Saturday, 14th December 2024

FlixBus service: ಬೆಂಗಳೂರಿಗೆ ಕಾಲಿಟ್ಟ ಜರ್ಮನಿಯ ಫ್ಲಿಕ್ಸ್‌ಬಸ್‌, ₹99 ಟಿಕೆಟ್‌ ಬೆಲೆಯಲ್ಲಿ ಪ್ರಯಾಣಿಸಿ!

flixbus service

ಬೆಂಗಳೂರು: ಜರ್ಮನಿ ಮೂಲದ FlixBus ಬಸ್‌ ಸೇವಾ ಸಂಸ್ಥೆ ಬೆಂಗಳೂರನ್ನು ಪ್ರವೇಶಿಸಿದೆ. ದಕ್ಷಿಣ ಭಾರತದಲ್ಲಿ ₹99 ಆಫರ್ ಬೆಲೆಯೊಂದಿಗೆ ಸೇವೆಗಳನ್ನು (Flixbus Service) ಸದ್ಯದಲ್ಲೇ ಪ್ರಾರಂಭಿಸಲಿದೆ. ಜರ್ಮನಿ ಮೂಲದ ಸಾರಿಗೆ ಸಂಸ್ಥೆಯಾದ ಫ್ಲಿಕ್ಸ್ ಬಸ್ ಇಂಡಿಯಾ, ದಕ್ಷಿಣ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಘೋಷಿಸಿದೆ. ಬೆಂಗಳೂರಿನಿಂದ ಸೇವೆಗಳು ಲಭ್ಯವಿದ್ದು, ಈ ಬಸ್ಸುಗಳು ಬೆಂಗಳೂರಿನಿಂದ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಪ್ರಮುಖ ಪಟ್ಟಣಗಳ ನಡುವೆ ಕಾರ್ಯನಿರ್ವಹಿಸುತ್ತವೆ.

ಫ್ಲಿಕ್ಸ್‌ಬಸ್ ಈಗ ಆರಂಭದಲ್ಲಿ ಬೆಂಗಳೂರು-ಕೊಯಮತ್ತೂರು, ಮಧುರೈ, ತಿರುಪತಿ, ವಿಜಯವಾಡ ಮತ್ತು ಬೆಳಗಾವಿ ನಡುವೆ ಸೆಪ್ಟೆಂಬರ್ 10 ರಿಂದ ಬಸ್ ಸೇವೆಗಳನ್ನು ಆರಂಭಿಸಲಿದೆ. ಕಂಪನಿಯು 200ಕ್ಕೂ ಹೆಚ್ಚು ಸಂಪರ್ಕಗಳೊಂದಿಗೆ 33 ದಕ್ಷಿಣ ಭಾರತದ ನಗರಗಳಲ್ಲಿ ಬಸ್ ಸೇವೆಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ. ಆರಂಭದ ಕೊಡುಗೆಯಾಗಿ ಬೆಂಗಳೂರಿನಿಂದ ಮತ್ತು ಬೆಂಗಳೂರಿಗೆ ಪ್ರಯಾಣಿಸುವ ಟಿಕೆಟ್‌ಗಳಿಗೆ ₹99 ಬೆಲೆ ನಿಗದಿಪಡಿಸಲಾಗಿದೆ.

FlixBus ದೇಶದಾದ್ಯಂತ 101 ಹೊಸ ನಗರಗಳಲ್ಲಿ 215 ನಿಲ್ದಾಣಗಳೊಂದಿಗೆ ಬಸ್ ಕಾರ್ಯಾಚರಣೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಕರ್ನಾಟಕದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಜರ್ಮನಿಯ ಕಂಪನಿಯನ್ನು ಬೆಂಗಳೂರಿಗೆ ಸ್ವಾಗತಿಸಿದರು. ‌

X ಪೋಸ್ಟ್‌ನಲ್ಲಿ ಎಂಬಿ ಪಾಟೀಲ್‌, “ದಕ್ಷಿಣ ಭಾರತದಲ್ಲಿ ಸೇವೆಯನ್ನು ಪ್ರಾರಂಭಿಸಲಿರುವ @FlixBus ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡಿದ್ದಕ್ಕೆ ಸಂತೋಷವಾಗಿದೆ. 40+ ದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಸಂಸ್ಥೆಯನ್ನು ಇಲ್ಲಿ ಸಾರ್ವಜನಿಕ ಸಾರಿಗೆ ಆಯ್ಕೆಗಳು ಮತ್ತು ಸಂಪರ್ಕವನ್ನು ಹೆಚ್ಚಿಸಲು ಯೋಜಿಲಾಗಿದೆ. ಈ ಪ್ರದೇಶದಾದ್ಯಂತ ಸುಸ್ಥಿರ ಮತ್ತು ಪರಿಣಾಮಕಾರಿ ಪ್ರಯಾಣವನ್ನು ನೀಡುವ ಈ ಬಸ್‌ಗಳನ್ನು ಉದ್ಘಾಟನೆ ಮಾಡಲು ಹೆಮ್ಮೆಪಡುತ್ತೇನೆ. ಕರ್ನಾಟಕಕ್ಕೆ ಸುಸ್ವಾಗತ. ಇದು ಒಂದು ರಾಜ್ಯ, ಹಲವು ಪ್ರಪಂಚಗಳು” ಎಂದು ಟ್ವೀಟ್‌ ಮಾಡಿದ್ದಾರೆ.

ಕಂಪನಿ ತಿಳಿಸಿರುವಂತೆ, ಈ ಬಸ್‌ಗಳು ಆಧುನಿಕ ವೈಶಿಷ್ಟ್ಯಗಳೊಂದಿಗೆ ಪ್ರಯಾಣಿಕರಿಗೆ ಉತ್ತಮ ಸೌಕರ್ಯ ಮತ್ತು ಸುರಕ್ಷತೆಯನ್ನು ನೀಡುತ್ತವೆ. ಪ್ರತಿ ಬಸ್‌ನಲ್ಲಿ ABS (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಎಲ್ಲಾ ಆಸನಗಳಿಗೆ 2-ಪಾಯಿಂಟ್ ಸೀಟ್ ಬೆಲ್ಟ್‌ಗಳಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಲಾಗಿದೆ. ಜಗತ್ತಿನಾದ್ಯಂತ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ ತರುವ ಗುರಿಯನ್ನು ಹೊಂದಿದ್ದೇವೆ ಎಂದು ಕಂಪನಿ ಹೇಳಿದೆ.

ಈ ಸುದ್ದಿ ಓದಿ: ಡಬಲ್‌ ಡೆಕ್ಕರ್‌ ಕೈಬಿಟ್ಟ ಬಿಎಂಟಿಸಿ