Friday, 22nd November 2024

DK Suresh: ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಬೇಕು ಎಂದ ಡಿ.ಕೆ. ಸುರೇಶ್

DK Suresh

ಬೆಂಗಳೂರು: ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ರಾಜ್ಯದ ಹಿತಕ್ಕೆ ಪೂರಕವಾಗಿಲ್ಲ. ಜನರಿಗೆ ಅಸಹ್ಯವಾಗುತ್ತಿದ್ದು, ಅವರು ಬೀದಿಯಲ್ಲಿ ಕಲ್ಲು ಹೊಡೆಯುವ ಮುನ್ನ ಎಲ್ಲಾ ಪಕ್ಷಗಳ ನಾಯಕರು ಎಚ್ಚೆತ್ತುಕೊಳ್ಳಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ಸಲಹೆ ನೀಡಿದರು. ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಅಭಿವೃದ್ಧಿ ಮಾಡಲಿ ಎಂದು ಜನ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ, ದೇಶದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಅಧಿಕಾರ ನೀಡಿದ್ದಾರೆ. ಆದರೆ ಜನರಿಂದ ಆಯ್ಕೆಯಾದ ನಾಯಕರು ಆರೋಪ, ಪ್ರತ್ಯಾರೋಪ, ದೂಷಣೆ ಮಾಡುತ್ತಾ ಕನ್ನಡಿಗರಿಗೆ ಅಪಮಾನ ಮಾಡುವ ಕೆಲಸ ಮಾಡುತ್ತಿದ್ದಾರೆ. ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವುದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಜವಾಬ್ದಾರಿ. ಅದನ್ನು ಮರೆತು ಈ ರೀತಿ ಕಿತ್ತಾಡುತ್ತಿರುವುದು ಸರಿಯೇ? ಎಂದು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಈ ಸುದ್ದಿಯನ್ನೂ ಓದಿ | MB Patil: ಕರ್ನಾಟಕದಲ್ಲಿ ವಹಿವಾಟು ವಿಸ್ತರಣೆಗೆ ಸನ್ಮಿನಾ, ಲೀಪ್‌ಫೈವ್‌ ಟೆಕ್ನಾಲಜಿ ಆಸಕ್ತಿ: ಎಂ.ಬಿ. ಪಾಟೀಲ

ಚುನಾವಣೆಗೆ ಇನ್ನೂ ಸಾಕಷ್ಟು ಸಮಯವಿದೆ. ಈ ಹೊತ್ತಿನಲ್ಲಿ ಜನ ಅಭಿವೃದ್ಧಿ, ಯುವಕರು, ರೈತರ ಸಮಸ್ಯೆ ಬಗೆಹರಿಸುವ ಕಾರ್ಯಗಳನ್ನು ಎದುರು ನೋಡುತ್ತಿದ್ದಾರೆ. ಈ ಆರೋಪಗಳು ರಾಜ್ಯದ ಜನರಿಗೆ ಎಳ್ಳಷ್ಟೂ ಇಷ್ಟವಿಲ್ಲ. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಜನ ಬೀದಿಯಲ್ಲಿ ಕಲ್ಲು ಹೊಡೆಯುವ ಪರಿಸ್ಥಿತಿ ಎದುರಾಗಲಿದೆ. ಪರಿಸ್ಥಿತಿ ಹೀಗೆ ಮುಂದಿವರಿದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷವಾಗಿರಲಿ ಈ ಪರಿಸ್ಥಿತಿ ಬರಬಹುದು ಎಂದು ಎಲ್ಲಾ ಪಕ್ಷದ ನಾಯಕರಿಗೆ ಎಚ್ಚರಿಸಲು ಬಯಸುತ್ತೇನೆ. ಆರೋಪ ಪ್ರತ್ಯಾರೋಪಗಳನ್ನು ತೀರ್ಮಾನ ಮಾಡಲು ನ್ಯಾಯಾಲಯ ಇದೆ ಎಂದು ಅಭಿಪ್ರಾಯಪಟ್ಟರು.

ಜಿ.ಟಿ.ಡಿ ವಾಸ್ತವಾಂಶದ ಬಗ್ಗೆ ಮಾತನಾಡಿದ್ದಾರೆ

ಜಿ.ಟಿ. ದೇವೇಗೌಡ ಅವರ ಹೇಳಿಕೆ ಕಾಂಗ್ರೆಸ್‌ಗೆ ಆತ್ಮಸ್ಥೈರ್ಯ ತುಂಬಿದೆಯೇ ಎಂದು ಕೇಳಿದಾಗ, “ಇದು ಅವರ ಪಕ್ಷದ ಆಂತರಿಕ ವಿಚಾರ. ಅವರ ಪಕ್ಷದ ನಾಯಕರಿಗೆ ತಮ್ಮ ಅಭಿಪ್ರಾಯ ಹೇಳುವ ಸ್ವಾತಂತ್ರ್ಯವಿದೆ. ಅವರ ಪಕ್ಷದ ನಾಯಕರು ಮಾಡಿದ್ದನ್ನೆಲ್ಲ ಒಪ್ಪಬೇಕು ಎಂದೇನಿಲ್ಲ. ಅವರು ವಾಸ್ತವತೆಯನ್ನು ಹೇಳಿದ್ದಾರೆ. ಇಲ್ಲಿ ಎಲ್ಲ ಪಕ್ಷದವರೂ ಫಲಾನುಭವಿಗಳಿದ್ದು, ಆರೋಪಿಗಳಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರದ ತೀರ್ಮಾನದಂತೆ ಆಗಿದೆ. ಹೀಗಾಗಿ ಇದನ್ನು ಏಕೆ ದೊಡ್ಡದಾಗಿ ಮಾಡಿತ್ತಿದ್ದೀರಿ ಎಂದು ಹೇಳಿದ್ದಾರೆ ಎಂದು ಡಿ ಕೆ ಸುರೇಶ್‌ ಹೇಳಿದರು.

