Friday, 20th September 2024

DK Suresh: ಮುನಿರತ್ನ ನೇತೃತ್ವದಲ್ಲಿ ಏಡ್ಸ್ ಸೋಂಕು ಹರಡುವ ಜಾಲ: ಸಮಗ್ರ ತನಿಖೆಗೆ ಡಿ.ಕೆ.ಸುರೇಶ್ ಒತ್ತಾಯ

DK Suresh

ಬೆಂಗಳೂರು: ಮುನಿರತ್ನ (MLA Munirathna) ಅವರ ನೇತೃತ್ವದಲ್ಲಿ ಏಡ್ಸ್ ಸೋಂಕನ್ನು ಅವರ ವಿರೋಧಿಗಳಿಗೆ ಹರಡಿಸುವ ಯತ್ನ ನಡೆದಿದೆ. ಅವರ ನೇತೃತ್ವದಲ್ಲಿ ಸೋಂಕನ್ನು ಹರಡಿಸುವ ಜಾಲವೇ ಸಕ್ರಿಯವಾಗಿದೆ. ಇದರ ವಿರುದ್ಧ ಸರ್ಕಾರ ವಿಶೇಷ ತನಿಖೆ ನಡೆಸಬೇಕು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ (DK Suresh) ಆಗ್ರಹಿಸಿದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರನ್ನೆಲ್ಲಾ ಬಳಸಿಕೊಂಡು ಸೋಂಕನ್ನು ಹರಡಿಸಲಾಗಿದೆ. ಈ ಜಾಲದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವುದು ತನಿಖೆ ಮೂಲಕ ಬಹಿರಂಗಗೊಳಿಸಬೇಕಿದೆ ಎಂದು ತಿಳಿಸಿದರು.

ಬಿಜೆಪಿ- ಜೆಡಿಎಸ್‌ ಅವರಿಂದ ರಾಜಕೀಯ ಬಣ್ಣ

ಜೆಡಿಎಸ್‌ ಹಾಗೂ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಒಕ್ಕಲಿಗ, ದಲಿತ ಹಾಗೂ ಮಹಿಳಾ ಸಮುದಾಯದ ವಿರುದ್ದ ಶಾಸಕ ಮುನಿರತ್ನ ಅವರು ಅವಹೇಳನ ಮಾಡಿದ್ದಾರೆ. ಶಾಸಕರ ಅವಹೇಳನಕಾರಿ ಮಾತುಗಳು ಜಗಜ್ಜಾಹೀರಾಗಿದೆ. ಇದಕ್ಕೆ ಬಿಜೆಪಿಯವರು ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ರಾಜಕೀಯಕ್ಕೂ ಹಾಗೂ ಮುನಿರತ್ನ ಅವರ ಮಾತಿಗೂ ಯಾವುದೇ ಸಂಬಂಧವಿಲ್ಲ ಎಂದು ಆರೋಪಿಸಿದರು.

ಈ ಸುದ್ದಿಯನ್ನೂ ಓದಿ | MB Patil: ಎಂಇಐ ಟ್ರಾನ್ಸ್‌ಫಾರ್ಮರ್‌ ದುರಸ್ತಿ ಕೇಂದ್ರಗಳಿಗೆ ಜಮೀನು ಒದಗಿಸಲು ಕ್ರಮ: ಎಂ.ಬಿ. ಪಾಟೀಲ್‌

ದೂರುದಾರರ ವಿರುದ್ಧ ಸಮುದಾಯದ ಹೆಸರಿನಲ್ಲಿ ಅತಿ ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾರೆ. ದಲಿತ, ಒಕ್ಕಲಿಗ ಮತ್ತು ಮಹಿಳೆಯರನ್ನು ಬಹಳ ಕೀಳಾಗಿ ನೋಡಿದ್ದಾರೆ. ಇದು ರಾಜಕೀಯ ಪ್ರೇರಿತ ಪ್ರಕರಣವಲ್ಲ. ಅವರ ಮನಸ್ಸಿನ ಮಾತುಗಳು. ಈ ರೀತಿ ಮಾತನಾಡಿ ಎಂದು ನಾವು ಹೇಳಿಲ್ಲ. ಹೊಸದಾಗಿ ಮುನಿರತ್ನ ಅವರ ಮೇಲೆ ಅತ್ಯಾಚಾರ ಪ್ರಕರಣವೂ ದಾಖಲಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷಗಳು ಸ್ಪಷ್ಟಪಡಿಸಲಿ. ಆ ನಂತರ ಇದಕ್ಕೆ ಸೂಕ್ತ ಉತ್ತರ ಕೊಡುತ್ತೇವೆ ಎಂದು ಹೇಳಿದರು.

