Wednesday, 23rd October 2024

DK Suresh: ಅತಿಯಾದ ಆತ್ಮವಿಶ್ವಾಸವೇ ಹರಿಯಾಣ ಚುನಾವಣೆ ಸೋಲಿಗೆ ಕಾರಣ ಎಂದ ಡಿ.ಕೆ. ಸುರೇಶ್

DK Suresh

ಬೆಂಗಳೂರು: ಹರಿಯಾಣ ವಿಧಾನಸಭಾ ಚುನಾವಣೆ (Haryana Assembly Election) ಸೋಲಿಗೆ ಅತಿಯಾದ ಆತ್ಮವಿಶ್ವಾಸ ಕಾರಣ. ಹೈಕಮಾಂಡ್ ಸೋಲಿನ ಬಗ್ಗೆ ಪರಾಮರ್ಶೆ ಮಾಡುತ್ತದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh) ಹೇಳಿದರು. ಸದಾಶಿವನಗರದ ನಿವಾಸದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ ಎನ್ನುವುದಕ್ಕೆ ಇದು ಸಾಕ್ಷಿ ಹಾಗೂ ಉತ್ತಮ ನಿದರ್ಶನ. ಜಮ್ಮು, ಕಾಶ್ಮೀರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚನೆ ಮಾಡುತ್ತದೆ ಎಂದರು.

ಹರಿಯಾಣ ಫಲಿತಾಂಶ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಕೇಳಿದಾಗ, ಈ ಎರಡೂ ರಾಜ್ಯಗಳ ಪರಿಸ್ಥಿತಿ ಬೇರೆ, ಬೇರೆ ರೀತಿಯಿದೆ. ಇವು ಆಯಾ ರಾಜ್ಯಗಳ ಚುನಾವಣೆಯಾಗಿದ್ದು, ಬೇರೆ ರಾಜ್ಯಗಳ ಫಲಿತಾಂಶ ಇವುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳೇ ಬೇರೆ, ಬೇರೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Tumkur News: ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯಲ್ಲಿ ಎಐ ಆಧರಿತ ಎಂಆರ್‌ಐ ಘಟಕ

ಹರಿಯಾಣ ಸೋಲಿಗೆ ಮುಡಾ ಪ್ರಕರಣ ಕಾರಣ ಎನ್ನುವ ಮಾಜಿ ಸಭಾಪತಿ ಕೋಳಿವಾಡ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಕೋಳಿವಾಡ ಅವರ ಹೇಳಿಕೆಗೂ ಹರಿಯಾಣ ಸೋಲಿಗೂ ಸಂಬಂಧವಿಲ್ಲ. ಇದರ ಬಗ್ಗೆ ಪಕ್ಷದ ವರಿಷ್ಠರು ತಿಳಿಸಲಿದ್ದಾರೆ ಎಂದರು. ಇವಿಎಂ ಬಗ್ಗೆ ಮತ್ತೆ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದಾಗ, ಇದರ ಬಗ್ಗೆ ನಮ್ಮ ಎಐಸಿಸಿ ವರಿಷ್ಠರು ಮಾತನಾಡುತ್ತಾರೆ ಎಂದರು.

