ವೈ.ಎನ್.ಹೊಸಕೋಟೆ : ಹಿಂದುಳಿದ ಬರನಾಡಾದ ಪಾವಗಡ ತಾಲ್ಲೂಕಿನಲ್ಲಿ ಗಿಡಮರ ಬೆಳೆಸಿ ಪರಿಸರ ಸಂರಕ್ಷಿಸಿ ಅಂತರ್ಜಲ ಹೆಚ್ಚಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಎಸ್.ಎಂ.ಇಂಡೇನ್ ಗ್ಯಾಸ್ ಏಜೆನ್ಸಿಯ ಮಾಲೀಕರಾದ ರಫೀಕ್ ಅಹಮ್ಮದ್ ತಿಳಿಸಿದರು.
ಹೋಬಳಿಯ ಗೌಡತಿಮ್ಮನಹಳ್ಳಿ ಮತ್ತು ಆರ್.ಡಿ.ರೊಪ್ಪ ಗ್ರಾಮಗಳಲ್ಲಿ ೭೫ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿ ಮಾತನಾಡಿದ ಅವರು ಪ್ರಕೃತಿಯ ಅಸಮತೋಲನದಿಂದಾಗಿ ಇಂದು ಕರೋನಾ ಮಹಾಮಾರಿಯಂತಹ ಸಮಸ್ಯೆಗಳು ತಲೆದೋರುತ್ತಿವೆ. ಅವುಗಳಿಂದ ರಕ್ಷಣೆ ಪಡೆಯಲು ಪ್ರಕೃತಿ ಸ್ನೇಹಿಯಾಗಿ ಬಾಳಬೇಕಾಗಿದೆ. ನಮ್ಮ ಪ್ರತಿನಿತ್ಯದ ಬದುಕಿಗೆ ಆಮ್ಲಜನಕ ಅತ್ಯಗತ್ಯವಾಗಿದ್ದು, ಹೆಚ್ಚು ಹೆಚ್ಚು ಗಿಡಗಳನ್ನು ನೆಟ್ಟು ಪರಿಸರ ರಕ್ಷಣೆ ಹಾಗೂ ಅಂತರ್ಜಲ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರೀಕರು ಸ್ವಇಚ್ಚೆಯಿಂದ ದಿನ ನಿತ್ಯದ ನಮ್ಮ ಜೀವನದಲ್ಲಿ ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಪರಿಸರ ಉಳಿಸಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕಾಗಿರುತ್ತದೆ ಎಂದರು.
ಬಯಲುಸೀಮೆಯ ಅತ್ಯಂತ ಹಿಂದುಳಿದ ಪ್ರದೇಶವಾದ ನಮ್ಮ ಈ ಭಾಗದಲ್ಲಿ ಮಳೆಯನ್ನೇ ನಂಬಿ ಅತಿ ಹೆಚ್ಚು ಜನ ರೈತರು ವ್ಯವಸಾಯ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಭೂಗರ್ಭದಲ್ಲಿನ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವ ಕಾರಣ ಕಾಡು ಉಳಿಸಿ ಬೆಳೆಸಿ ಪರಿಸರವನ್ನು ಸಂರಕ್ಷಿಸಬೇಕಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಎಸ್.ಎಂ. ಇಂಡೇನ್ ಗ್ಯಾಸ್ ಏಜೆನ್ಸಿಯ ವತಿಯಿಂದ ಗೌಡತಿಮ್ಮನಹಳ್ಳಿ , ಆರ್.ಡಿ.ರೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಗ್ರಾಮಸ್ವಚ್ಚತೆ, ಗಿಡನಾಟಿ ನೆರವೇರಿಸಲಾಯಿತು. ಸಿಬ್ಬಂದಿಯಾದ ನಾಗಮ್ಮ, ಮಲ್ಲೇಶಪ್ಪ, ಮುನ್ನಾ, ಶಾಹುಲ್, ರವಿ, ಸುಷ್ಮಾ, ಜ್ಯೋತಿ, ಮಾರುತಿ, ಪಿರ್ದೋಸ್, ಗ್ರಾಮಪಂಚಾಯಿತಿ ಸದಸ್ಯ ಈರಣ್ಣ, ಮುಖಂಡ ತಿಪ್ಪೇಸ್ವಾಮಿ ಇನ್ನಿತರರು ಇದ್ದರು.