Wednesday, 30th October 2024

Food Adulteration: ರಾಜ್ಯದಲ್ಲಿ 230 ಗೋಲ್‌ಗಪ್ಪ ತಯಾರಿಕೆ ಘಟಕಗಳ ಮೇಲೆ ಅಧಿಕಾರಿಗಳ ದಾಳಿ

golgappa

ಬೆಂಗಳೂರು: ಆಹಾರ ಸುರಕ್ಷತಾ (Food Safety) ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ 230 ಗೋಲ್‌ಗಪ್ಪಾ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೀದಿಯಲ್ಲಿ ಮಾರಲಾಗುವ ಪಾನಿಪುರಿ, ಗೋಲ್‌ಗಪ್ಪದ ಸ್ವಚ್ಛತೆ, ಶುದ್ಧತೆಯ ಬಗ್ಗೆ (Food Adulteration) ಅನುಮಾನದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಈ ಸಂದರ್ಭದಲ್ಲಿ ತೆಗೆದುಕೊಳ್ಳಲಾದ 165 ಘಟಕಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಗೊಬ್ಬರ, ಹಾರ್ಪಿಕ್ ಬಳಕೆ ಮಾಡಲಾಗುತ್ತಿರುವ ಕುರಿತಂತೆ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆ ವರದಿ ಆಧರಿಸಿ, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ. ಕೆ.ವೈಷ್ಣವಿ ಅವರು, ರಾಜ್ಯದಲ್ಲಿ ಗೋಲ್‌ಗಪ್ಪ ಘಟಕಗಳಲ್ಲಿ ನೈರ್ಮಲ್ಯ ಕಾಪಾಡಲಾಗುತ್ತಿದೆಯೇ ಮತ್ತು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ವಸ್ತುಗಳನ್ನು ಬಳಸಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ 230 ಗೋಲ್‌ಗಪ್ಪಾ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ 12 ಘಟಕಗಳು ನೈರ್ಮಲ್ಯ ಕಾಪಾಡದೆ ಗೋಲ್‌ಗಪ್ಪ ತಯಾರಿಸುತ್ತಿದ್ದದ್ದು ಕಂಡು ಬಂದಿದ್ದು, ಆ ಘಟಕಗಳ ಮಾಲೀಕರಿಂದ 13000 ರು. ದಂಡ ವಸೂಲಿ ಮಾಡಿ ಕ್ರಮ ಕೈಗೊಂಡಿದ್ದಾರೆ.

ಉಳಿದಂತೆ 165 ಘಟಕಗಳಲ್ಲಿ ಗೋಲ್‌ಗಪ್ಪ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಬಳಸಲಾಗುತ್ತಿದೆಯೇ ಎಂಬುದು ತಿಳಿದು ಬರಲಿದೆ.

ಇದನ್ನೂ ಓದಿ: Viral Video: ಹಾರ್ಪಿಕ್, ಯೂರಿಯಾ ಬಳಸಿ ಪಾನಿಪುರಿ ಮಾಡುತ್ತಿದ್ದ ಇಬ್ಬರ ಬಂಧನ