ಕೆಲಸವಿಲ್ಲದ ಕುಮಾರಸ್ವಾಮಿ ಅವರಿಗೆ ಉತ್ತರ ನೀಡುವುದಿಲ್ಲ

ಮುಡಾ ಪ್ರಕರಣ ಮುಚ್ಚಿ ಹಾಕಲು ಜಾತಿಗಣತಿ ವಿಷಯ ಮುನ್ನಲೆಗೆ ತಂದಿದ್ದಾರೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ಬೆಳಿಗ್ಗೆ ಒಂದು, ಸಂಜೆಯೊಂದು ಮಾತನಾಡುವವರಿಗೆ ನಾವು ಉತ್ತರ ನೀಡುವುದಿಲ್ಲ. ಮಾಧ್ಯಮದವರಿಗೆ ಅವರು ಗಂಭೀರ ವ್ಯಕ್ತಿ ಎನಿಸಬಹುದು, ಆದರೆ ನಮಗಲ್ಲ. ಅವರ ಯಾವುದೇ ಹೇಳಿಕೆಗಳು ನ್ಯಾಯಯುತವಾಗಿರುವುದಿಲ್ಲ. ಅವರಿಗೆ ಕೆಲಸವಿಲ್ಲ, ಅದಕ್ಕೆ ಮಾತನಾಡುತ್ತಾರೆ. ಅವರಿಗೆ ಮೋದಿ ಅವರು ಒಳ್ಳೆ ಕೆಲಸ ಕೊಟ್ಟಿದ್ದಾರೆ, ಅದನ್ನು ಬಿಟ್ಟು ಕರ್ನಾಟಕದ ವಿಚಾರದಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ನಾವೆಲ್ಲ ಸಿದ್ದರಾಮಯ್ಯ ಅವರ ಬೆನ್ನಿಗೆ ಇದ್ದೇವೆ

ಮಹದೇವಪ್ಪ, ಸತೀಶ್ ಜಾರಕಿಹೊಳಿ ಭೇಟಿ ವಿಚಾರದ ಬಗ್ಗೆ ಕೇಳಿದಾಗ, “ಮಹದೇವಪ್ಪ ಹಿರಿಯ ಸಚಿವರು. ಪರಮೇಶ್ವರ್ ಅವರು ಪ್ರಮುಖ ಖಾತೆ ಹೊಂದಿರುವವರು, ಇವರುಗಳು ರಾಜಕೀಯ ಹೊರತಾಗಿ ಸೇರಿದ್ದಾರೆ. ಈಗಾಗಲೇ ಸರ್ಕಾರದ 136 ಶಾಸಕರು, ಸಿದ್ದರಾಮಯ್ಯ ಅವರ ಬೆನ್ನಿಗೆ ಇದ್ದಾರೆ ಎನ್ನುವ ಸಂದೇಶವನ್ನು ನಾವು ಕೊಟ್ಟಿದ್ದೇವೆ ಎಂದು ತಿಳಿಸಿದರು.

ಖರ್ಗೆ ಅವರ ಭೇಟಿಯ ನಂತರ ಸಿಎಂ ಬದಲಾವಣೆ ವಿಚಾರ ಮುನ್ನಲೆಗೆ ಬಂದಿದೆ ಎಂದಾಗ, ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಜ್ಯದವರು, ಕೆಪಿಸಿಸಿ ಅಧ್ಯಕ್ಷರು ಅವರನ್ನು ಗೌರವಯುತವಾಗಿ ಭೇಟಿಯಾಗಿದ್ದಾರೆ. ಭೇಟಿಯಾಗುವುದು ಪಕ್ಷದ ಶಿಸ್ತು ಎಂದರು.

ಈ ಸುದ್ದಿಯನ್ನೂ ಓದಿ | Free Training: ಯುವ ಜನರೇ ಗಮನಿಸಿ; ಕೋಳಿ ಸಾಕಾಣಿಕೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ

ಕಾಂಗ್ರೆಸ್ ಸರ್ಕಾರವನ್ನು ನಾವು ಬೀಳಿಸುವುದಿಲ್ಲ, ಅವರೇ ಕಿತ್ತಾಡಿಕೊಂಡು ಸರ್ಕಾರ ಬಿದ್ದು ಹೋಗುತ್ತದೆ ಎನ್ನುವ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, “ಅವರುಗಳು ಇದೇ ಗುಂಗಿನಲ್ಲಿರಲಿ” ಎಂದರು. ಜಾತಿ ಗಣತಿ ಬಗ್ಗೆ ಕೇಳಿದಾಗ “ಇದರ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದು, ಸಚಿವ ಸಂಪುಟದ ಮುಂದಿಟ್ಟು ನಂತರ ಏನು ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ” ಎಂದು ಹೇಳಿದರು.