Friday, 22nd November 2024

Fraud Case: ಮನೆ ಕೊಡುವುದಾಗಿ ನಂಬಿಸಿ ಅಂಧ ದಂಪತಿಗೆ 13 ಲಕ್ಷ ರೂ. ವಂಚಿಸಿದ ಮಹಿಳೆ!

Fraud Case

ತುಮಕೂರು: ಮನೆ ಮಾರಾಟ ಮಾಡುವುದಾಗಿ ನಂಬಿಸಿ ಮಹಿಳೆಯೊಬ್ಬಳು ಅಂಧ ದಂಪತಿಯಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸಿದ ಪ್ರಕರಣವು ಇಲ್ಲಿನ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಂಧ ಅಣ್ಣಪ್ಪ ಗಾದ್ರಿ ಹಾಗೂ ಮಮತಾ ವಂಚನೆಗೊಳಗಾದ ದಂಪತಿ. ಶಿಲ್ಪಾ ಎಂಬಾಕೆಯಿಂದ ವಂಚನೆಗೆ (Fraud Case) ಒಳಗಾಗಿದ್ದಾರೆ.

ಮೂಲತಃ ಚಿತ್ರದುರ್ಗದವರಾದ ಅಣ್ಣಪ್ಪ, ಇಲ್ಲಿನ ಗಾಂಧಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅಣ್ಣಪ್ಪ ಎಸ್‌ಬಿಐ ಬ್ಯಾಂಕ್ ನೌಕರ, ಪತ್ನಿ ಮಮತಾ, ಪಾಲಿಕೆಯ ನೌಕರಳಾಗಿದ್ದಾಳೆ. ಹಲವು ವರ್ಷಗಳಿಂದ ತುಮಕೂರಿನ ಗಾಂಧಿನಗರದ ಬಾಡಿಗೆ ಮನೆಯಲ್ಲಿದ್ದಾರೆ. ನಗರದಲ್ಲೊಂದು ಸ್ವಂತ ಸೂರು ಹೊಂದಬೇಕು ಎಂಬ ಕನಸು ಕಂಡಿದ್ದ ದಂಪತಿ ಇದೇ ವೇಳೆ ತುಮಕೂರಿನ ಚಂದ್ರಮೌಳೇಶ್ವರ ಬಡಾವಣೆ ನಿವಾಸಿಯಾಗಿರುವ ಶಿಲ್ಪಾ ಎಂಬಾಕೆ 60 ಲಕ್ಷ ರುಪಾಯಿಗೆ ಮನೆ ಮಾರಾಟ ಮಾಡುವ ಬಗ್ಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Job Guide: ನಬಾರ್ಡ್‌ನಲ್ಲಿ ಉದ್ಯೋಗಾವಕಾಶ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

ಆ ಮನೆ ಖರೀದಿಸಲು ಮುಂದಾಗಿದ್ದ ಅಣ್ಣಪ್ಪ ದಂಪತಿ 2022 ರಲ್ಲಿ ಶಿಲ್ಪಾ ಮನೆ ಅಗ್ರಿಮೆಂಟ್ ಮಾಡಿಸಿಕೊಳ್ಳುವ ವೇಳೆ ದಂಪತಿಯಿಂದ 13 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆದರೆ ಹಣ ಪಡೆದು ಬಳಿಕ ಮನೆಯನ್ನು ಬೇರೊಬ್ಬರಿಗೆ ಮಾರಾಟ ಮಾಡಿರುವ ಆರೋಪಿ ಮಹಿಳೆ ಇತ್ತ ಹಣ ವಾಪಸ್ ಕೊಡದೇ ಅತ್ತ ಮನೆಯೂ ಇಲ್ಲದೆ ವಂಚನೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಕಳೆದೆರಡು ವರ್ಷಗಳಿಂದ ಹಣಕ್ಕಾಗಿ ಅಲೆದಾಡಿ ಸುಸ್ತಾಗಿ ಕಣ್ಣೀರುಡುತ್ತಿರುವ ಅಂಧ ದಂಪತಿ ಕಂಗಾಲಾಗಿದ್ದಾರೆ. ಅಣ್ಣಪ್ಪ ಕುಟುಂಬಕ್ಕೆ ಹಣ ಕೊಡದೇ ಫೋನ್ ಕರೆಗೂ ಸಿಗದೆ ತಲೆಮರೆಸಿಕೊಂಡು ಆರೋಪಿ ಮಹಿಳೆ ತಿರುಗಾಡುತ್ತಿದ್ದಾರೆ. ಈ ಬಗ್ಗೆ ಕ್ಯಾತಸಂದ್ರ ಪೊಲೀಸ್ ಠಾಣೆಗೆ ದೂರು ನೀಡಿ, ಎಫ್.ಐ.ಆರ್. ದಾಖಲಿಸಿದ್ದಾರೆ. ಠಾಣೆಗೆ ಶಿಲ್ಪ ರನ್ನು ಕರೆಸಿದರೂ ಹಣ ವಾಪಸ್ಸು ಕೊಡಿಸದೇ ವಂಚನೆ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.