಟ್ ಸಮ್ಮತಿ ನೀಡಿದೆ.

ಆದರ್ಶ್ ಅಯ್ಯರ್ ಎಂಬವರು ದೂರು ದಾಖಲಿಸಲು ಅನುಮತಿ ಕೋರಿ ಕೋರ್ಟ್​ನಲ್ಲಿ ಪಿಸಿಆರ್ ದಾಖಲಿಸಿದ್ದರು. ವಾದ ಪ್ರತಿವಾದ ಆಲಿಸಿದ ಬಳಿಕ ಕೇಸ್ ದಾಖಲಿಸಲು ಕೋರ್ಟ್ (Bengaluru Court) ಸೂಚನೆ ನೀಡಿದೆ. ಮುಂದಿನ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್​ 10ಕ್ಕೆ ಮುಂದೂಡಿದೆ.

ಐಪಿಸಿ ಸೆಕ್ಷನ್‌ 156(3), 383, 120(ಬಿ) ಅಡಿ ಎಫ್​​ಐಆರ್ ದಾಖಲು ಮಾಡಲು ಬೆಂಗಳೂರಿನ ತಿಲಕ್‌ನಗರ ಪೊಲೀಸರಿಗೆ ನ್ಯಾಯಾಲಯ ಆದೇಶ ನೀಡಿದೆ. ಆದರ್ಶ್ ಅಯ್ಯರ್ ಅವರು ಜನಾಧಿಕಾರ ಸಂಘರ್ಷ ಪರಿಷತ್ (ಜೆಎಸ್‌ಪಿ)ನ ಸಹ ಅಧ್ಯಕ್ಷರಾಗಿದ್ದು, ಎಲೆಕ್ಟೋರಲ್ ಬಾಂಡ್ ಮೂಲಕ ಬೆದರಿಸಿ ಸುಲಿಗೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.

ಕಳೆದ ಏಪ್ರಿಲ್​​ನಲ್ಲಿ ಆದರ್ಶ್ ಅವರು ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಕೇಂದ್ರ ಸಚಿವೆ ವಿರುದ್ಧ ಮಾತ್ರವಲ್ಲದೇ ಇ.ಡಿ ಅಧಿಕಾರಿಗಳು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ನಾಯಕರ ಹೆಸರು ಉಲ್ಲೇಖ ಮಾಡಿದ್ದರು.

ನಿರ್ಮಲಾ ಸೀತಾರಾಮನ್‌ ವಿರುದ್ಧ FIRಗೆ ಆದೇಶ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ದವೂ ಎಫ್​​ಐಆರ್​ ಆಗಿದೆ. ಅವರು ರಾಜೀನಾಮೆ ಕೊಡ್ತಾರಾ? ಮೊದಲು ನಿರ್ಮಲಾ ಸೀತಾರಾಮನ್​, ಕುಮಾರಸ್ವಾಮಿ ರಾಜೀನಾಮೆ ಕೊಡಲಿ. ಆಮೇಲೆ ನಾನು ರಾಜೀನಾಮೆ ಕೊಡೋದರ ಬಗ್ಗೆ ಯೋಚಿಸ್ತೇನೆ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: Munirathna: ಮುನಿರತ್ನ ಮೇಲಿನ ಆರೋಪ ನಿಜವಾಗಿದ್ದರೆ ಕ್ಷಮಿಸಲ್ಲ: ನಿರ್ಮಲಾನಂದನಾಥ ಶ್ರೀ