ರಾಮನಗರ ನಂ. 1 ಜಿಲ್ಲೆ ಮಾಡುವ ಗುರಿ

ಚನ್ನಪಟ್ಟಣದಲ್ಲಿ ಸರ್ಕಾರದ ಕಾರ್ಯಕ್ರಮದ ಬಗ್ಗೆ ಕೇಳಿದಾಗ, “ಇದು ಸರ್ಕಾರದ ಜವಾಬ್ದಾರಿ. ಅಲ್ಲಿನ ಶಾಸಕರು ನಿಷ್ಕ್ರೀಯರಾಗಿದ್ದರು. ಈಗ ಅಲ್ಲಿ ಶಾಸಕರು ಇಲ್ಲ. ಹೀಗಾಗಿ ಅಲ್ಲಿನ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿದೆ. ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದಲ್ಲಿ ಸುಮಾರು 20 ಸಾವಿರ ಅರ್ಜಿಗಳು ಬಂದಿದ್ದವು, ಚನ್ನಪಟ್ಟಣ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನದ ಭಾಗ. ಹಿಂದೆ ಸಾತನೂರು ಕ್ಷೇತ್ರದಲ್ಲಿ ಚನ್ನಪಟ್ಟಣದ ಭಾಗವಾಗಿತ್ತು. ಅವರ ರಾಜಕೀಯ ಜೀವನದಲ್ಲಿ ಆ ಜನರ ಕೊಡುಗೆಯೂ ಇದೆ. ರಾಮನಗರ ಜಿಲ್ಲೆಯನ್ನು ರಾಜ್ಯದಲ್ಲಿ ಮೊದಲನೇ ಸ್ಥಾನಕ್ಕೆ ನಿಲ್ಲುವಂತೆ ಮಾಡುವ ಪ್ರಯತ್ನ ಮಾಡುವುದಾಗಿ ನಾನು, ಡಿಸಿಎಂ ಇಬ್ಬರೂ ಹೇಳಿದ್ದೇವೆ. ನಾನು ಸೋತಿದ್ದರೂ ನಮ್ಮ ಗುರಿ ಜಿಲ್ಲೆಯ ಅಭಿವೃದ್ಧಿ. ಈ ನಿಟ್ಟಿನಲ್ಲಿ ನಾಲ್ಕೂ ತಾಲೂಕಿನ ನಾಯಕರು ಕೆಲಸ ಮಾಡುತ್ತಿದ್ದೇವೆ. ಈ ಹಿಂದೆ ಇದ್ದ ಶಾಸಕರು ನಮಗೆ ಸಹಕಾರ ನೀಡುತ್ತಿರಲಿಲ್ಲ ಎಂದು ಆರೋಪಿಸಿದ ಅವರು, ಈಗ ಅಲ್ಲಿ ಶಾಸಕರು ಇಲ್ಲ. ಹೀಗಾಗಿ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ. ಈ ಕ್ಷೇತ್ರದ ಅಭಿವೃದ್ಧಿಗೆ 400 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆʼʼ ಎಂದು ತಿಳಿಸಿದರು.

ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಬೇಕು

ಸಿಎಂ ಅವರು ಮೈಸೂರಲ್ಲಿ ತಾಯಿ ಚಾಮುಂಡೇಶ್ವರಿ ಇನ್ನೂ ಒಂದು ವರ್ಷ ಆಶೀರ್ವಾದ ಮಾಡಲಿ ಎಂಬ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಸಿದ್ದರಾಮಯ್ಯ ಅವರು ನಮ್ಮ ನಾಯಕರು. ಈ ಅವಧಿಯ 5 ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಇರಬೇಕು ಎಂಬುದು ನಮ್ಮ ಬಯಕೆ. ತಾಯಿ ಚಾಮುಂಡಿ ಆಶೀರ್ವಾದದೊಂದಿಗೆ ಸಿದ್ದರಾಮಯ್ಯ ಅವರು ಎಲ್ಲಾ ಆರೋಪಗಳಿಂದ ಮುಕ್ತರಾಗುತ್ತಾರೆ. ಅವರನ್ನು ಯಾರೂ ಅಲ್ಲಾಡಿಸಲು ಆಗುವುದಿಲ್ಲʼʼ ಎಂದು ಡಿ.ಕೆ.ಸುರೇಶ್‌ ತಿಳಿಸಿದರು.

ಈ ಸುದ್ದಿಯನ್ನೂ ಓದಿ | Lakshmi Hebbalkar: ಶ್ರೀ ದುರ್ಗಾದೇವಿ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಜಾತಿ ಗಣತಿ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು

ಜಾತಿ ಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುವ ಬಗ್ಗೆ ಕೇಳಿದಾಗ, “ಜಾತಿ ಗಣತಿ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರ ಜನಗಣತಿ ಘೋಷಣೆ ಮಾಡಿದ್ದು, ಈ ಸಮಯದಲ್ಲೇ ಅಗತ್ಯ ಮಾನದಂಡ ಬಳಸಿ ಸಮೀಕ್ಷೆ ಮಾಡಿದರೆ ಯಾವುದೇ ಗೊಂದಲ ಇರುವುದಿಲ್ಲ. ಹೀಗಾಗಿ ಜನಗಣತಿವರೆಗೂ ಕಾಯುವುದು ಉತ್ತಮ ಎಂದು ಹೇಳುತ್ತೇನೆʼʼ ಎಂದು ಡಿ ಕೆ ಸುರೇಶ್‌ ಹೇಳಿದರು.