Friday, 22nd November 2024

Free Electricity: ಅಂಗನವಾಡಿಗಳಿಗೂ ಉಚಿತ ವಿದ್ಯುತ್: ಸಿಎಂ ಭರವಸೆ

cm siddaramaiah

ಮೈಸೂರು: ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಉಚಿತವಾಗಿ ವಿದ್ಯುತ್‌ ಮತ್ತು ನೀರಿನ ಸೌಲಭ್ಯವನ್ನು ಈಗಾಗಲೇ ರಾಜ್ಯ ಸರ್ಕಾರ ಕಲ್ಪಿಸಿದೆ. ಇದೀಗ ಅಂಗನವಾಡಿಗಳಿಗೂ ಉಚಿತ ವಿದ್ಯುತ್ (Free Electricity) ಪೂರೈಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಮಾತನಾಡಿದ್ದಾರೆ. ರಾಜ್ಯ ಸರ್ಕಾರ ಶಾಲೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಅದೇ ರೀತಿ ಅಂಗನವಾಡಿಗಳಿಗೂ ವಿದ್ಯುತ್ ಉಚಿತವಾಗಿ ನೀಡಬೇಕು ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಪುಷ್ಪ ಅಮರ್ನಾಥ್ ಅವರು ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದರು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಇಡೀ ರಾಜ್ಯದಲ್ಲಿ ಎಷ್ಟು ಅಂಗನವಾಡಿಗಳಿವೆ, ಎಷ್ಟು ವೆಚ್ಚ ತಗುಲುತ್ತಿದೆ ಎನ್ನುವ ಬಗ್ಗೆ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದರು. ವರದಿ ಬಳಿಕ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಅಂಗನವಾಡಿಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸೂಚನೆ

ಅಂಗನವಾಡಿ ಕೇಂದ್ರಗಳಿಗೆ ನಿಯಮಿತವಾಗಿ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಬೇಕು. ತಪಾಸಣೆ ವೇಳೆ ಕಂಡು ಬಂದ ಮಾಹಿತಿಯಂತೆ ಅಪೌಷ್ಟಿಕತೆ ಕಡಿಮೆ ಮಾಡಲು ಅಗತ್ಯವಾದ ಪ್ರೋಟೀನ್ ಮತ್ತು ವಿಟಮಿನ್ ಗಳನ್ನು ಸರಬರಾಜು ಮಾಡಬೇಕು ಎನ್ನುವ ಸೂಚನೆ ನೀಡಿದರು. ಇನ್ನು ಜಿಲ್ಲೆಯಲ್ಲಿರುವ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬಡವರಿಗೆ, ನಿಜವಾದ ಅರ್ಹರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳು, ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದ್ದರಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನರ್ಹರು ಯೋಜನೆಯ ದುರುಪಯೋಗ ಪಡೆಯದಂತೆ, ಅರ್ಹರಿಗೆ ಅನ್ಯಾಯ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಖಡಕ್ಕಾಗಿ ಸೂಚನೆ ನೀಡಿದರು.

ಅಂಗನವಾಡಿಗಳಿಗೆ ಸೂಕ್ತ ಗುಣಮಟ್ಟದ ಆಹಾರಗಳು ತಲುಪುತ್ತಿದೆಯೇ, ಆಹಾರದ ಗುಣಮಟ್ಟದ ಬಗ್ಗೆ ನಿಯಮಿತವಾಗಿ ಪರೀಕ್ಷೆ ಮಾಡಲಾಗುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ದಸರಾ ವೇಳೆ ಪ್ರವಾಸಿಗರಿಗೆ ತೊಂದರೆ ಆಗದಂತೆ ಬಸ್‌ ಸೌಕರ್ಯ ಕಲ್ಪಿಸಿ: ಸಿಎಂ ಸೂಚನೆ

ಮೈಸೂರು: ನಾಡ ಹಬ್ಬ ದಸರಾ ಸಂದರ್ಭದಲ್ಲಿ (Mysuru Dasara 2024) ಪ್ರವಾಸಿಗರಿಗೆ ತೊಂದರೆ ಆಗದಂತೆ ಸೂಕ್ತ ಬಸ್‌ ವ್ಯವಸ್ಥೆ ಕಲ್ಪಿಸಬೇಕು. ಅದೇ ರೀತಿ ಶಾಲೆಗಳಿಗೆ ಹೋಗುವ ಗ್ರಾಮೀಣ ಭಾಗದ ಮಕ್ಕಳು ಮತ್ತು ಶಿಕ್ಷಕಿಯರಿಗೆ ತೊಂದರೆ ಆಗದಂತೆ ಬಸ್ ಸವಲತ್ತು ಕಲ್ಪಿಸಬೇಕು ಎಂದು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಮಾತನಾಡಿದ್ದು, ದಸರಾ ವೇಳೆ ಮೈಸೂರಿಗೆ ಲಕ್ಷಾಂತರ ಜನ ಆಗಮಿಸುವ ಹಿನ್ನೆಲೆಯಲ್ಲಿ ಸೂಕ್ತ ಬಸ್‌ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ | Kasturirangan Report: ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸಲು ಉಳಿದಿರುವುದ 3 ದಿನ ಮಾತ್ರ! ಆಕ್ಷೇಪ ಸಲ್ಲಿಸುವುದು ಹೇಗೆ?

ಚಾಮರಾಜನಗರ, ಮೈಸೂರು ಜಿಲ್ಲೆಗಳಿಗೆ ಅಗತ್ಯ ಇರುವಷ್ಟು 66/11 ಕೆವಿ ಪವರ್ ಸ್ಟೇಷನ್‌ಗಳನ್ನು ಆರಂಭಿಸಬೇಕು. ಇನ್ನು”ಯುವ ನಿಧಿ ಪಡೆಯುತ್ತಿರುವ ಪ್ರತಿಯೊಬ್ಬರೂ ಕೌಶಲ ಅಭಿವೃದ್ಧಿ ಕಾರ್ಯಾಗಾರಗಳಲ್ಲಿ ತೊಡಗಿಸಿಕೊಳ್ಳಬೇಕು. ಅವರ ಕೌಶಲ ಅಭಿವೃದ್ಧಿಯಾಗಿ ಉದ್ಯೋಗ ಸಿಗುವಂತಾಗಬೇಕು. ಈ ಬಗ್ಗೆ ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ನಿಗಾ ವಹಿಸಬೇಕು ಎಂದು ಸಿಎಂ ಸೂಚಿಸಿದರು.