ಬೆಂಗಳೂರು: ದೇಶದಲ್ಲಿ ಓಡಾಡಲಿರುವ ಮೊದಲ ಬುಲೆಟ್ ಟ್ರೈನ್ (Bullet Train) ಬೆಂಗಳೂರಿನಲ್ಲೇ (Bangalore news) ತಯಾರಾಗಲಿದೆ ಎಂದು ತಿಳಿದುಬಂದಿದೆ. ಎಂಟು ಬೋಗಿಗಳ ಎರಡು ರೈಲುಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಇಎಂಎಲ್ (BEML) ಮಾತ್ರ ಬಿಡ್ ಸಲ್ಲಿಸಿದೆ.
ಹೀಗಾಗಿ ಬುಲೆಟ್ ಟ್ರೇನ್ ತಯಾರಿಕೆಯಲ್ಲಿ ಬೆಂಗಳೂರು ಪ್ರಮುಖ ಪಾತ್ರ ವಹಿಸಲಿದೆ. ಬೆಂಗಳೂರು, ಮೈಸೂರು ಮತ್ತು ಕೆಜಿಎಫ್ನಲ್ಲಿ ಘಟಕಗಳನ್ನು ಹೊಂದಿರುವ ಬಿಇಎಂಎಲ್‌ನ ಪರಿಪೂರ್ಣ ಘಟಕ ಬೆಂಗಳೂರು, ಬುಲೆಟ್ ಟ್ರೇನ್ ತಯಾರಿಕೆಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ಹೊಂದಿದೆ.
ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಎರಡು ಹೈಸ್ಪೀಡ್ ಚೇರ್-ಕಾರ್ ರೈಲುಗಳನ್ನು ತಯಾರಿಸಲು 2024ರ ಸೆ.5 ರಂದು ಈ ಸಂಬಂಧ ಟೆಂಡರ್ ಆಹ್ವಾನಿಸಿತ್ತು. ಸೆ.19 ರಂದು ಬಿಡ್ ಸಲ್ಲಿಕೆ ಗಡುವು ಅಂತಿಮವಾಗಿದ್ದು, ಬಿಇಎಂಎಲ್ ಮಾತ್ರ ಬಿಡ್ ಸಲ್ಲಿಸಿದೆ. ಒಂದು ವಾರದೊಳಗೆ ಟೆಂಡರ್ ಅಂತಿಮಗೊಳಿಸಲಾಗುವುದು ಎಂದು ಚೆನ್ನೈನ ಐಸಿಎಫ್ ಜನರಲ್ ಮ್ಯಾನೇಜರ್ ಯು.ಸುಬ್ಬಾರಾವ್ ತಿಳಿಸಿದ್ದಾರೆ.
ಮುಂಬೈ-ಅಹಮದಾಬಾದ್ ರೈಲು ಕಾರಿಡಾರ್‌ನಲ್ಲಿ 289 ಕಿಮೀ ವೇಗದ ಪ್ರಥಮ ಮೇಕ್ ಇನ್ ಇಂಡಿಯಾ (Make in India) ಬುಲೆಟ್ ರೈಲು ಓಡಲಿದೆ. ಮೊದಲ ರೈಲನ್ನು ಡಿಸೆಂಬರ್ 2026ರ ವೇಳೆಗೆ ಪರಿಚಯಿಸಲು ಯೋಜಿಸಲಾಗಿದೆ. ಸೂರತ್-ಬಿಲಿಮೊರಾ ವಿಭಾಗದಲ್ಲಿ ಇದರ ಪರೀಕ್ಷೆ ನಡೆಸಲು ಯೋಜಿಸಲಾಗಿದೆ.
