ಭಟ್ಕಳ: ಭಟ್ಕಳದ ಪ್ರಧಾನ ಮತ್ತು ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಸಂಕೀರ್ಣದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದ್ದು, ಮೇಲ್ಛಾವಣಿ, ಒಳಾಂಗಣದಲ್ಲಿದ್ದ ಪೀಠೋಪಕರಣಗಳು ಹಾಗೂ ಬೀರುಗಳಲ್ಲಿದ್ದ ಒಂದಿಷ್ಟು ಕಡತಗಳು ಸುಟ್ಟು ಹೋಗಿ ಕರಕಲಾಗಿವೆ.
ಫಜ್ರ್ ನಮಾಝ್ ಹಿನ್ನೆಲೆಯಲ್ಲಿ ಬೆಳಿಗ್ಗೆ ದಾರಿಯಾಗಿ ತೆರಳುತ್ತಿದ್ದ ಸ್ಥಳೀಯ ಮಸೀದಿಯ ಇಮಾಮ್ ಒಬ್ಬರು ನ್ಯಾಯಾಲಯದ ಮೇಲ್ಛಾವಣಿಯಿಂದ ಬೆಂಕಿಯ ಜ್ವಾಲೆಗಳು ಏಳುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಯನ್ನು ನಂದಿಸಿದ್ದಾರೆ. ಆದರೆ ಬೆಂಕಿಯು ಅಷ್ಟರಲ್ಲಿ ನ್ಯಾಯಾಲಯದ ಮರದ ಮೇಲ್ಛಾವಣಿಗೆ ಹಾನಿ ಮಾಡಿದ್ದಲ್ಲದೆ, ಕಟ್ಟಡದೊಳಗೂ ವ್ಯಾಪಿಸಿತ್ತು. ಕೋಣೆಗಳಲ್ಲಿದ್ದ ಟೇಬಲ್‌ಗಳು, ಬೀರುಗಳು, ಕುರ್ಚಿಗಳು ಇತ್ಯಾದಿಗಳು ಬೆಂಕಿಗಾಹುತಿಯಾಗಿವೆ.
ಭಟ್ಕಳದಲ್ಲಿ ರಾತ್ರಿಯಿಡೀ ಮಳೆ ಸುರಿಯುತ್ತಿದ್ದರೂ ಈ ಬೆಂಕಿ ಕಾಣಿಸಿಕೊಂಡಿದೆ. ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ್ ಶಿವಪುಜೆ, ಭಟ್ಕಳ ಸಹಾಯಕ ಆಯುಕ್ತ ಮಮತಾ ದೇವಿ ಮತ್ತು ತಹಶೀಲ್ದಾರ್ ರವಿಚಂದ್ರ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲಿಸಿದ್ದಾರೆ.