ಸೂಕ್ತ ತನಿಖೆಯಾಗಲಿ

ಅನೇಕ ಹೆಣ್ಣು ಮಕ್ಕಳನ್ನು ಈ ಜಾಲದಲ್ಲಿ ಸಿಲುಕಿಸಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ರೀತಿಯ ಕೃತ್ಯಗಳನ್ನು ನನ್ನ ರಾಜಕೀಯ ಜೀವನದಲ್ಲಿ ಕೇಳಿರಲೇ ಇಲ್ಲ. ವಿದೇಶದಲ್ಲಿ ಈ ರೀತಿಯ ಕೃತ್ಯಗಳು ನಡೆಯುವುದನ್ನು ಕೇಳಿದ್ದೆ. ಇದರ ಬಗ್ಗೆ ಸೂಕ್ತ ತನಿಖೆ ಆಗಬೇಕು. ಇದರ ಮೂಲಕ ಬಿಜೆಪಿಯವರ ಬಣ್ಣವೂ ಬಯಲಾಗಬೇಕು ಎಂದರು.

ಮುನಿರತ್ನ ಅವರ ಹಿಂದೆ ನಿಂತಿರುವ ಸಿ.ಟಿ.ರವಿ, ಆರ್. ಅಶೋಕ್‌ ಹಾಗೂ ಕುಮಾರಸ್ವಾಮಿ ಅವರು ಇದಕ್ಕೆ ಹೇಳಿಕೆ ನೀಡಬೇಕು. ಕಾಂಗ್ರೆಸ್‌ ಅವರ ಮೇಲೆ ಈ ರೀತಿಯ ಅಸ್ತ್ರ ಪ್ರಯೋಗಿಸಿ ಎಂದು ಇವರುಗಳೇ ಕುಮ್ಮಕ್ಕು ನೀಡಿರಬಹುದು ಎಂದು ಆರೋಪಿಸಿದ ಅವರು, ಇದರ ಬಗ್ಗೆಯೂ ಸೂಕ್ತ ತನಿಖೆಯಾಗಬೇಕು ಎಂದು ಹೇಳಿದರು.

ಎರಡೂ ಸಮುದಾಯಗಳ ಸ್ವಾಮೀಜಿಗಳು ಹೋರಾಟ ಮಾಡಬೇಕು

ಸ್ವಾಮೀಜಿಗಳು ಈ ವಿಚಾರದಲ್ಲಿ ಮದ್ಯಪ್ರವೇಶ ಮಾಡಬೇಕೆ ಎಂಬ ಪ್ರಶ್ನೆಗೆ ಉತ್ತರಿಸಿ, ಒಕ್ಕಲಿಗ, ದಲಿತ ಹಾಗೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದರ ಬಗ್ಗೆ ಎರಡೂ ಸಮುದಾಯಗಳ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟವಾಗಬೇಕು. ಇಲ್ಲದಿದ್ದರೆ ದಾರಿಯಲ್ಲಿ ಹೋಗುವವರೆಲ್ಲಾ ಮಾತನಾಡಲು ಪ್ರಾರಂಭ ಮಾಡುತ್ತಾರೆ ಎಂದರು.

ನನ್ನ ಜೀವಮಾನದಲ್ಲಿ ಇಂತಹ ಪದಗಳನ್ನು ಕೇಳಿಲ್ಲ

ನಾನು ನನ್ನ ಜೀವಮಾನದಲ್ಲಿ ಇಂತಹ ಪದಗಳನ್ನು ಕೇಳಿಲ್ಲ. ನಾವುಗಳು ಉತ್ತರಪ್ರದೇಶದಲ್ಲಿ ವಾಸಿಸುತ್ತಿಲ್ಲ. ನಾಗರೀಕತೆಯಿರುವ ಕರ್ನಾಟಕದಲ್ಲಿದ್ದೇವೆ. ಮುನಿರತ್ನ ಮಾಡಿರುವ ಕೃತ್ಯಗಳನ್ನು ಇನ್ನೂ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್‌ ವ್ಯತ್ಯಯ

ಗಣೇಶ ವಿಸರ್ಜನೆ ವೇಳೆ ನಡೆಯುತ್ತಿರುವ ಗಲಾಟೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತಿರಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಕೆಲವು ಕಡೆ ಮಾತ್ರ ಸಂದರ್ಭ ಬಳಸಿಕೊಂಡು ಅಶಾಂತಿ ಸೃಷ್ಟಿ ಮಾಡಲಾಗುತ್ತಿದೆ. ಯಾವುದೇ ಸಮುದಾಯವಿದ್ದರೂ ಅವರ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.