ಕೇವಲ ಎರಡು ಕೋಚ್ ನಿರ್ಮಾಣದ ಗುತ್ತಿಗೆ ಇದಾಗಿರುವುದರಿಂದ ಇತರೆ ತಯಾರಕರು ಹೆಚ್ಚು ಆಸಕ್ತಿ ತೋರಿಸಿಲ್ಲ. ಎರಡೂವರೆ ವರ್ಷದಲ್ಲಿ ರೈಲುಗಳ ನಿರ್ಮಾಣ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಪ್ರತಿ ರೈಲು 3 ಮತ್ತು 2 ಆಸನ ವ್ಯವಸ್ಥೆಯೊಂದಿಗೆ ಏಳು ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಬೋಗಿಗಳು, 2 ಮತ್ತು 2 ಆಸನಗಳೊಂದಿಗೆ ಒಂದು ಕಾರ್ಯನಿರ್ವಾಹಕ ಬೋಗಿಯನ್ನು ಒಳಗೊಂಡಿರುತ್ತದೆ. ಒಟ್ಟು 174 ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ. ಭವಿಷ್ಯದ ಬೇಡಿಕೆಯನ್ನು ಆಧರಿಸಿ, 12 ಅಥವಾ 16 ಹೆಚ್ಚುವರಿ ಬೋಗಿಗಳನ್ನು ಇದಕ್ಕೆ ಸೇರಿಸಬಹುದು ಎಂದು ರಾವ್ ವಿವರಿಸಿದರು.
ಇನ್ನು ಈ ರೈಲುಗಳನ್ನು ಸ್ಟ್ಯಾಂಡರ್ಡ್ ಗೇಜ್ ಟ್ರ್ಯಾಕ್‌ಗಳಿಗಾಗಿ ನಿರ್ಮಿಸಲಾಗುತ್ತದೆ. ಆಗ್ನೇಯ ಏಷ್ಯಾ ಮತ್ತು ಆಫ್ರಿಕಾದ ಮಾರುಕಟ್ಟೆ ಸಂಭಾವ್ಯ ರಫ್ತಿನ ಮೇಲೆ ಗಮನ ಕೇಂದ್ರೀಕರಿಸಿ ಗುಣಮಟ್ಟದ ರೈಲುಗಳನ್ನು ನಿರ್ಮಿಸಲಾಗುವುದು. ಪ್ರತಿ ರೈಲಿಗೆ ಅಂದಾಜು 200ರಿಂದ 250 ಕೋಟಿ ರೂ. ವೆಚ್ಚವಾಗಬಹುದು. ಮೊದಲ ರೈಲು ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲ್ (ಎಂಎಎಚ್ಎಸ್ಆರ್) ಕಾರಿಡಾರ್‌ನಲ್ಲಿ ಚಲಿಸಲಿದ್ದು, ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್ಎಸ್ಎಚ್ಆರ್ಸಿಎಲ್) ಅಭಿವೃದ್ಧಿಪಡಿಸುತ್ತಿದೆ ಎಂದು ರಾವ್ ಹೇಳಿದರು.
ಬಿಇಎಂಎಲ್ ಬೆಂಗಳೂರು ಘಟಕ ಅಂತಿಮ ಜೋಡಣೆ ಮತ್ತು ರೋಲ್‌ಔಟ್ ಅನ್ನು ನಿರ್ವಹಿಸುತ್ತದೆ. ಯಶಸ್ವಿ ಪ್ರಯೋಗಗಳ ನಂತರ, ದೆಹಲಿ-ವಾರಣಾಸಿ, ಮುಂಬೈ-ಹೈದರಾಬಾದ್, ಮತ್ತು ಬೆಂಗಳೂರು-ಚೆನ್ನೈ ಮಾರ್ಗಗಳಿಗೆ ಹೈಸ್ಪೀಡ್(ಬುಲೆಟ್) ರೈಲುಗಳ ನಿರ್ಮಾಣಕ್ಕೆ ಬಿಇಎಂಎಲ್ ಬೆಂಗಳೂರು ಘಟಕಕ್ಕೆ ಅವಕಾಶ ಒಲಿದು ಬರುವ ನಿರೀಕ್ಷೆ ಹೆಚ್ಚಿದೆ. ಈ ರೈಲುಗಳು ಗಂಟೆಗೆ 280 ಕಿಮೀ ವೇಗ ಹೊಂದಿರಲಿವೆ.
ಇದನ್ನೂ ಓದಿ: ಮೈಸೂರು ಚೆನ್ನೈ ಬುಲೆಟ್ ಟ್ರೈನ್ ಹಳಿ ನಿರ್ಮಾಣ ಕಾರ್ಯಕ್ಕೆ ಶೀರ್ಘದಲ್ಲೇ ಸರ್ವೆ