Sunday, 15th December 2024

KH Srinivas: ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆ.ಎಚ್‌. ಶ್ರೀನಿವಾಸ್‌ ಇನ್ನಿಲ್ಲ

KH Srinivas

ಬೆಂಗಳೂರು: ಶಿವಮೊಗ್ಗ ಹಾಗೂ ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆ.ಎಚ್‌.ಶ್ರೀನಿವಾಸ್‌(KH Srinivas) ನಿಧನ ಹೊಂದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಆ ಮೂಲಕ ರಾಜಕೀಯದ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದೆ.

ಸಾಗರ ತಾಲೂಕು ಕಾನುಗೋಡು ಗ್ರಾಮದವರಾದ ಶ್ರೀನಿವಾಸ್‌ ಆರಂಭದಲ್ಲಿ ಜನತಾ ಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ (Rama Krishna Hegde) ಅವರ ಆಪ್ತರಾಗಿದ್ದ ಶ್ರೀನಿವಾಸ್‌ ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ಹಲವು ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಅವರು ವಕೀಲರಾಗಿ, ಕೃಷಿಕರಾಗಿಯೂ ಜನಪ್ರಿಯರಾಗಿದ್ದರು. ಅಲ್ಲದೆ ಕವನ ಸಂಕಲನಗಳನ್ನೂ ರಚಿಸಿದ್ದ ಅವರು ಸಿನೆಮಾದಲ್ಲೂ ಅಭಿನಯಿಸಿದ್ದರು ಎನ್ನುವುದು ವಿಶೇಷ. ಕೆಲವು ದಿನಗಳ ಹಿಂದೆ ಅನಾರೋಗ್ಯ ಕಾಡಿತ್ತು. ಹೀಗಾಗಿ ಅವರು ಬೆಂಗಳೂರನಲ್ಲಿಯೇ ನೆಲೆಸಿದ್ದರು.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾನುಗೋಡು ಗ್ರಾಮದಲ್ಲಿ 1938ರ ಫೆಬ್ರವರಿ 5ರಂದು ಜನಿಸಿದ್ದ ಅವರು ಸಾಗರ, ಶಿವಮೊಗ್ಗದಲ್ಲಿ ಶಿಕ್ಷಣ ಪಡೆದಿದ್ದರು. ಕೃಷಿಕರಾಗಿ, ವಕೀಲರಾಗಿದ್ದುಕೊಂಡೇ ರಾಜಕೀಯ ಪ್ರವೇಶಿಸಿದ್ದರು. ಕೆಲವು ದಿನಗಳ ಕಾಲ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು.

1978-80ರ ಅವಧಿಯಲ್ಲಿ ಅವರು ಮಾಹಿತಿ, ಯುವಜನ ಸೇವೆಗಳು ಮತ್ತು ಇಂಧನ, ಯೋಜನೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಸಚಿವರಾಗಿದ್ದರು. ಇಂಧನ ಮತ್ತು ಮಾಹಿತಿ ಇಲಾಖೆಯ ಕ್ಯಾಬಿನೆಟ್ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1987-88ರಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿದ್ದ ಅವರು ಬಳಿಕ ವಿಧಾನ ಪರಿಷತ್‌ನ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು. ʼಕಾನುಗೋಡು ಮನೆʼ ಹಾಗೂ ʼಒಳಸೊನ್ನೆ ಹೊರಸೊನ್ನೆʼ, ಜೀನ್ ಪಾಲ್ ಸಾರ್ತ್ರ ಅವರ ನಾಟಕದ ಕನ್ನಡ ಅನುವಾದ ಇವರ ಪ್ರಕಟಿತ ಕೃತಿಗಳು. ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಲ್ಲಿ ಅಧ್ಯಕ್ಷರಾಗಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.